ಪಾಕ್ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್
- ಐಪಿಎಲ್ 19ನೇ ಆವೃತ್ತಿಗೆ ಇನ್ನೇನು ಕೆಲವೇ ದಿನಗಳು ಬಾಕಿ
- ಐಪಿಎಲ್ ಮತ್ತು ಪಿಎಸ್‌ಎಲ್ ಬಗ್ಗೆ ಪಾಕ್ ಮಾಜಿ ಕ್ರಿಕೆಟಿಗ ಮಾತು
IPL: ಐಪಿಎಲ್ 19ನೇ ಆವೃತ್ತಿಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಕ್ರಿಕೆಟ್ ಪ್ರಿಯರಿಗಂತು ಭರಪೂರ ಮನರಂಜನೆ ಫಿಕ್ಸ್ ಆಗಿದೆ. ಇದೇ ಮಾ.18ರಿಂದ ಶುರುವಾಗಲಿರುವ ಬಹು ಜನಪ್ರಿಯ ಟಿ20 ಲೀಗ್ಗೆ ದೊಡ್ಡ ಸಂಖ್ಯೆಯ ಅಭಿಮಾನಿ ಬಳಗವೇ ಇದೆ. ಕ್ರಿಕೆಟ್ ಜಗತ್ತಿನಲ್ಲಿ ನಡೆಯುವ ಯಾವುದೇ ಟಿ20 ಲೀಗ್ಗೂ ಈ ಮಟ್ಟಿಗಿನ ಅಭಿಮಾನ ಮತ್ತು ಕ್ರೇಜ್ ಇಲ್ಲವೇ ಇಲ್ಲ ಎಂಬುದು ನಿಜಕ್ಕೂ ಗಮನಾರ್ಹ.
ಕೇವಲ ಮನರಂಜನೆಯಲ್ಲಿ ಮಾತ್ರವಲ್ಲ, ಪ್ರತಿ ವರ್ಷ ಅತಿ ಹೆಚ್ಚು ವೀಕ್ಷಣೆ, ಟಿಕೆಟ್ ಖರೀದಿ ಮತ್ತು ಲಾಭದ ಹೊಳೆಯನ್ನೇ ನೋಡುವ ಇಂಡಿಯನ್ ಪ್ರೀಮಿಯರ್ ಲೀಗ್, ಪಾಕಿಸ್ತಾನವನ್ನು ಹೊರತುಪಡಿಸಿ ಇನ್ನುಳಿದ ದೇಶಗಳ ಕ್ರಿಕೆಟ್ ಆಟಗಾರರನ್ನು ತನ್ನ ಫ್ರಾಂಚೈಸಿಗೆ ಆಯ್ಕೆ ಮಾಡಿಕೊಳ್ಳುತ್ತದೆ. ದುಬಾರಿ ಹಣಕ್ಕೆ ಬಿಡ್ ಆಗುವ ವಿದೇಶಿಯ ಸ್ಟಾರ್ ಕ್ರಿಕೆಟಿಗರು, ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ಮೂಲಕ ಹೆಚ್ಚಿನ ಜನಪ್ರಿಯತೆ ಗಳಿಸುವುದು ಡಬಲ್ ಧಮಾಕಾ ಎಂದೇ ಹೇಳಬಹುದು. ಇದನ್ನೆಲ್ಲ ದೂರದಿಂದಲೇ ನೋಡಿ ಉರಿದುಬೀಳುವ ಪಾಕಿಸ್ತಾನಕ್ಕೆ, ಸಪ್ಪೆ ಮುಖ ಬಿಟ್ಟರೆ ಬೇರೇನೂ ಉಳಿದಿಲ್ಲ.
2008ರಲ್ಲಿ ಮುಂಬೈನ ತಾಜ್ ಹೋಟೆಲ್ ಮೇಲಿನ ಪಾಕ್ ಉಗ್ರರ ದಾಳಿಯನ್ನು ಖಂಡಿಸಿ, ಬಿಸಿಸಿಐ ಪಾಕ್ ಕ್ರಿಕೆಟಿಗರನ್ನು ಐಪಿಎಲ್ನಿಂದ ಹೊರಗಿಟ್ಟಿತು. ಅಂದಿನಿಂದ, ಭಾರತದ ಮೇಲೆ ಕಿಡಿಕಾರುತ್ತಲೇ ಇದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಐಪಿಎಲ್‌ಗೆ ಟಕ್ಕರ್ ಕೊಡಲು ಪಿಎಸ್‌ಎಲ್ ಅನ್ನು ಪ್ರಾರಂಭಿಸಿತು. ಆದರೆ, ಭಾರತದಷ್ಟು ಜನಪ್ರಿಯತೆ, ಲಾಭ ಮತ್ತು ಆಟಗಾರರ ಲಭ್ಯತೆ ತಮ್ಮ ಲೀಗ್ಗೆ ಸಿಗುತ್ತಿಲ್ಲ ಎಂಬ ಹೊಟ್ಟೆಕಿಚ್ಚು ಪಾಕ್ ಆಟಗಾರರಿಗೆ ಸದಾ ಕಾಡುತ್ತಲೇ ಇರುತ್ತದೆ. ಇದಕ್ಕೆ ಸಾಕ್ಷಿ, ಇತ್ತೀಚೆಗೆ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಶಾಕಿಂಗ್ ಹೇಳಿಕೆ.
"ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಆಟಗಾರರು ಪಿಎಸ್‌ಎಲ್ ತೊರೆದು ಐಪಿಎಲ್‌ಗೆ ಸೇರುತ್ತಿರುವ ರೀತಿ ನೋಡಿದರೆ, ಪಿಎಸ್‌ಎಲ್ ಇನ್ನೂ ಎಷ್ಟು ದಿನ ಉಳಿಯಲು ಸಾಧ್ಯ ಎಂದು ಅನಿಸಿದೆ. ಇದು ಹೀಗೇ ಮುಂದುವರಿದರೆ, ಪಿಎಸ್‌ಎಲ್ ಶೀಘ್ರದಲ್ಲೇ ಅಂತ್ಯಗೊಳ್ಳಲಿದೆ. ಏಕೆಂದರೆ, ಲೋಕಲ್ ಪ್ಲೇಯರ್ಗಳ ಆಟವನ್ನು ನೋಡಲು ಯಾರೂ ಬಯಸುವುದಿಲ್ಲ. ಕ್ರಿಕೆಟ್ ಪ್ರಿಯರನ್ನು ಆಕರ್ಷಿಸಲು ನಮ್ಮಲ್ಲಿ ಆಂತಹ ಗುಣಮಟ್ಟದ ಪ್ರತಿಭೆಗಳು ಇಲ್ಲ" ಎಂದಿದ್ದಾರೆ.