- ಸನ್ರೈಸರ್ಸ್ ಹೈದರಾಬಾದ್ ಮುಂದೆ ಸೋಲಿಗೆ ಶರಣಾದ ರಾಜಸ್ಥಾನ ರಾಯಲ್ಸ್
- ಮೊದಲ ಪಂದ್ಯದಲ್ಲೇ, ಮೊದಲ ಓವರ್ನಲ್ಲೇ ಅಪರೂಪದ ದಾಖಲೆ
- ಯುವ ವೇಗಿ ಪ್ರಫುಲ್ ಹಿಂಗೆ ತೆಗೆದುಕೊಂಡ ಮೂರು ವಿಕೆಟ್‌ಗಳ ಸಾಧನೆ
Praful Hinge: ನಿನ್ನೆ (ಏ.13) ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದಲ್ಲಿ ಇಶಾನ್ ಕಿಶನ್ ಪಡೆ 57 ರನ್ಗಳ ಭಾರೀ ಅಂತರದಲ್ಲಿ ಗೆಲುವು ನೋಡಿತು. ಸತತ ಗೆಲುವುಗಳಿಂದ ತಮ್ಮ ಬಲವನ್ನೇ ಮರೆತಿದ್ದ ಆರ್ಆರ್ ಕಡೆಗೂ ಐಪಿಎಲ್ 19ನೇ ಆವೃತ್ತಿಯಲ್ಲಿ ತನ್ನ ಮೊದಲ ಸೋಲನ್ನು ಕಂಡಿತು.
ಎಸ್ಆರ್ಎಚ್ ನೀಡಿದ 217 ರನ್ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ ಪರ ಎಂದಿನಂತೆ ವೈಭವ್ ಸೂರ್ಯವಂಶಿ ಮತ್ತು ಯಶಸ್ವಿ ಜೈಸ್ವಾಲ್ ಕಣಕ್ಕಿಳಿದರು. ಆದರೆ, ಈ ಬಾರಿ ಒಬ್ಬರಿಂದ ಅಲ್ಲ ಇಬ್ಬರಿಂದಲೂ ಕಳಪೆ ಪ್ರದರ್ಶನ ಬಂದಿದ್ದು ಆಶ್ಚರ್ಯ. ಮೊದಲ ಬಾಲ್ಗೆ ಡಕ್ಔಟ್ ಆದ ಸೂರ್ಯವಂಶಿ, ಅತ್ಯಂತ ಕಳಪೆಯಾಗಿ ಆಡಿದ್ದು ತಂಡಕ್ಕೆ ಮತ್ತು ಅಭಿಮಾನಿಗಳಿಗೆ ಶಾಕ್ ನೀಡಿತು. ಮತ್ತೊಂದೆಡೆ, ತನ್ನ ಚೊಚ್ಚಲ ಐಪಿಎಲ್ ಪಂದ್ಯದಲ್ಲೇ ಅಪರೂಪದ ದಾಖಲೆಗೆ ಸಾಕ್ಷಿಯಾದ ಯುವ ವೇಗಿ ಬಗ್ಗೆ ಇದೀಗ ಕ್ರಿಕೆಟ್ ಪ್ರೇಮಿಗಳ ಕುತೂಹಲ ಕೆರಳಿಸಿದೆ.
ವೈಭವ್ರನ್ನು ಮೊದಲ ಬಾಲ್ಗೆ ಡಕ್ಔಟ್ ಮಾಡಿದ ಪ್ರಫುಲ್ ಹಿಂಗೆ, ದ್ವಿತೀಯ ಇನ್ನಿಂಗ್ಸ್ನ ಮೊದಲ ಓವರ್ನಲ್ಲೇ ಬರೋಬ್ಬರಿ ಮೂರು ಬಹುಮುಖ್ಯ ವಿಕೆಟ್ಗಳನ್ನು ಪಡೆಯುವ ಮೂಲಕ 19 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಅಪರೂಪದ ದಾಖಲೆ ನಿರ್ಮಿಸಿದರು. ಇಲ್ಲಿಯವರೆಗೆ, ಅಂತಾರಾಷ್ಟ್ರೀಯ ಹಾಗೂ ಅನುಭವಿ ಬೌಲರ್ಗಳೇ ಮಾಡದ ಈ ಸಾಧನೆಯನ್ನು ಈತ ಮಾಡಿದ್ದು, ಸದ್ಯ ಅನೇಕರ ಮೆಚ್ಚುಗೆ, ಪ್ರಶಂಸೆಗೆ ಪಾತ್ರವಾಗಿದೆ.
ಮೊದಲ ಓವರ್ನಲ್ಲೇ ವೈಭವ್ ಸೂರ್ಯವಂಶಿ, ಧ್ರುವ್ ಜುರೆಲ್ ಮತ್ತು ಲುವಾನ್-ಡ್ರೆ ಪ್ರಿಟೋರಿಯಸ್ ವಿಕೆಟ್ ಪಡೆದ ಪ್ರಫುಲ್, ಈ ಓವರ್ನಲ್ಲಿ ಕೊಟ್ಟಿದ್ದು ಕೇವಲ ಒಂದೇ ಒಂದು ರನ್ ಎಂಬುದು ಗಮನಾರ್ಹ. ಅವರ ನಂತರದಲ್ಲಿ ಮತ್ತೊಬ್ಬ ವೇಗಿ ಶಕಿಬ್ ಹುಸೈನ್ ಕೂಡ ತಮ್ಮ ಚೊಚ್ಚಲ ಪಂದ್ಯದಲ್ಲೇ ಕಮಾಲ್ ಮಾಡಿದ್ದು ವಿಶೇಷ. 4 ಓವರ್ಗಳನ್ನು ಪೂರ್ತಿಯಾಗಿ ಮುಗಿಸಿದ ಪ್ರಫುಲ್, 34 ರನ್ ಕೊಟ್ಟು 4 ವಿಕೆಟ್ ಕಬಳಿಸಿದರೆ, ಹುಸೈನ್ 24 ರನ್ ನೀಡಿ 4 ವಿಕೆಟ್ ಪಡೆದು ತಂಡದ ಪರ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ತಂಡವು ಬೃಹತ್ ಸ್ಕೋರ್ ಅನ್ನೇ ಗಳಿಸಿತು. 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 216 ರನ್ ಗಳಿಸಿತು. ಈ ದೊಡ್ಡ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ಪಡೆ, 19 ಓವರ್‌ಗಳಲ್ಲಿ 159 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ, ಹೈದರಾಬಾದ್ 57 ರನ್‌ಗಳಿಂದ ಭಾರೀ ಅಂತರದ ಗೆಲುವು ಸಾಧಿಸಿತು. ಈ ಸೀಸನ್ನಲ್ಲಿ ಹೈದರಾಬಾದ್ ತಂಡಕ್ಕೆ ಇದು ಎರಡನೇ ಜಯ.