ಭಾರತ ಏಕದಿನ ತಂಡದಿಂದ ಪಂತ್ ಔಟ್? 2ನೇ ಕೀಪರ್ ಆಗಿ ಸ್ಯಾಮ್ಸನ್ ಸೇರ್ಪಡೆ ನಿರೀಕ್ಷೆ
ನವದೆಹಲಿ: ಐಪಿಎಲ್ 19ನೇ ಆವೃತ್ತಿಯಲ್ಲಿ ಬ್ಯಾಟರ್ ಆಗಿ ಸ್ಥಿರ ನಿರ್ವಹಣೆ ತೋರಲು ಪರದಾಡುತ್ತಿರುವ ರಿಷಭ್ ಪಂತ್ (Rishabh Pant) ಭಾರತದ ಏಕದಿನ ತಂಡದಿಂದ (Team India) ಹೊರಬೀಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಈಗಾಗಲೆ ಟಿ20 ತಂಡದಿಂದ ಕಡೆಗಣಿಸಲ್ಪಟ್ಟಿರುವ ಪಂತ್, ಏಕದಿನದಿಂದಲೂ ಹೊರಬಿದ್ದರೆ, ಕೇವಲ ರೆಡ್ಬಾಲ್ (ಟೆಸ್ಟ್) ಆಟಗಾರರಾಗಿ ಉಳಿಯಲಿದ್ದಾರೆ. ಭಾರತ ಟೆಸ್ಟ್ ತಂಡಕ್ಕೆ ಸದ್ಯ ಅವರು ಮೊದಲ ಆದ್ಯತೆಯ ವಿಕೆಟ್ ಕೀಪರ್ ಮಾತ್ರವಲ್ಲದೆ, ಉಪನಾಯಕರೂ ಆಗಿದ್ದಾರೆ.
ಭಾರತ ಏಕದಿನ ತಂಡಕ್ಕೆ ಈಗ ಕನ್ನಡಿಗ ಕೆಎಲ್ ರಾಹುಲ್ ಮೊದಲ ಆದ್ಯತೆಯ ವಿಕೆಟ್ ಕೀಪರ್ ಆಗಿದ್ದು, ಪಂತ್ 2ನೇ ಆಯ್ಕೆಯ ಕೀಪರ್ ಆಗಿದ್ದರು. ಆದರೆ ಇನ್ನು ಪಂತ್ ಬದಲಿಗೆ ಸಂಜು ಸ್ಯಾಮ್ಸನ್ (sanju samson) 2ನೇ ಆಯ್ಕೆಯ ವಿಕೆಟ್ ಕೀಪರ್ ಆಗಲಿದ್ದಾರೆ. ಟಿ20 ವಿಶ್ವಕಪ್ನಲ್ಲಿ ತೋರಿದ ಅಮೋಘ ನಿರ್ವಹಣೆಗಾಗಿ ಸ್ಯಾಮ್ಸನ್ಗೆ ಈ ಅವಕಾಶ ಒಲಿಯಲಿದೆ ಎನ್ನಲಾಗಿದೆ. ಭಾರತ ತಂಡ ಜೂನ್ 14ರಿಂದ ತವರಿನಲ್ಲಿ ಅ್ಘಾನಿಸ್ತಾನ ಎದುರು ತನ್ನ ಮುಂದಿನ ಏಕದಿನ ಸರಣಿಯನ್ನು ಆಡಲಿದೆ.
ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್, ಐಪಿಎಲ್ ನಂತರ ಭಾರತ 2027ರ ಏಕದಿನ ವಿಶ್ವಕಪ್ಗೆ ಬಲಿಷ್ಠ ತಂಡ ಕಟ್ಟುವತ್ತ ಗಮನಹರಿಸಲಿದೆ. ವಿಶ್ವಕಪ್ಗೆ ಮುನ್ನ ಭಾರತ ಸುಮಾರು 20 ಏಕದಿನ ಪಂದ್ಯಗಳನ್ನು ಆಡಲಿದೆ.
ಭಾರತ ಕಳೆದ ಜನವರಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ಆಡಿದ ಕೊನೇ ಏಕದಿನ ಸರಣಿಗೆ ಪಂತ್ ಅವರೇ 2ನೇ ಆಯ್ಕೆಯ ಕೀಪರ್ ಆಗಿದ್ದರು. ಆದರೆ ಅವರು ಗಾಯಗೊಂಡು ಹೊರಬಿದ್ದ ಹಿನ್ನೆಲೆಯಲ್ಲಿ ಅವರ ಸ್ಥಾನವನ್ನು ಧ್ರುವ ಜುರೆಲ್ ತುಂಬಿದ್ದರು. ಇದೀಗ ಐಪಿಎಲ್ನಲ್ಲಿ ಆಡಿದ 8 ಪಂದ್ಯಗಳಲ್ಲಿ ಕೇವಲ 189 ರನ್ ಗಳಿಸಿ ಪಂತ್ ನಿರಾಸೆ ಮೂಡಿಸಿದ್ದರೆ, ಸಂಜು ಸ್ಯಾಮ್ಸನ್ 2 ಶತಕ ಸಿಡಿಸಿ ಮಿಂಚಿದ್ದಾರೆ. ಮತ್ತೊಂದೆಡೆ ಸನ್ರೈಸರ್ಸ್ ಪರ ಇಶಾನ್ (312) ಕಿಶನ್ ಕೂಡ ಭರ್ಜರಿ ನಿರ್ವಹಣೆ ತೋರುತ್ತಿದ್ದಾರೆ. ಹೀಗಾಗಿ ಇನ್ನು ಪಂತ್ ಟೆಸ್ಟ್ಗಷ್ಟೇ ಸೀಮಿತವಾಗುವ ಸಾಧ್ಯತೆ ಹೆಚ್ಚಿದೆ.
ಸ್ಯಾಮ್ಸನ್ ಇದುವರೆಗೆ ಆಡಿರುವ 16 ಏಕದಿನ ಪಂದ್ಯಗಳ 14 ಇನಿಂಗ್ಸ್ಗಳಲ್ಲಿ 56.67ರ ಸರಾಸರಿಯಲ್ಲಿ 510 ರನ್ ಗಳಿಸಿದ್ದಾರೆ. ಇದರಲ್ಲಿ 1 ಶತಕ ಮತ್ತು 3 ಅರ್ಧಶತಕಗಳು ಸೇರಿವೆ. 2023ರಲ್ಲಿ ದ. ಆಫ್ರಿಕಾದ ಪರ್ಲ್ನಲ್ಲಿ ಆಡಿದ ಏಕದಿನ ಪಂದ್ಯದಲ್ಲಿ ಸ್ಯಾಮ್ಸನ್ 108 ರನ್ ಸಿಡಿಸಿದ್ದರು. 2027ರ ಏಕದಿನ ವಿಶ್ವಕಪ್ ಕೂಡ ದ. ಆಫ್ರಿಕಾದಲ್ಲೇ ನಡೆಯಲಿದೆ. ಹೀಗಾಗಿ ಸ್ಯಾಮ್ಸನ್ಗೆ ಹೆಚ್ಚಿನ ಒಲವು ಪಡೆದಿದ್ದಾರೆ.