PSL ಅಂದ್ರೆ ಪಾಕಿಸ್ತಾನ ಸೂಪರ್ ಲೀಗ್ ಅಲ್ಲ ಪೆಟ್ರೋಲ್ ಶಾರ್ಟೇಜ್ ಲೀಗ್... ಪಾಕ್ ಮಾನ ಮತ್ತೆ ಹರಾಜು!
- ಪಾಕಿಸ್ತಾನ ಸೂಪರ್ ಲೀಗ್ (PSL) ಮಾರ್ಚ್ 26 ರಿಂದ ಪ್ರಾರಂಭವಾಗಲಿದೆ
- ಈ ಬಾರಿ ಪ್ರೇಕ್ಷಕರಿಗೆ ಮೈದಾನದಲ್ಲಿ ಪಂದ್ಯಗಳನ್ನು ನೇರವಾಗಿ ವೀಕ್ಷಿಸಲು ಅವಕಾಶವಿರುವುದಿಲ್ಲ
- ಪಂದ್ಯಗಳನ್ನು ಲಾಹೋರ್ ಮತ್ತು ಕರಾಚಿ ಕ್ರೀಡಾಂಗಣಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ
- ಪಾಕಿಸ್ತಾನದ ಈ ಹೀನಾಯ ಸ್ಥಿತಿಯನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ
PSL : ಪಾಕಿಸ್ತಾನ ಸೂಪರ್ ಲೀಗ್ (PSL) ಮಾರ್ಚ್ 26 ರಿಂದ ಅಂದರೆ, ಐಪಿಎಲ್ಗೂ ಎರಡು ದಿನಗಳ ಮುಂಚಿತವಾಗಿಯೇ ಪ್ರಾರಂಭವಾಗಲಿದೆ. ಆದರೆ, ಈ ಬಾರಿ ಪ್ರೇಕ್ಷಕರಿಗೆ ಮೈದಾನದಲ್ಲಿ ಪಂದ್ಯಗಳನ್ನು ನೇರವಾಗಿ ವೀಕ್ಷಿಸಲು ಅವಕಾಶವಿರುವುದಿಲ್ಲ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ, ಪಿಎಸ್ಎಲ್ ಪಂದ್ಯಗಳನ್ನು ಖಾಲಿ ಕ್ರೀಡಾಂಗಣಗಳಲ್ಲಿ ನಡೆಸಲಾಗುವುದು ಎಂದು ಹೇಳಿದ್ದಾರೆ. ಅಲ್ಲದೆ, ಪಂದ್ಯಗಳನ್ನು ಲಾಹೋರ್ ಮತ್ತು ಕರಾಚಿ ಕ್ರೀಡಾಂಗಣಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ.
ಮಧ್ಯಪ್ರಾಚ್ಯದಲ್ಲಿ ಯುದ್ಧ ಮುಂದುವರಿದಿರುವ ಪರಿಣಾಮ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ತೈಲ ಬಿಕ್ಕಟ್ಟು ಉದ್ಭವಿಸಿದೆ. ಪಾಕಿಸ್ತಾನ ಕೂಡ ಇದಕ್ಕೆ ಹೊರತಾಗಿಲ್ಲ. ಹೀಗಾಗಿ, ಅಲ್ಲಿನ ಸರ್ಕಾರ ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿರುವುದಾಗಿ ಮೊಹ್ಸಿನ್ ನಖ್ವಿ ಭಾನುವಾರ (ಮಾರ್ಚ್ 22) ಹೇಳಿದರು.
ಇಂಧನ ಬಿಕ್ಕಟ್ಟು ಉಂಟಾಗಿರುವ ಹಿನ್ನೆಲೆಯಲ್ಲಿ ಜನರು ತಮ್ಮ ಓಡಾಡವನ್ನು ಮಿತಿಗೊಳಿಸುವಂತೆ ಪ್ರಧಾನಿ ಶೆಹಬಾಜ್ ಷರೀಫ್ ಕೇಳಿಕೊಂಡಿದ್ದಾರೆ ಎಂದು ನಖ್ವಿ ಹೇಳಿದರು. ಶಾಲೆಗಳನ್ನು ಈಗಾಗಲೇ ಮುಚ್ಚಲಾಗಿದೆ. ಹಲವು ಪ್ರದೇಶಗಳಲ್ಲಿ ಮನೆಯಿಂದಲೇ ಕೆಲಸ ಮಾಡಲಾಗುತ್ತಿದೆ. ಅಲ್ಲದೆ, ಈದ್ ರಜಾದಿನಗಳನ್ನು ಸಹ ವಿಸ್ತರಿಸಲಾಗಿದೆ ಎಂದ ನಖ್ವಿ, ಈ ಯುದ್ಧ ಇನ್ನೂ ಎಷ್ಟು ಕಾಲ ಮುಂದುವರಿಯುತ್ತದೆ ಎಂಬುದು ತನಗೆ ತಿಳಿದಿಲ್ಲ ಎಂದರು.
ಭದ್ರತಾ ಸಂಸ್ಥೆಗಳೊಂದಿಗೆ ಚರ್ಚಿಸಿದ ನಂತರ, ಪಿಎಸ್ಎಲ್ ವೇಳಾಪಟ್ಟಿಯ ಪ್ರಕಾರವೇ ನಡೆಯಲಿದೆ ಎಂದು ಹೇಳಿದರು. ಆದರೆ, ಪ್ರಸ್ತುತ ಬಿಕ್ಕಟ್ಟಿನಿಂದಾಗಿ, ಪಂದ್ಯಗಳು ಪ್ರೇಕ್ಷಕರಿಲ್ಲದೆ ನಡೆಯಲಿವೆ. ಪಂದ್ಯಾವಳಿಯ ಉದ್ಘಾಟನಾ ಸಮಾರಂಭವನ್ನು ಸಹ ರದ್ದುಗೊಳಿಸಲಾಗಿದೆ ಎಂದು ನಖ್ವಿ ಹೇಳಿದರು. ಯಾವಾಗ ನಖ್ವಿ ಈ ಹೇಳಿಕೆ ನೀಡಿದರೋ ಪಾಕಿಸ್ತಾನ ವಿರುದ್ಧ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ. ಈಗಾಗಲೇ ಬಿಕಾರಿಯಾಗಿರುವ ದೇಶದಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ಟ್ರೋಲ್ ಮಾಡುತ್ತಿದ್ದಾರೆ.
ಒಂದು ಹೆಜ್ಜೆ ಮುಂದೆ ಹೋದ ಐಸ್ಲ್ಯಾಂಡ್ ಕ್ರಿಕೆಟ್
ಟ್ರೋಲ್ ಮಾಡುವುದರಲ್ಲಿ ಒಂದು ಹೆಜ್ಜೆ ಮುಂದೆ ಹೋಗಿರುವ ಐಸ್ಲ್ಯಾಂಡ್ ಕ್ರಿಕೆಟ್, ಪಿಎಸ್‌ಎಲ್ ಬರುತ್ತಿದೆ. ಇದು ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳಿಗೆ ಬಹಳಷ್ಟು ಉತ್ಸಾಹವನ್ನು ತರುತ್ತದೆ. ಪಿಎಸ್‌ಎಲ್ ಎಂದರೆ ಏನು ಎಂದು ನಾವು ಯಾವಾಗಲೂ ಆಶ್ಚರ್ಯ ಪಡುತ್ತಿದ್ದೆವು. ಈಗ ಅದು ನಿಜವಾಗಿಯೂ 'ಪೆಟ್ರೋಲ್ ಶಾರ್ಟೇಜ್ ಲೀಗ್' ಎಂದು ನಮಗೆ ತಿಳಿದಿದೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ಐಸ್ಲ್ಯಾಂಡ್ ಕ್ರಿಕೆಟ್, ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದೆ.
ಪಾಕ್ ಮಾನ ಹರಾಜು
ಸಾಮಾಜಿಕ ಜಾಲತಾಣದಲ್ಲಿ ಅನೇಕರು ಪಾಕ್ ಮಾನವನ್ನು ಹರಾಜು ಹಾಕುತ್ತಿದ್ದಾರೆ. ಕೇವಲ ಎರಡು ಪ್ರದೇಶಗಳಲ್ಲಿ ಮಾತ್ರ ಪಿಎಸ್ಎಲ್ ನಡೆಯಲಿದೆ. ಇಡೀ ಪಿಎಸ್ಎಲ್ ಅನ್ನು ಪ್ರೇಕ್ಷರಿಲ್ಲದೇ ನಡೆಸಲಾಗುತ್ತದೆ. ಯಾವುದೇ ಉದ್ಘಾಟನಾ ಕಾರ್ಯಕ್ರಮ ಇಲ್ಲ, ಈವರೆಗೂ ಯಾವುದೇ ವಿದೇಶಿ ಆಟಗಾರರು ಬಂದಿಲ್ಲ. ಐಪಿಎಲ್ ಆಡಲು ಈಗಾಗಲೇ ಅನೇಕ ಆಟಗಾರರು ಪಿಎಸ್ಎಲ್ನಿಂದ ಹಿಂದೆ ಸರಿದಿದ್ದಾರೆ ಎಂದೆಲ್ಲ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಈ ಮೂಲಕ ಪಾಕಿಸ್ತಾನದ ಮಾನವನ್ನು ಜಾಗತಿಕವಾಗಿ ಹರಾಜು ಹಾಕುತ್ತಿದ್ದಾರೆ, (ಏಜೆನ್ಸೀಸ್).