ಪಾಕ್ ಕ್ರಿಕೆಟಿಗ ಅಬ್ರಾರ್ ಅಹ್ಮದ್, ಕಾವ್ಯ ಮಾರನ್
- ಸನ್‌ರೈಸರ್ಸ್ ಹೈದ್ರಾಬಾದ್ ಓನರ್ ಕಾವ್ಯ ಮಾರನ್ಗೆ ಧರ್ಮ ಸಂಕಟ
- ಪಾಕಿಸ್ತಾನ ಕ್ರಿಕೆಟಿಗ ಕೈಕೊಡುವ ಮುನ್ಸೂಚನೆ ಬೆನ್ನಲ್ಲೇ ತಲೆಬಿಸಿ
- ಅಬ್ರಾರ್ ಅಹ್ಮದ್ಗೆ ಚೆಕ್ಮೆಟ್ ಇಟ್ಟ ಪಿಸಿಬಿ ಕ್ರಿಕೆಟ್
Kavya Maran: ದಿ ಹಂಡ್ರೆಡ್ ಲೀಗ್ಗೆ ಪಾಕಿಸ್ತಾನಿ ಸ್ಪಿನ್ನರ್ ಅಬ್ರಾರ್ ಅಹ್ಮದ್ರನ್ನು ತಮ್ಮ ಫ್ರಾಂಚೈಸಿಗೆ ಬರೋಬ್ಬರಿ 2.3 ಕೋಟಿ ರೂ. ಕೊಟ್ಟು ಖರೀದಿಸಿದ ಸನ್‌ರೈಸರ್ಸ್ ಹೈದ್ರಾಬಾದ್ ಫ್ರಾಂಚೈಸಿಯ ಒಡತಿ ಕಾವ್ಯ ಮಾರನ್ಗೆ ಇದೀಗ ಧರ್ಮ ಸಂಕಟ ಎದುರಾಗಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಮುಂಬರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಪಿಸಿಬಿ ಅಹ್ಮದ್ರನ್ನು ಆಯ್ಕೆ ಮಾಡಿಕೊಂಡಿದೆ. ಆದರೆ, ಅಲ್ಲೊಂದು ಚೆಕ್ಮೆಟ್ ಇಟ್ಟಿದೆ. ಶೀಘ್ರದಲ್ಲೇ ಯುಕೆಯಲ್ಲಿ ನಡೆಯಲಿರುವ ದಿ ಹಂಡ್ರೆಡ್ ಲೀಗ್‌ನಲ್ಲಿ ಬೇಕಿದ್ರೆ ಆಡಿ, ಇಲ್ಲವೇ ಅಂತಾರಾಷ್ಟ್ರೀಯ ತಂಡದಲ್ಲಿ ನಮ್ಮ ಜೊತೆ ಸೇರಿಕೊಳ್ಳಿ. ಈ ಆಯ್ಕೆಯೂ ಸಂಪೂರ್ಣವಾಗಿ ನಿಮಗೆ ಬಿಟ್ಟದ್ದು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆಟಗಾರರನ್ನು ಗೊಂದಲಕ್ಕೆ ಸಿಲುಕಿಸಿದೆ.
ಈ ಲೀಗ್‌ನಲ್ಲಿ, ಸನ್‌ರೈಸರ್ಸ್ ಹೈದರಾಬಾದ್ ಮಾಲೀಕರ ಒಡೆತನದ 'ಸನ್‌ರೈಸರ್ಸ್ ಲೀಡ್ಸ್' ಫ್ರಾಂಚೈಸಿ ಅಬ್ರಾರನ್ನು ತಂಡಕ್ಕೆ ಖರೀದಿಸಿದೆ. ಈಗ ನೋಡಿದ್ರೆ, ಅವರ ಮುಂದೆ ಎರಡು ಆಯ್ಕೆಗಳಿವೆ. ಒಂದು ಕ್ಲಬ್ ಕ್ರಿಕೆಟ್ಗೆ ಆಡುವುದು ಇಲ್ಲವೇ, ಅಂತಾರಾಷ್ಟ್ರೀಯ ತಂಡದಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸುವುದು. ಯಾವುದೇ ಗೊಂದಲ ಅಥವಾ ಮುನಿಸು ಬೇಡವೆಂದೇ ಪಿಸಿಬಿ ಈಗಾಗಲೇ ಆಟಗಾರನಿಗೆ ಎನ್ಓಸಿ ಕೂಡ ಕೊಟ್ಟುಬಿಟ್ಟಿದೆ.
ಜು.21ರಿಂದ ಆರಂಭಗೊಳ್ಳಲಿರುವ ಲೀಗ್ಗೆ ಆಡುವುದು ಬಿಡುವುದು ಅಬ್ರಾರ್ಗೆ ಬಿಟ್ಟದು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಿಳಿಸಿದೆ. ಮತ್ತೊಂದೆಡೆ, ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಜು.25ರಿಂದ ಆರಂಭಗೊಳ್ಳಲಿದೆ. ಇದರರ್ಥ ಲೀಗ್ ಪ್ರಾರಂಭವಾದ ಕೇವಲ ನಾಲ್ಕು ದಿನಗಳ ಬೆನ್ನಲ್ಲೇ ಪಾಕ್ಗೆ ಟೆಸ್ಟ್ ಸರಣಿ ಶುರುವಾಗಲಿದೆ. ಹೀಗಿರುವಾಗ ಎರಡೂ ಕಡೆ ಆಡಲು ಅಬ್ರಾರ್ ಅಹ್ಮದ್ಗೆ ಅವಕಾಶವಿಲ್ಲ. ಹೀಗಾಗಿ, ಯಾರ ಕಡೆ ಹೋಗ್ತಾರೆ ಅನ್ನೋದೇ ಗೊಂದಲ. ಇದೇ ಕಾವ್ಯ ಮಾರನ್ಗೆ ಈಗ ದೊಡ್ಡ ತಲೆಬಿಸಿ ತಂದೊಡ್ಡಿದೆ.
ಕಾವ್ಯ ಮಾರನ್ ಅವರು ಪಾಕಿಸ್ತಾನಿ ಆಟಗಾರನನ್ನು ಭಾರಿ ಬೆಲೆಗೆ ಖರೀದಿಸಿದ್ದಕ್ಕಾಗಿ ಅಂದೇ ಸಾಮಾಜಿಕ ಜಾಲತಾಣಗಳಲ್ಲಿ ಭಾರತೀಯ ಕ್ರಿಕೆಟ್ ಅಭಿಮಾನಿಗಳು ತೀವ್ರ ಟೀಕೆಗಳನ್ನು ವ್ಯಕ್ತಪಡಿಸಿದರು. ಪಾಕ್ ನಮ್ಮ ಬದ್ಧ ವೈರಿ. ಅಲ್ಲಿನ ಆಟಗಾರರು ನಿಮ್ಮ ತಂಡಕ್ಕೆ ಬೇಕಿತ್ತಾ? ನಿಮಗೆ ನಾಚಿಕೆ ಆಗುವುದಿಲ್ಲವೇ? ಯಾವುದೇ ಕಾರಣಕ್ಕೂ ಕಾವ್ಯ ಮಾರನ್ ಅವರ ಎಸ್ಆರ್ಎಚ್ ಫ್ರಾಂಚೈಸಿಗೆ ಐಪಿಎಲ್ನಲ್ಲಿ ಅವಕಾಶ ಕೊಡಬೇಡಿ ಎಂದೆಲ್ಲ ಕ್ರಿಕೆಟ್ ಪ್ರೇಮಿಗಳು ಹಿಗ್ಗಾಮುಗ್ಗಾ ಜಾಡಿಸಿದ್ದರು. ಈಗ ನೋಡಿದ್ರೆ, ಅಬ್ರಾರ್ ಕಾವ್ಯ ತಂಡಕ್ಕೆ ಕೈಕೊಡುವ ಸ್ಥಿತಿಯಲ್ಲಿದ್ದಾರೆ. ಇದು ಆಕೆಗೆ ಭಾರಿ ಮುಖಭಂಗವನ್ನೇ ಉಂಟುಮಾಡಿದೆ. ಒಟ್ಟಾರೆ ಅಬ್ರಾರ್, ಪಾಕಿಸ್ತಾನ ಟೆಸ್ಟ್ ತಂಡಕ್ಕೆ ಸೇರುತ್ತಾರಾ ಅಥವಾ ಕಾವ್ಯ ಮಾರನ್ ಖರೀದಿಗೆ ಮೋಸ ಮಾಡದಂತೆ ಹಂಡ್ರೆಂಡ್ ಲೀಗ್ ಆಡುತ್ತಾರಾ ಎಂಬುದೇ ಸದ್ಯ ಹಲವರ ಕುತೂಹಲ,(ಏಜೆನ್ಸೀಸ್).