ಪ್ರೀತಿ ಜಿಂಟಾ ಮತ್ತು ಅರ್ಷದೀಪ್ ಸಿಂಗ್  
ಕ್ರಿಕೆಟ್

ಪ್ರೀತಿ ಜಿಂಟಾ ಅಪ್ಪುಗೆಗೆ ಕುಣಿದಾಡಿದ ಅರ್ಷದೀಪ್​! ಬಾಲಿವುಡ್​ ನಟಿಯ ಫ್ಯಾನ್​ ಬಾಯ್​ ಕ್ಷಣ ವೈರಲ್

ಚಂಡೀಗಢ: ನಿನ್ನೆ (ಏ.19) ನಡೆದ ಲಖನೌ ಸೂಪರ್​ ಜೈಂಟ್ಸ್​ ವಿರುದ್ಧ ಐಪಿಎಲ್​ 19ನೇ ಆವೃತ್ತಿಯ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಭರ್ಜರಿ ಗೆಲುವು ದಾಖಲಿಸಿತು. ಈ ಮೂಲಕ ಲೀಗ್​ನಲ್ಲಿ ತನ್ನ ಸತತ ಗೆಲುವಿನ ಓಟವನ್ನು ಮುಂದುವರಿಸಿದೆ. 54 ರನ್‌ಗಳಿಂದ ಎಲ್​ಎಸ್​ಜಿಗೆ ಸೋಲಿನ ದಾರಿ ತೋರಿದ ಶ್ರೇಯಸ್​ ಅಯ್ಯರ್​ ಪಡೆಗೆ ಮೈದಾನದಲ್ಲಿ ಸಂಭ್ರಮವೋ ಸಂಭ್ರಮ. ಇದೇ ವೇಳೆ, ಬಾಲಿವುಡ್​ ನಟಿಯ ಅಪ್ಪಟ ಅಭಿಮಾನಿಯೊಬ್ಬನ ದೃಶ್ಯ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
20 ಓವರ್​ನಲ್ಲಿ 7 ವಿಕೆಟ್​ ನಷ್ಟಕ್ಕೆ ಪಂಜಾಬ್ ಕಿಂಗ್ಸ್​ ಸೆಟ್​ ಮಾಡಿದ 254 ರನ್​ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಎಲ್​ಎಸ್​ಜಿ ಪಡೆಗೆ ಗೆಲುವು ಅತ್ಯಂತ ಕಠಿಣ ಎಂಬುದು ಸ್ಪಷ್ಟವಾಯಿತು. 5 ವಿಕೆಟ್​ ಕಳೆದುಕೊಂಡು 200 ರನ್ ಗಳಿಸಿದ ಲಖನೌ ಸೂಪರ್​ ಜೈಂಟ್ಸ್​, ಕಡೆಗೂ ಶ್ರೇಯಸ್​ ಅಯ್ಯರ್ ಪಡೆ ಎದುರು ಮಂಡಿಯೂರಿತು. ಈ ಪಂದ್ಯ ಮುಗಿದ ಬಳಿಕ ತಮ್ಮ ತಂಡದ ಓನರ್​ ಜೊತೆ ಕೆಲ ಸಮಯ ಸಂಭಾಷಣೆ ನಡೆಸಿದ ಅರ್ಷದೀಪ್ ಸಿಂಗ್​, ಸ್ಟಾರ್​ ನಟಿಯಿಂದ ಅಪ್ಪುಗೆ ಪಡೆಯುತ್ತಿದ್ದಂತೆ ಮೈದಾದನಲ್ಲೇ ಕುಣಿದಾಡಿದರು.
ಮೊಹಮ್ಮದ್​ ಶಮಿ, ಅರ್ಷದೀಪ್​ ಮತ್ತು ಪ್ರೀತಿ ಜಿಂಟಾ, ಪಂದ್ಯದ ಬಳಿಕ ಮಾತುಕತೆಯಲ್ಲಿ ತೊಡಗಿದ್ದರು. ಈ ವೇಳೆ, ಅರ್ಷದೀಪ್​ರನ್ನು ತಬ್ಬಿಕೊಂಡ ನಟಿ, ಶಭಾಷ್​ಗಿರಿ ಕೊಟ್ಟರು. ಒಬ್ಬ ಫ್ಯಾನ್​ ಬಾಯ್​ ಕ್ಷಣವನ್ನು ನೆನಪಿಸಿದ ಪಂಜಾಬ್​ ವೇಗಿ, ಖುಷಿಯಿಂದ ಮೈದಾನದಲ್ಲಿ ಸಂಭ್ರಮಿಸಿದ್ದು ನೋಡಿಗರ ಗಮನ ಸೆಳೆಯಿತು. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.