2026ರ ಐಪಿಎಲ್ ತಂಡದ ನಾಯಕರು
- ಮಾ.28ರಿಂದ ಐಪಿಎಲ್ 19ನೇ ಆವೃತ್ತಿ ಆರಂಭ
- ನಾಲ್ವರು ಆಸೀಸ್ ಆಟಗಾರರು ಅಲಭ್ಯ
- ಪ್ಯಾಟ್ ಕಮ್ಮಿನ್ಸ್ ಅನುಪಸ್ಥಿತಿಯಲ್ಲಿ ಇಶಾನ್ ಕಿಶನ್
IPL 2026: ಐಪಿಎಲ್ 19ನೇ ಆವೃತ್ತಿಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಉದ್ಘಾಟನಾ ಪಂದ್ಯವು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ. ಈ ಮಧ್ಯೆ, ಸ್ಟಾರ್ ಆಟಗಾರರ ಅಲಭ್ಯತೆ ಕಾಡುತ್ತಿದ್ದು, ನಾಲ್ವರು ಆಸ್ಟ್ರೇಲಿಯಾ ಕ್ರಿಕೆಟಿಗರು ಅದಾಗಲೇ ತಮ್ಮ ತಮ್ಮ ತಂಡಗಳಿಗೆ ಕೈಕೊಟ್ಟಿರುವುದು ಸದ್ಯ ಫ್ರಾಂಚೈಸಿಗಳ ಲೆಕ್ಕಾಚಾರಗಳನ್ನೇ ತಲೆಕೆಳಗಾಗಿಸಿವೆ.
ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್, ಆರ್‌ಸಿಬಿ ವೇಗಿ ಜೋಶ್ ಹೇಜಲ್ವುಡ್, ಕೆಕೆಆರ್ ವೇಗಿ ಮಿಚೆಲ್ ಸ್ಟಾರ್ಕ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಬೌಲರ್ ನಾಥನ್ ಎಲ್ಲಿಸ್ ತಮ್ಮ ತಂಡಗಳಿಂದ ದೂರ ಉಳಿದಿದ್ದಾರೆ. ಇಂಜುರಿ ಕಾರಣಗಳನ್ನು ಕೊಟ್ಟಿರುವ ಆಸ್ಟ್ರೇಲಿಯಾ ಆಟಗಾರರು ಸದ್ಯ ಐಪಿಎಲ್ನಿಂದ ಕೆಲ ಸಮಯ ದೂರ ಉಳಿದಿದ್ದಾರೆ. ಇದು ಕ್ರಿಕೆಟ್ ಪ್ರೇಮಿಗಳ ಪಿತ್ತವನ್ನು ನೆತ್ತಿಗೇರಿಸಿದೆ.
2027ರ ಏಕದಿನ ವಿಶ್ವಕಪ್ ಮತ್ತು ಇತರೆ ಲೀಗ್ಗಳನ್ನು ಗಮನದಲ್ಲಿಟ್ಟುಕೊಂಡು ಆಸ್ಟ್ರೇಲಿಯಾ ಕ್ರಿಕೆಟ್ ಇಂತಹ ಕೆಲಸ ಮಾಡಿದೆ. ಐಪಿಎಲ್ನಲ್ಲಿ ಆಡುವುದಾಗಿ ತಮ್ಮ ಫ್ರಾಂಚೈಸಿಗಳಿಂದ ಹಣ ಪಡೆದ ಆಟಗಾರರಿಗೆ ಬಿಸಿಸಿಐ ತಕ್ಕ ಪಾಠ ಕಲಿಸಬೇಕು. ಇಷ್ಟ ಬಂದಂತೆ ಕಾರಣಗಳನ್ನು ಹೇಳಿ ಹೋಗುವುದು ಎಷ್ಟು ಸರಿ ಎಂದೆಲ್ಲ ಕ್ರಿಕೆಟ್ ಪ್ರೇಮಿಗಳು ಜಾಲತಾಣಗಳಲ್ಲಿ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಈ ನಿಟ್ಟಿನಲ್ಲಿ, ಕಮ್ಮಿನ್ಸ್ ಅನುಪಸ್ಥಿತಿಯಲ್ಲಿ ಎಸ್ಆರ್ಎಚ್ ತಂಡವನ್ನು ನಾಯಕನಾಗಿ ಇಶಾನ್ ಕಿಶನ್ ಮುನ್ನಡೆಸಲಿದ್ದಾರೆ. ಸದ್ಯದ ಮಟ್ಟಿಗೆ ಆರ್ಸಿಬಿಯ ಮೊದಲೆರೆಡು ಪಂದ್ಯಗಳಿಂದ ದೂರ ಉಳಿದಿರುವ ಜೋಶ್, ತದನಂತರ ತಂಡವನ್ನು ಸೇರುವ ಮುನ್ಸೂಚನೆ ನೀಡಿದ್ದಾರೆ. ಆದರೆ, ಇಂಜುರಿಯಿಂದ ಸಂಪೂರ್ಣವಾಗಿ ಗುಣಮುಖರಾದರೆ ಮಾತ್ರ ಅವರು ತಂಡ ಸೇರಲಿದ್ದಾರೆ ಎಂಬ ಸಂಗತಿ ಇಲ್ಲಿ ಗಮನಾರ್ಹ. ಮತ್ತೊಂದೆಡೆ, ಯಾರೆಲ್ಲ ಈ ಬಾರಿಯ ಐಪಿಎಲ್ನಲ್ಲಿ ತಮ್ಮ ತಂಡಗಳನ್ನು ಗೆಲುವಿನೆಡೆಗೆ ಕೊಂಡೊಯ್ಯಲು ಶ್ರಮಿಸಲಿರುವ ನಾಯಕರು ಎಂಬುದರ ಪಟ್ಟಿ ಹೀಗಿದೆ ಗಮನಿಸಿ.
2026ರ ಐಪಿಎಲ್ ತಂಡಗಳ ಕ್ಯಾಪ್ಟನ್ಸ್
- ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) - ರುತುರಾಜ್ ಗಾಯಕ್ವಾಡ್
- ಕೋಲ್ಕತ ನೈಟ್ ರೈಡರ್ಸ್ (ಕೆಕೆಆರ್) - ಅಜಿಂಕ್ಯ ರಹಾನೆ
- ಸನ್‌ರೈಸರ್ಸ್ ಹೈದರಾಬಾದ್ (ಎಸ್ಆರ್ಎಚ್) - ಇಶಾನ್ ಕಿಶನ್
- ಮುಂಬೈ ಇಂಡಿಯನ್ಸ್ (ಎಂಐ) - ಹಾರ್ದಿಕ್ ಪಾಂಡ್ಯ
- ಲಖನೌ ಸೂಪರ್ ಜೈಂಟ್ಸ್ (ಎಲ್ಎಸ್ಜಿ) - ರಿಷಬ್ ಪಂತ್
- ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) - ಶ್ರೇಯಸ್ ಅಯ್ಯರ್
- ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) - ರಜತ್ ಪಾಟಿದಾರ್
- ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) - ಅಕ್ಷರ್ ಪಟೇಲ್
- ಗುಜರಾತ್ ಟೈಟಾನ್ಸ್ (ಜಿಟಿ) - ಶುಭಮನ್ ಗಿಲ್
- ರಾಜಸ್ಥಾನ್ ರಾಯಲ್ಸ್ (ಆರ್ಆರ್) - ರಿಯಾನ್ ಪರಾಗ್