ಚಂಡೀಗಢ: ಇಂದು (ಮಾ.31) ಪಿಸಿಎ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 19ನೇ ಆವೃತ್ತಿಯ ನಾಲ್ಕನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಭರ್ಜರಿ ಗೆಲುವು ದಾಖಲಿಸಿತು.
ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ, ಬ್ಯಾಟ್ ಮಾಡಿದ ಟೈಟನ್ಸ್ ಪಡೆ 20 ಓವರ್ನಲ್ಲಿ 6 ವಿಕೆಟ್ ನಷ್ಟಕ್ಕೆ 162 ರನ್ ಕಲೆಹಾಕಿತು. ಜಾಸ್ ಬಟ್ಲರ್ (38 ರನ್) ಮತ್ತು ನಾಯಕ ಶುಭಮನ್ ಗಿಲ್ (39) ಅವರಿಂದ ಮಾತ್ರ ತಂಡಕ್ಕೆ ಉತ್ತಮ ರನ್ಗಳು ಬಂದಿತು.
ಈ ಸಾಧಾರಣ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ಗೆ ಪ್ರಭ್ಸಿಮ್ರನ್ ಸಿಂಗ್ (37), ಕೂಪರ್ ಕಾನೊಲಿ (72*) ಅವರ ಸ್ಫೋಟಕ ಓಪನಿಂಗ್ ಪ್ರದರ್ಶನ ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ಯಿತು. ಟೈಟನ್ಸ್ ಪರ 3 ವಿಕೆಟ್ ಕಬಳಿಸಿ, ಆಟದ ದಿಕ್ಕನ್ನೇ ಬದಲಿಸಿದ್ದ ಪ್ರಸಿದ್ಧ್ ಕೃಷ್ಣ ಅವರಿಗೆ ಬೆವರಿಳಿಸಿದ್ದು ಬ್ರಾರ್ಟ್ಲೆಟ್ ಅವರ ಅದೊಂದು ಸಿಕ್ಸ್. ಕೊನೆಯ ಎರಡು ಓವರ್ ಬಾಕಿ ಇರುವಂತೆ ಒತ್ತಡದಿಂದ ಕೂಡಿದ್ದ ಪಂಜಾಬ್ಗೆ ಬ್ರಾರ್ಟ್ಲೆಟ್ ಬಾರಿಸಿದ ಸಿಕ್ಸರ್, ಗೆಲುವಿನ ಬೆಳಕನ್ನು ತೋರಿಸಿತು.
ಕೊನೆಯ ಓವರ್ವರೆಗೂ ಸಾಗಿದ ಪಂದ್ಯದಲ್ಲಿ ಕೊನಾಲಿ ಅವರ ಸ್ಫೋಟಕ ಇನ್ನಿಂಗ್ಸ್ನಿಂದ ಪಂಜಾಬ್ ಕಿಂಗ್ಸ್ ರೋಚಕ ಗೆಲುವು ಸಾಧಿಸಿತು. ಬಹುತೇಕ ಗೆಲುವು ನಮ್ಮದೇ ಎಂದು ಖುಷಿಯಲ್ಲಿ ತೇಲಾಡುತ್ತಿದ್ದ ಟೈಟನ್ಸ್ಗೆ ಕಡೆಗೂ ಆಗಿದ್ದು ನಿರಾಶೆ. 1.4 ಓವರ್ಗಳಲ್ಲೇ ಮೂರು ಬಹುಮುಖ್ಯ ವಿಕೆಟ್ಗಳನ್ನು ಪಡೆದ ವೇಗಿ ಪ್ರಸಿದ್ಧ್ ಕೃಷ್ಣ ಅವರ ಶ್ರಮ ಕಡೆಗೂ ವ್ಯರ್ಥವಾಯಿತು.