ಪಾಕಿಸ್ತಾನ ಕ್ರಿಕೆಟ್​ ತಂಡ  
ಕ್ರಿಕೆಟ್

ಟಿ20 ವಿಶ್ವಕಪ್​ನಲ್ಲಿ ಬೇಕಾಬಿಟ್ಟಿ ಆಟ! ಇಡೀ ತಂಡಕ್ಕೆ ಬೆಂಡೆತ್ತಿದ ಪಿಸಿಬಿ; ಪಾಕ್​ ಆಟಗಾರರಿಗೆ ಭಾರೀ ದಂಡ | Pakistan

ಪ್ರಮುಖ ಮುಖ್ಯಾಂಶಗಳು

  • ಟಿ20 ವಿಶ್ಚಕಪ್​ ಟೂರ್ನಿಯಿಂದ ಹೊರಬಿದ್ದ ಪಾಕಿಸ್ತಾನ
  • ಶ್ರೀಲಂಕಾ ವಿರುದ್ಧ ಗೆದ್ದು ಸೆಮಿಫೈನಲ್​ಗೆ ಹೋಗಲಿಲ್ಲ
  • ಇಡೀ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿದ ಆಟಗಾರರಿಗೆ 50 ಲಕ್ಷ ರೂ.ಗಳ ಭಾರೀ ದಂಡ
Pakistan: ಫೆ.28ರಂದು ಶ್ರೀಲಂಕಾ ವಿರುದ್ಧ ನಡೆದ ಟಿ20 ವಿಶ್ವಕಪ್​ ಟೂರ್ನಿಯ ನಿರ್ಣಾಯಕ ಸೂಪರ್-8 ಪಂದ್ಯದಲ್ಲಿ ಪಾಕಿಸ್ತಾನದ ಸೆಮಿಫೈನಲ್ ಕನಸು ನುಚ್ಚುನೂರಾಯಿತು. ಟೂರ್ನಿ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾದ ಪಾಕ್​, ಕೊನೆಯ ಮ್ಯಾಚ್​ನಲ್ಲಿ ಮಾತ್ರ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿತು. ಇಷ್ಟಾದರೂ ಗೆದ್ದು ಸೆಮೀಸ್​ಗೆ ಹೋಗುವಲ್ಲಿ ಮುಗ್ಗರಿಸಿತು. ಸದ್ಯ ಇದೇ ಈಗ ಪಾಕಿಸ್ತಾನ ಕ್ರಿಕೆಟ್​ ಮಂಡಳಿಯ ಕಣ್ಣನ್ನು ಕೆಂಪಗಾಗಿಸಿದೆ.

50 ಲಕ್ಷ ರೂ. ದಂಡ

ಗ್ರೂಪ್​ ಸ್ಟೇಜ್ ಹಂತದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡದೆ ಹೋದರೂ ಪಂದ್ಯ ಗೆದ್ದ ಹಿನ್ನೆಲೆ ಪಾಕಿಸ್ತಾನ ಸೂಪರ್​-8 ಹಂತಕ್ಕೆ ಎಂಟ್ರಿಕೊಟ್ಟಿತು. ಇಲ್ಲಿ ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ಜೊತೆ ಗ್ರೂಪ್ 2ರಲ್ಲಿ ಆಡಿದ ಪಾಕ್​, ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಮಳೆಯಿಂದ ಒಂದು ಅಂಕವನ್ನು ಸುಲಭವಾಗಿ ಗಳಿಸಿತು. ನಂತರ ಇಂಗ್ಲೆಂಡ್ ವಿರುದ್ಧದ ಪಂದ್ಯವನ್ನು ಸೋತಿತು. ಇದರ ಪರಿಣಾಮವಾಗಿ, ಸೆಮಿಫೈನಲ್‌ಗೆ ಅರ್ಹತೆ ಪಡೆಯಲು ಶ್ರೀಲಂಕಾ ವಿರುದ್ಧ 65 ರನ್‌ಗಳಿಂದ ಗೆಲ್ಲುವ ಅನಿವಾರ್ಯತೆ ಎದುರಾಯಿತು. ತನ್ನ ಹೆಬ್ಬಯಕೆಯನ್ನು ಈಡೇರಿಸಿಕೊಳ್ಳಲು ಅಡ್ಡಿಯಾದ ಶ್ರೀಲಂಕಾ, ತಾನು ತವರಿಗೆ ಹೋಗುವುದರ ಜತೆಗೆ ಪಾಕ್​ ಅನ್ನು ಕರೆದುಕೊಂಡು ಹೋಗಿದ್ದು ದುರಂತ.
ಟಿ20 ವಿಶ್ವಕಪ್​ ಫೈನಲ್​ನಲ್ಲಿ ಟೀಮ್ ಇಂಡಿಯಾ ಎದುರು ಆಡಬೇಕು ಎಂಬ ಆಸೆಯಿಟ್ಟುಕೊಂಡಿದ್ದ ಪಾಕ್​ಗೆ ನಿರ್ಗಮನ ಬೆನ್ನಲ್ಲೇ ಭಾರೀ ಟೀಕೆ, ಛೀಮಾರಿಗಳು ವ್ಯಕ್ತವಾಯಿತು. ತಮ್ಮ ದೇಶಕ್ಕೆ ಅವಮಾನ ತಂದ ಪಾಕ್​ ಆಟಗಾರರಿಗೆ ಇದೀಗ 50 ಲಕ್ಷ ರೂ. ದಂಡ ವಿಧಿಸುವ ಮೂಲಕ ಪಿಸಿಬಿ ತನ್ನ ಅಸಮಾಧಾನವನ್ನು ಹೊರಹಾಕಿದೆ. ಈ 50 ಲಕ್ಷ ರೂ. ಮೊತ್ತ ಇಡೀ ತಂಡಕ್ಕೆ ಅಲ್ಲ! ಬದಲಿಗೆ ವಿಶ್ವಕಪ್​ ಟೂರ್ನಿಯ ತಂಡದಲ್ಲಿದ್ದ ಪ್ರತಿಯೊಬ್ಬ ಆಟಗಾರನಿಗೆ ಎಂಬುದು ಗಮನಾರ್ಹ.
'ಎಕ್ಸ್‌ಪ್ರೆಸ್ ಟ್ರಿಬ್ಯೂನ್' ವರದಿ ಪ್ರಕಾರ, ಪಾಕಿಸ್ತಾನದ ಪ್ರತಿಯೊಬ್ಬ ಆಟಗಾರನಿಗೆ 50 ಲಕ್ಷ ರೂ. ದಂಡ ಹಾಕಲಾಗಿದೆ. ಯಾವಾಗ ಟೀಮ್ ಇಂಡಿಯಾ ಎದುರು ಪಾಕ್​ ಸೋಲುಂಡಿತೋ, ಅಂದೇ ಈ ಪೆನಾಲ್ಟಿ ಬಗ್ಗೆ ಪಿಸಿಬಿ ತನ್ನ ಆಟಗಾರರಿಗೆ ತಿಳಿಸಿತ್ತಂತೆ. ವಾರ್ಷಿಕ ಒಪ್ಪಂದಗಳಲ್ಲಿ ಹೆಚ್ಚಿನ ಸಂಬಳ ಪಡೆಯುವ ಆಟಗಾರರಿಗೆ ದಂಡ ಮೊತ್ತ ಇನ್ನೂ ಹೆಚ್ಚಾಗಿರುತ್ತದೆ ಎಂದು ತಿಳಿಸಲಾಗಿದೆ.

ಯಾರಿಗೆಲ್ಲ ಈ ದಂಡದ ಬಿಸಿ?

ಸೈಮ್ ಅಯೂಬ್, ಸಾಹಿಬ್ಜಾದಾ ಫರ್ಹಾನ್, ಸಲ್ಮಾನ್ ಅಲಿ ಅಘಾ (ನಾಯಕ), ಬಾಬರ್ ಆಜಮ್, ಉಸ್ಮಾನ್ ಖಾನ್ (ವಿಕೆಟ್ ಕೀಪರ್), ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಫಹೀಮ್ ಅಶ್ರಫ್, ಶಾಹೀನ್ ಅಫ್ರಿದಿ, ಸಲ್ಮಾನ್ ಮಿರ್ಜಾ, ಅಬ್ರಾರ್ ಅಹ್ಮದ್, ಫಖರ್ ಜಮಾನ್, ಖವಾಜಾ ನಫೆ, ನಸೀಮ್ ಶಾ, ಉಸ್ಮಾನ್ ತಾರೀಕ್​