ವೈಭವ್ ಸೂರ್ಯವಂಶಿ, ಪ್ರಫುಲ್ ಹಿಂಗೆ (ಬಲ)
- ಐಪಿಎಲ್ ಚೊಚ್ಚಲ ಪಂದ್ಯದಲ್ಲೇ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಯುವ ವೇಗಿ ಪ್ರಪುಲ್ ಹಿಂಗೆ
- ಮೊದಲ ಓವರ್‌ನಲ್ಲೇ 1 ರನ್ ಕೊಟ್ಟು 3 ವಿಕೆಟ್
- 4 ಓವರ್ ಮಾಡಿದ ವೇಗಿ ಕೊಟ್ಟಿದ್ದು 34 ರನ್, ಪಡೆದಿದ್ದು 4 ವಿಕೆಟ್
- ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ ಪ್ರಫುಲ್ ಬಿಚ್ಚಿಟ್ಟ ಅಚ್ಚರಿ ಸಂಗತಿಗಳಿವು
Praful Hinge: ಏ.13ರಂದು ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದಲ್ಲಿ ಇಶಾನ್ ಕಿಶನ್ ಪಡೆ 57 ರನ್ಗಳ ಭರ್ಜರಿ ಗೆಲುವು ದಾಖಲಿಸಿತು. ಚೇಸಿಂಗ್ನಲ್ಲಿ ಎಸ್ಆರ್ಎಚ್ ಬೌಲರ್ಗಳ ಬೆವರಿಳಿಸಲು ಅಖಾಡಕ್ಕಿಳಿದ ಆರ್ಆರ್ ತಂಡದ ವೈಭವ್ ಸೂರ್ಯವಂಶಿ, ಧ್ರುವ್ ಜ್ಯುರೆಲ್ರಂತಹ ಸ್ಫೋಟಕ ಬ್ಯಾಟರ್ಗಳನ್ನು ಮೊದಲ ಓವರ್‌ನಲ್ಲೇ ಪೆವಿಲಿಯನ್ಗೆ ಕಳುಹಿಸಿದ ಯುವ ವೇಗಿ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಆಗಿದ್ದಾರೆ.
ದ್ವಿತೀಯ ಇನ್ನಿಂಗ್ಸ್ನಲ್ಲಿ 217 ರನ್ಗಳನ್ನು ಬೆನ್ನತ್ತಿದ ರಾಜಸ್ಥಾನ ಪಡೆಯ ಆರಂಭಿಕ ಬ್ಯಾಟರ್ ವೈಭವ್ ಸೂರ್ಯವಂಶಿಯನ್ನು ಗೋಲ್ಡನ್ ಡಕ್ಗೆ ಪೆವಿಲಿಯನ್ಗೆ ಕಳುಹಿಸಿದ ಎಸ್ಆರ್ಎಚ್ ವೇಗಿ ಪ್ರಫುಲ್ ಹಿಂಗೆ, ಒಂದೆರೆಡು ನಿಮಿಷ ಕ್ರಿಕೆಟ್ ಪ್ರೇಮಿಗಳನ್ನು ಬೆರಗಾಗಿಸಿದರು. ಪ್ರತಿ ಪಂದ್ಯದಲ್ಲೂ ಮೊದಲ ಓವರ್, ಮೊದಲ ಬಾಲ್ಗೆ ಸಿಕ್ಸರ್ ಅಥವಾ ಬೌಂಡರಿ ಬಾರಿಸುತ್ತಿದ್ದ ಸೂರ್ಯವಂಶಿ, ಅದೇ ಮೊದಲ ಬಾಲ್ಗೆ ಡಕ್ಔಟ್ ಆಗಿದ್ದು ನಂಬಲು ಅಸಾದ್ಯ ಎನ್ನುವಂತಾಯಿತು. ಇದು ಆರ್ಆರ್ ತಂಡಕ್ಕೂ ದೊಡ್ಡ ಶಾಕ್ ನೀಡಿತು.
ಇನ್ನು 19 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಮೊದಲ ಓವರ್‌ನಲ್ಲಿ ಮೂರು ವಿಕೆಟ್‌ಗಳನ್ನು ಪಡೆದ ಏಕೈಕ ಬೌಲರ್ ಆಗಿ ಪ್ರಫುಲ್ ಹಿಂಗೆ ಎಲ್ಲರ ಗಮನ ಸೆಳೆದಿದ್ದಾರೆ. ಒಟ್ಟಾರೆಯಾಗಿ, ಈ ಪಂದ್ಯದಲ್ಲಿ ನಾಲ್ಕು ವಿಕೆಟ್‌ಗಳನ್ನು ಪಡೆದು ರಾಜಸ್ಥಾನ ರಾಯಲ್ಸ್ ತಂಡದ ಮೊದಲ ಸೋಲಿಗೆ ಪ್ರಮುಖ ಕಾರಣರಾದ ಹಿಂಗೆ, ಚೊಚ್ಚಲ ಪಂದ್ಯದಲ್ಲೇ ಉತ್ತಮ ಪ್ರದರ್ಶನ ನೀಡಿದ ಕಾರಣ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಬಾಚಿಕೊಂಡರು.
ಪ್ರಶಸ್ತಿ ಪಡೆದ ಬೆನ್ನಲ್ಲೇ ತಮ್ಮ ಬೌಲಿಂಗ್ ಮೋಡಿ ಹಿಂದಿರುವ ಬ್ರಹ್ಮಾಂಡ ಶಕ್ತಿ ಬಗ್ಗೆ ಮಾತನಾಡಿದ ಅವರು, ಮೊದಲಿಗೆ ಈ ಅವಾರ್ಡ್ ಅನ್ನು ನನ್ನ ಕುಟುಂಬಕ್ಕೆ ಅರ್ಪಿಸುವೆ. ನಾನು ಈ ಹಂತಕ್ಕೆ ಬಂದಿದ್ದೇನೆ ಎಂದರೆ ಅದಕ್ಕೆ ಪೋಷಕರ ಹಲವು ತ್ಯಾಗಗಳೇ ಕಾರಣ. ಅವರಿಂದಲೇ ನಾನೀಗ ಈ ಮಟ್ಟದಲ್ಲಿದ್ದೇನೆಂದು ಹೇಳಿದರು. ಇನ್ನು ತಮ್ಮ ಯಶಸ್ಸಿನ ಬಗ್ಗೆ ಮಾತನಾಡುತ್ತಾ, ನಿಜಕ್ಕೂ ಈ ಯಶಸ್ಸನ್ನು ಮೊದಲೇ ನಿರೀಕ್ಷಿಸಿದ್ದೆ ಎಂದು ಶಾಕಿಂಗ್ ಹೇಳಿಕೆಯನ್ನು ನೀಡಿದರು.
ಕಳೆದ ವರ್ಷ ನಾನು ನನ್ನ ಮೊದಲ ಐಪಿಎಲ್ ಪಂದ್ಯವನ್ನು ಆಡುತ್ತೇನೆ ಮತ್ತು 4-5 ವಿಕೆಟ್‌ಗಳನ್ನು ಪಡೆಯುತ್ತೇನೆ ಎಂದು ಒಂದು ಪೇಪರ್ ಮೇಲೆ ಬರೆದಿದ್ದೆ. ಅಂದರೆ ಮ್ಯಾನಿಫೆಸ್ಟ್ ಮಾಡಿಕೊಂಡಿದ್ದೆ. ನೋಡಿದರೆ, ಅದು ಅಂದುಕೊಂಡಂತೆ ಈ ವರ್ಷ ಸಂಭವಿಸಿದೆ. ಪವರ್ ಪ್ಲೇನಲ್ಲಿ ಸಾಧ್ಯವಾದಷ್ಟು ಪ್ರಾಬಲ್ಯ ಸಾಧಿಸಿದ್ದೇನೆ. ದೇವರಲ್ಲಿ ಅಪಾರ ನಂಬಿಕೆ ಇಟ್ಟಿದ್ದೇನೆ. ವೈಭವ್ ಸೂರ್ಯವಂಶಿ ವಿಕೆಟ್ ನನಗೆ ತುಂಬಾ ಖುಷಿ ಕೊಟ್ಟಿತು. ಕಾರಣ, ಅವರು ಸೂಪರ್ ಫಾರ್ಮ್‌ನಲ್ಲಿದ್ದರು. ಹೀಗಾಗಿ, ನನ್ನ ತಂಡದ ಕೆಲವರಿಗೆ ಮೊದಲೇ ಹೇಳಿದ್ದೆ. ಬೌನ್ಸರ್ ಅಥವಾ ಬೇರೆ ರೀತಿಯಲ್ಲಿ ವೈಭವ್ರನ್ನು ನಾನೇ ಔಟ್ ಮಾಡುತ್ತೇನೆ ಎಂದು. ಕಡೆಗೂ ನಾನೇ ಪೆವಿಲಿಯನ್ಗೆ ಕಳುಹಿಸಿದ್ದು ಸಂತಸ ತಂದಿತು ಎಂದಿದ್ದಾರೆ,(ಏಜೆನ್ಸೀಸ್).