ಕಾಮನ್ವೆಲ್ತ್ ಗೇಮ್ಸ್ ಪದಕ ವಿಜೇತರನ್ನು ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ
ನವದೆಹಲಿ: ಹಲವು ಪ್ರಮುಖ ಕ್ರೀಡೆಗಳ ಗೈರಿನಲ್ಲೂ ಗ್ಲಾಸ್ಗೋ ಕಾಮನ್ವೆಲ್ತ್ ಗೇಮ್ಸ್ನಲ್ಲಿ (
) ಭರ್ಜರಿ ಪದಕ ಬೇಟೆಯಾಡಿದ ಭಾರತದ ಕ್ರೀಡಾಪಟುಗಳು ಭಾನುವಾರ ಪ್ರಧಾನಿ ನರೇಂದ್ರ ಮೋದಿ (
) ಅವರನ್ನು ಭೇಟಿಯಾದರು. ಈ ವೇಳೆ ಪ್ರಧಾನಿ ಮೋದಿ, ಕ್ರೀಡಾಪಟುಗಳ ಸಾಧನೆಯನ್ನು ಕೊಂಡಾಡಿ ಅಭಿನಂದನೆ ಸಲ್ಲಿಸಿದರು. "ಆಡುವವರು ಅರಳುತ್ತಾರೆ' ಎಂದು ಮೋದಿ ಕ್ರೀಡಾಪಟುಗಳನ್ನು ಶ್ಲಾಘಿಸಿದ್ದಾರೆ.
ಗ್ಲಾಸ್ಗೋ ಕಾಮನ್ವೆಲ್ತ್ ಗೇಮ್ಸ್ ಮುಕ್ತಾಯಗೊಂಡ ಒಂದು ವಾರದ ಬಳಿಕ ಪದಕ ವಿಜೇತ ಕ್ರೀಡಾಪಟುಗಳು, ಪ್ರಧಾನಿ ಅವರ ನಿವಾಸಕ್ಕೆ ತೆರಳಿ ಭೇಟಿಯಾದರು. ಈ ವೇಳೆ ಕ್ರೀಡಾಪಟುಗಳೊಂದಿಗೆ ಮೋದಿ ಸಂವಾದವನ್ನೂ ನಡೆಸಿದರು. ಪದಕ ವಿಜೇತರಿಗೆ ಸಿಹಿಯನ್ನೂ ವಿತರಿಸಿ ಸಂಭ್ರಮಿಸಿದರು.
ಭೇಟಿಯ ನಂತರ ಮೋದಿ, ಕ್ರೀಡಾಪಟುಗಳ ಜತೆಗಿನ ರೀಲ್ಸ್ (ಶಾರ್ಟ್ ವಿಡಿಯೊ) ಒಂದನ್ನು ಇನ್ಸ್ಟಾಗ್ರಾಮ್, ಎಕ್ಸ್ ಸಹಿತ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಕೂಡಲೆ ಈ ವಿಡಿಯೋ ವೈರಲ್ ಆಗಿದೆ.
ಚಿನ್ನದ ಪದಕ ವಿಜೇತ ಬಾಕ್ಸರ್ ಸಾಕ್ಷಿ ಚೌಧರಿ ಮಾಡಿರುವ ಈ ಸೆಲ್ಫಿ ವಿಡಿಯೋದಲ್ಲಿ ಮೋದಿ ಜತೆಗೆ ಇತರ ಪದಕ ವಿಜೇತ ಕ್ರೀಡಾಪಟುಗಳು ಕಾಣಿಸಿಕೊಂಡಿದ್ದಾರೆ. "ನಮ್ಮ ಪ್ರಧಾನ ಮಂತ್ರಿಗಳು, ಕಾಮನ್ವೆಲ್ತ್ ಗೇಮ್ಸ್ನಲ್ಲಿ ಪದಕ ಗೆದ್ದ ಎಲ್ಲರನ್ನೂ ಇಂದು ಸ್ವಾಗತಿಸಿದರು. ಇದು ನಮಗೆಲ್ಲರಿಗೂ ಹೆಮ್ಮೆ ತಂದಿದೆ. ನಾವು ಈ ಭೇಟಿಯನ್ನು ಅತ್ಯಂತ ಆನಂದಿಸಿದೆವು. ಮತ್ತು ಅವರು ಅತ್ಯಂತ ವಿನಮ್ರರು' ಎಂದು ಸಾಕ್ಷಿ ಚೌಧರಿ ಈ ವಿಡಿಯೋದ ಆರಂಭದಲ್ಲಿ ಹೇಳಿದ್ದಾರೆ. ಬಳಿಕ ಪ್ರಧಾನಿ ಮೋದಿ, "ಯಾರು ಆಡುತ್ತಾರೋ, ಅವರು ಅರಳುತ್ತಾರೆ. (ಜೋ ಖೇಲೇಗಾ, ವೋ ಖಿಲೇಗಾ) ಯಾವಾಗಲೂ ಭಾರತವನ್ನು ಹುರಿದುಂಬಿಸಿ' ಎಂದು ಹೇಳಿದ್ದಾರೆ. ಜತೆಗೆ "ಭಾರತ್ ಮಾತಾಕಿ' ಎಂದು 3 ಬಾರಿ ಉದ್ಘೋಷ ಹಾಕಿದ್ದು, ಕ್ರೀಡಾಪಟುಗಳೆಲ್ಲರೂ ಜೈ' ಎಂದಿದ್ದಾರೆ.
ಗ್ಲಾಸ್ಗೋ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತ 13 ಚಿನ್ನ, 17 ಬೆಳ್ಳಿ, 9 ಕಂಚಿನ ಸಹಿತ ಒಟ್ಟು 39 ಪದಕಗಳನ್ನು ಗೆದ್ದುಕೊಂಡಿತ್ತು. ಈ ಪೈಕಿ ಬಾಕ್ಸಿಂಗ್ನಲ್ಲಿ ಸರ್ವಾಧಿಕ 7 ಚಿನ್ನ, 3 ರಜತ ಸಹಿತ ಒಟ್ಟು 10 ಪದಕಗಳನ್ನು ಜಯಿಸಿತ್ತು. ಕೇಂದ್ರ ಸರ್ಕಾರ ತನ್ನ ಕ್ರೀಡಾನೀತಿಯ ಅನ್ವಯ ಈಗಾಗಲೆ ಎಲ್ಲ ಪದಕ ವಿಜೇತರಿಗೆ ಕ್ರಮವಾಗಿ 30 (ಚಿನ್ನ), 20 (ಬೆಳ್ಳಿ) ಮತ್ತು 10 (ಕಂಚು) ಲಕ್ಷ ರೂ. ಬಹುಮಾನವನ್ನು ವಿತರಿಸಿದೆ.