ನವದೆಹಲಿ: ಟೀಮ್ ಇಂಡಿಯಾದ ಯುವ ಬ್ಯಾಟರ್ ಪೃಥ್ವಿ ಶಾ ಹಾಗೂ ದಿಗ್ಗಜ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ನಡುವೆ ಈಗ ದೊಡ್ಡ ವಾಕ್ಸಮರ ಶುರುವಾಗಿದೆ. ಪೃಥ್ವಿ ಶಾ ಅವರ ವೃತ್ತಿಜೀವನ ಹಾಳಾಗಲು ಅವರ ಜೀವನಶೈಲಿಯೇ ಕಾರಣ ಎಂದು ಯೋಗರಾಜ್ ಸಿಂಗ್ ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಪೃಥ್ವಿ ಶಾ ಫುಲ್ ಗರಂ ಆಗಿದ್ದಾರೆ. ತಮ್ಮ ವೈಯಕ್ತಿಕ ಜೀವನದ ಬಗ್ಗೆ ಇಲ್ಲಸಲ್ಲದ ಮಾತನಾಡಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಯೋಗರಾಜ್ ಸಿಂಗ್, ಪೃಥ್ವಿ ಶಾ ಅವರ ಪರಿಸ್ಥಿತಿಯನ್ನು ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಲಿಗೆ ಹೋಲಿಸಿದ್ದರು. "ಪೃಥ್ವಿ ಶಾ ವೃತ್ತಿಜೀವನ ಏಕೆ ಹೀಗಾಯಿತು? ಹಿಂದೆ ವಿನೋದ್ ಕಾಂಬ್ಲಿಗೂ ಇದೇ ಆಗಿತ್ತು. ಲೇಟ್ ನೈಟ್ ಪಾರ್ಟಿಗಳು, ಹುಡುಗಿಯರ ಸಹವಾಸ, ಸಿಗರೇಟು ಮತ್ತು ಮದ್ಯಪಾನವೇ ಇದಕ್ಕೆಲ್ಲ ಕಾರಣ. ಕೆಟ್ಟ ಸಂಗಾತಿಗಳೊಂದಿಗೆ ಸೇರಿ ಮದ್ಯಪಾನ ಮಾಡುತ್ತಾ ಹೋದರೆ ಕಾಂಬ್ಲಿಗಾದ ಗತಿಯೇ ಶಾಗೂ ಆಗುತ್ತದೆ" ಎಂದು ಯೋಗರಾಜ್ ಸಿಂಗ್ ನೇರವಾಗಿ ಟೀಕಿಸಿದ್ದರು.
ಯೋಗರಾಜ್ ಸಿಂಗ್ ಅವರ ಈ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಪೃಥ್ವಿ ಶಾ ಸಿಡಿದೆದ್ದಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಯೋಗರಾಜ್ ಸಿಂಗ್ ವಿಡಿಯೋ ಹಂಚಿಕೊಂಡು, ಸುದೀರ್ಘ ಪೋಸ್ಟ್ ಮೂಲಕ ತಿರುಗೇಟು ನೀಡಿದ್ದಾರೆ.
"ನನ್ನ ಹಿಂದಿನ ಜೀವನಶೈಲಿ ಸರಿ ಇರಲಿಲ್ಲ ಎಂಬುದು ನನಗೂ ಗೊತ್ತು, ಅದನ್ನು ಮುಚ್ಚಿಡುವ ಅಥವಾ ನಾಚಿಕೆಪಡುವ ಅಗತ್ಯ ನನಗಿಲ್ಲ. ಅದು ನನ್ನ ಜೀವನದ ಒಂದು ಭಾಗ. ಆದರೆ, ನನ್ನ ಹೆಸರು ಮತ್ತು ವೈಯಕ್ತಿಕ ಜೀವನವನ್ನು ಬಳಸಿಕೊಂಡು ಉದ್ದೇಶಪೂರ್ವಕವಾಗಿ ನಕಾರಾತ್ಮಕತೆ ಹರಡುವುದನ್ನು ಅಥವಾ ಪ್ರಚಾರ ಪಡೆಯುವುದನ್ನು ನಾನು ಸಹಿಸುವುದಿಲ್ಲ" ಎಂದು ಶಾ ಕಿಡಿಕಾರಿದ್ದಾರೆ.
ತಮ್ಮ ಪೋಸ್ಟ್‌ನಲ್ಲಿ ಎಲ್ಲಿಯೂ ಯೋಗರಾಜ್ ಸಿಂಗ್ ಹೆಸರನ್ನು ನೇರವಾಗಿ ಬರೆಯದಿದ್ದರೂ, ಅವರಿಗೆ ಸರಿಯಾಗಿಯೇ ಚಾಟಿ ಬೀಸಿರುವ ಶಾ, "ಅಭಿಪ್ರಾಯ ಹೇಳುವುದಕ್ಕೂ, ಸುಳ್ಳು ಮತ್ತು ಮಾನಹಾನಿಕರ ವಿಷಯಗಳ ಮೂಲಕ ಒಬ್ಬರನ್ನು ಟಾರ್ಗೆಟ್ ಮಾಡುವುದಕ್ಕೂ ಬಹಳ ವ್ಯತ್ಯಾಸವಿದೆ.
ನನ್ನ ಮೌನವನ್ನು ಯಾರೂ ದೌರ್ಬಲ್ಯ ಎಂದು ಭಾವಿಸಬೇಡಿ. ಇದನ್ನು ಸ್ಪಷ್ಟ ಮತ್ತು ಅಂತಿಮ ಎಚ್ಚರಿಕೆ ಎಂದು ತಿಳಿದುಕೊಳ್ಳಿ. ಇಂತಹ ಕೆಲಸ ಮಾಡುವ ಯಾವುದೇ ವ್ಯಕ್ತಿ ಅಥವಾ ವೇದಿಕೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ, (ಏಜೆನ್ಸೀಸ್).