ವೈಭವ್‌ಗಾಗಿ ಮೊದಲು ಗಾಳ ಹಾಕಿದ್ದು ರಾಜಸ್ಥಾನವಲ್ಲ ಈ ತಂಡ... ಸೂರ್ಯವಂಶಿ ಹರಾಜಿನ ಅಸಲಿ ಕಥೆ ಇಲ್ಲಿದೆ! Vaibhav Suryavanshi
- ರಾಜಸ್ಥಾನ ರಾಯಲ್ಸ್ ಪರ ಆಡುತ್ತಿರುವ ವೈಭವ್ ಸೂರ್ಯವಂಶಿಯ ಬಗ್ಗೆ ವಿಶೇವಾಗಿ ಹೇಳಬೇಕಾಗಿಲ್ಲ
- 18ನೇ ಆವೃತ್ತಿಯಲ್ಲಿ ಐಪಿಎಲ್ಗೆ ಪಾದರ್ಪಣೆ ಮಾಡಿ ಚೊಚ್ಚಲ ಲೀಗ್ನಲ್ಲೇ ಬ್ಯಾಟಿಂಗ್ನಲ್ಲಿ ಸುನಾಮಿ ಸೃಷ್ಟಿ
- ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯಲ್ಲೂ ತನ್ನ ಬಿರುಗಾಳಿ ಬ್ಯಾಟಿಂಗ್ ಮುಂದುವರಿಸಿದ ವೈಭವ್
- ಅಚ್ಚರಿ ಸಂಗತಿ ಏನೆಂದರೆ ವೈಭವ್‌ಗಾಗಿ ಐಪಿಎಲ್ ಹರಾಜಿನಲ್ಲಿ ಮೊದಲು ಬಿಡ್ ಸಲ್ಲಿಸಿದ್ದು ರಾಜಸ್ಥಾನ ತಂಡವಲ್ಲ
Vaibhav Suryavanshi : ಕಳೆದ ಐಪಿಎಲ್‌ನಲ್ಲಿ ಅಂದರೆ, 18ನೇ ಆವೃತ್ತಿಯಲ್ಲಿ ಪಾದರ್ಪಣೆ ಮಾಡಿ, ಚೊಚ್ಚಲ ಟೂರ್ನಮೆಂಟ್ನಲ್ಲೇ ಬ್ಯಾಟಿಂಗ್ ಸುನಾಮಿ ಸೃಷ್ಟಿಸಿ ಎಲ್ಲರ ಗಮನ ಸೆಳೆದ ಟೀಮ್ ಇಂಡಿಯಾದ ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ, ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯಲ್ಲೂ ತನ್ನ ಬಿರುಗಾಳಿ ಬ್ಯಾಟಿಂಗ್ ಅನ್ನು ಮುಂದುವರಿಸಿದ್ದಾರೆ.
ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ವೈಭವ್, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಈ ಸೀಸನ್ನಲ್ಲಿ ರಾಜಸ್ಥಾನ ತಂಡ ಇಲ್ಲಿಯವರೆಗೆ ಮೂರು ಪಂದ್ಯಗಳನ್ನು ಆಡಿದ್ದು, ಮೂರರಲ್ಲೂ ಗೆಲುವು ಸಾಧಿಸಿದೆ. ಗಮನಾರ್ಹ ಸಂಗತಿ ಏನೆಂದರೆ, ಮೂರೂ ಪಂದ್ಯದಲ್ಲೂ ವೈಭವ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಕೇವಲ 17 ಎಸೆತಗಳಲ್ಲಿ 52 ರನ್ ಗಳಿಸಿದ ವೈಭವ್, ಗುಜರಾತ್ ಟೈಟಾನ್ಸ್ ವಿರುದ್ಧ 18 ಎಸೆತಗಳಲ್ಲಿ 31 ರನ್ ಗಳಿಸಿದರು. ಮಂಗಳವಾರ (ಏಪ್ರಿಲ್ 07) ಗುವಾಹಟಿಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಮತ್ತೆ ತಮ್ಮ ಬ್ಯಾಟಿಂಗ್ನಲ್ಲಿ ವಿನಾಶ ಸೃಷ್ಟಿಸಿದರು. ಕೇವಲ 14 ಎಸೆತಗಳನ್ನು ಎದುರಿಸಿದ ವೈಭವ್, 1 ಬೌಂಡರಿ ಮತ್ತು 5 ಸಿಕ್ಸರ್‌ಗಳ ಸಹಾಯದಿಂದ 39 ರನ್ ಗಳಿಸಿದರು.
ಸತತವಾಗಿ ಮಿಂಚಿನಂತಹ ಫಾರ್ಮ್ನಲ್ಲಿರುವ ವೈಭವ್, ಇದೀಗ ಕ್ರೀಡಾಭಿಮಾನಿಗಳ ಫೇವರಿಟ್ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ವೈಭವ್ ಟ್ರೆಂಡಿಂಗ್ನಲ್ಲಿದ್ದಾರೆ. ಅವರ ಕುರಿತಾದ ಅನೇಕ ಸುದ್ದಿಗಳು ಜಾಲತಾಣದಲ್ಲಿ ಹರಿದಾಡುತ್ತಿವೆ. ಇದರಲ್ಲಿ ಒಂದು ಸುದ್ದಿ ಎಲ್ಲರ ಗಮನ ಸೆಳೆದಿದೆ. ಅದೇನೆಂದರೆ, ವೈಭವ್‌ಗಾಗಿ ಐಪಿಎಲ್ ಹರಾಜಿನಲ್ಲಿ ಮೊದಲು ಬಿಡ್ ಸಲ್ಲಿಸಿದ್ದು ರಾಜಸ್ಥಾನ ತಂಡವಲ್ಲ, ಹಾಗಾದರೆ, ಯಾವ ತಂಡ ಅನ್ನೋ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಅದಕ್ಕೆ ಉತ್ತರ ಇಲ್ಲಿದೆ.
ಹರಾಜಿನಲ್ಲಿ ಮೊದಲು ಬಿಡ್ ಮಾಡಿದ್ದು ಯಾರು?
2025ರ ಐಪಿಎಲ್ ಮೆಗಾ ಹರಾಜಿನಲ್ಲಿ ವೈಭವ್ ಸೂರ್ಯವಂಶಿ ಅವರನ್ನು ರಾಜಸ್ಥಾನ ರಾಯಲ್ಸ್ 1.1 ಕೋಟಿ ರೂ.ಗೆ ಖರೀದಿಸಿತು. ಆದಾಗ್ಯೂ, ಹರಾಜಿನಲ್ಲಿ ವೈಭವ್ ಹೆಸರನ್ನು ಕರೆದಾಗ, ರಾಜಸ್ಥಾನ ಆರಂಭದಲ್ಲಿ ಅವರಿಗೆ ಬಿಡ್ ಮಾಡಲಿಲ್ಲ. ಅಂದಹಾಗೆ, ಐಪಿಎಲ್ 2025ರ ಮೆಗಾ ಹರಾಜು ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಿತು. ಈ ಹರಾಜಿಗೆ ಆಯ್ಕೆಯಾದ 574 ಆಟಗಾರರಲ್ಲಿ ವೈಭವ್ ಸೂರ್ಯವಂಶಿ 491ನೇ ಸ್ಥಾನದಲ್ಲಿದ್ದರು. ಅವರನ್ನು ಕನಿಷ್ಠ 30 ಲಕ್ಷ ರೂ.ಗೆ ಹರಾಜಿನಲ್ಲಿ ಇಡಲಾಯಿತು. ಈ ವೇಳೆ ಅವರನ್ನು ಮೊದಲು ಬಿಡ್ ಮಾಡಿದ ತಂಡವೆಂದರೆ ಡೆಲ್ಲಿ ಕ್ಯಾಪಿಟಲ್ಸ್. ಬಳಿಕ ರಾಜಸ್ಥಾನ ರಾಯಲ್ಸ್ ಕೂಡ ಅದೇ ಕ್ರಮವನ್ನು ಅನುಸರಿಸಿತು.
ವೈಭವ್‌ಗಾಗಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತೀವ್ರ ಪೈಪೋಟಿ ನಡೆಸಿದವು. ಇದರಿಂದ ವೈಭವ್ ಬೆಲೆ ಹೆಚ್ಚಾಯಿತು. ವೈಭವ್ ಸೂರ್ಯವಂಶಿಗೆ ಡೆಲ್ಲಿ ಕ್ಯಾಪಿಟಲ್ಸ್ 1 ಕೋಟಿ ರೂ.ವರೆಗೆ ಬಿಡ್ ಮಾಡಿತು. ಆದರೆ, ಆ ಸಮಯದಲ್ಲಿ, ರಾಜಸ್ಥಾನ ರಾಯಲ್ಸ್ 1 ಕೋಟಿ 10 ಲಕ್ಷ ರೂ.ಗಳಿಗೆ ಬಿಡ್ ಮಾಡಿತು. ಇದಾದ ಬಳಿಕ ಡೆಲ್ಲಿ ಮತ್ತೆ ಬಿಡ್ ಮಾಡಲಿಲ್ಲ. ಅಂತಿಮವಾಗಿ ವೈಭವ್‌ರನ್ನು ಅದೇ ಬೆಲೆಗೆ ರಾಜಸ್ಥಾನ ರಾಯಲ್ಸ್ ಖರೀದಿ ಮಾಡಿತು. ಈ ಸಮಯದಲ್ಲಿ ವೈಭವ್ ಕೇವಲ 13 ವರ್ಷ ವಯಸ್ಸಾಗಿತ್ತು. ಈ ಪ್ರಕ್ರಿಯೆಯಲ್ಲಿ, ವೈಭವ್ ಐಪಿಎಲ್ ಹರಾಜಿನಲ್ಲಿ ಮಾರಾಟವಾದ ಅತ್ಯಂತ ಕಿರಿಯ ಆಟಗಾರ ಎಂಬ ಇತಿಹಾಸ ಸೃಷ್ಟಿಸಿದರು.
2025ರ ಐಪಿಎಲ್ ಆರಂಭದಲ್ಲಿ ವೈಭವ್ ಅವರಿಗೆ 14 ವರ್ಷ ತುಂಬಿತು. ಐಪಿಎಲ್‌ನಲ್ಲಿ ತಮ್ಮ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿದ ವೈಭವ್ ಎಲ್ಲರ ಹುಬ್ಬೇರಿಸಿದರು. ಅಲ್ಲದೆ, ಅದೇ ಋತುವಿನಲ್ಲಿ ಅವರು ಶತಕ ಸಹ ಗಳಿಸಿದರು ಮತ್ತು ಐಪಿಎಲ್‌ನಲ್ಲಿ ಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರರಾದರು. ಅವರು ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯ ಐಪಿಎಲ್ನಲ್ಲೂ ಬಿರುಗಾಳಿಯ ಬ್ಯಾಟಿಂಗ್ ಮುಂದುವರಿಸಿದ್ದಾರೆ, (ಏಜೆನ್ಸೀಸ್).