ಪಾಕಿಸ್ತಾನ ಕ್ರಿಕೆಟ್​ ತಂಡದ ಆಟಗಾರ್ತಿಯರು 
ಕ್ರಿಕೆಟ್

ಪಾಕ್​ ಕ್ರಿಕೆಟಿಗರ ಹಣೆಬರಹವೇ ಇಷ್ಟು! ಎಷ್ಟೇ ಬದಲಾವಣೆ ಮಾಡಿದರೂ ಸೋಲು, ಕಿತ್ತಾಟ ಮಾತ್ರ ತಪ್ಪೋದಿಲ್ಲ

ಪ್ರಮುಖ ಮುಖ್ಯಾಂಶಗಳು

  • ಪಾಕಿಸ್ತಾನ ಪುರುಷ/ಮಹಿಳಾ ಕ್ರಿಕೆಟ್​ನಲ್ಲಿ ಯಾವುದೂ ಸರಿಯಿಲ್ಲ
  • ಇದೇ ರೀತಿ ಮುಂದುವರಿದರೆ ಮುಂದೊಂದು ದಿನ ಪಾಕಿಸ್ತಾನ ಟೀಮ್​ ಒಂದು ನೆನಪು ಅಷ್ಟೇ
Pakistan Cricket: ಪಾಕಿಸ್ತಾನದ ಪುರುಷ ಮತ್ತು ಮಹಿಳಾ ಕ್ರಿಕೆಟ್​ನಲ್ಲಿ ಅಂತಹ ವ್ಯತ್ಯಾಸವೇನು ಇಲ್ಲ. ಕಾರಣ, ಎರಡೂ ತಂಡಗಳು ಸೋಲುವುದರಲ್ಲಿ, ಅದರಲ್ಲೂ ಹೀನಾಯ ಸೋಲುಗಳನ್ನು ನೋಡುವಲ್ಲಿ ಎತ್ತಿದ ಕೈ. ಇನ್ನು ನೇರಾನೇರ ಜಗಳ, ಆಂತರಿಕ ಕಲಹಗಳಿಗಂತು ಕೇಳುವುದೇ ಬೇಡ. ಆ ಮಟ್ಟಿಗೆ ಆಟಗಾರರು ಮತ್ತು ಆಟಗಾರ್ತಿಯರು ಕಿತ್ತಾಡಿಕೊಳ್ಳುತ್ತಾರೆ. ಇದಕ್ಕೆ ಮತ್ತೊಂದು ಜ್ವಲಂತ ಸಾಕ್ಷಿ ಪಾಕ್​ ವನಿತೆಯರ ತಂಡ.
ಇತ್ತೀಚೆಗಷ್ಟೇ ಮಹಿಳಾ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಗ್ರೂಪ್​ ಸ್ಟೇಜ್​ ಹಂತದಲ್ಲೇ ಹೊರಬಿದ್ದ ಪಾಕಿಸ್ತಾನ, ಸರಣಿ ಹೀನಾಯ ಸೋಲುಗಳಿಂದ ಭಾರಿ ಮುಖಭಂಗ ಅನುಭವಿಸಿತು. ಈ ಸೋಲಿನ ಬೆನ್ನಲ್ಲೇ ತವರಿಗೆ ವಾಪಾಸ್​ ಆದ ಆಟಗಾರ್ತಿಯರ ನಡುವೆ ಯಾವುದೂ ಸರಿಯಿಲ್ಲ. ತಂಡದೊಳಗಿನ ಆಂತರಿಕ ಕಲಹ ಮತ್ತು ಅಶಿಸ್ತಿನ ವರದಿಗಳು ಸದ್ಯ ಪಾಕ್ ಕ್ರಿಕೆಟ್‌ನ ಮಾನ-ಮರ್ಯಾದೆಯನ್ನು ಮೂರ್ಕಾಸಿಗೆ ಹರಾಜು ಹಾಕಿವೆ.

ಕ್ಯಾಪ್ಟನ್ ಫಾತಿಮಾ ಸನಾ ಕೆಂಡ

ವರದಿಗಳ ಪ್ರಕಾರ, ತಂಡದ ಮೆಂಟರ್ ಮತ್ತು ಅಘೋಷಿತ ಮುಖ್ಯ ಕೋಚ್ ವಹಾಬ್ ರಿಯಾಜ್ ಹಾಗೂ ಪಾಕ್​ ಕ್ಯಾಪ್ಟನ್​ ಫಾತಿಮಾ ಸನಾ ನಡುವೆ ಆಟಗಾರ್ತಿಯರ ಆಯ್ಕೆ ವಿಚಾರವಾಗಿ ದೊಡ್ಡ ಜಗಳ ನಡೆದಿದೆ ಎಂದು ವರದಿಯಾಗಿದೆ. ಇದರೊಟ್ಟಿಗೆ, ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೂ ಮುನ್ನ, ಹಿರಿಯ ಆಟಗಾರ್ತಿ ಆಲಿಯಾ ರಿಯಾಜ್ ಅವರ ಪತಿ ಅಲಿ ಯೂನಿಸ್, ಮಹಿಳೆಯರ ತಂಡದ ಆಟಗಾರ್ತಿಯರು ಉಳಿದಿದ್ದ ಹೋಟೆಲ್ ರೂಮ್‌ನಲ್ಲೇ ಮಲಗಿದ್ದಕ್ಕೆ ಫಾತಿಮಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಪಟ್ಟು ಹಿಡಿದ ಸನಾ, ಕಡೆಗೂ ರೂಮ್‌ನಿಂದ ಯೂನಿಸ್​ರನ್ನು ಹೊರಗೆ ಕಳುಹಿಸಿದರು.
ಈ ಘಟನೆ ನಡೆದ ಮರುದಿನವೇ, ಇಡೀ ತಂಡವು ಪ್ರಾಕ್ಟೀಸ್ ಸೆಷನ್​ನಲ್ಲಿ ತೊಡಗಿದ್ದರೆ, ಆಲಿಯಾ ರಿಯಾಜ್ ಮತ್ತು ಆಕೆಯ ಪತಿ ಸ್ಥಳೀಯ ಪ್ರವಾಸಕ್ಕೆ ಹೋಗಿದ್ದು ತಂಡದಲ್ಲಿ ಬಿರುಕು ಮೂಡಲು ಕಾರಣವಾಯಿತು ಎನ್ನಲಾಗಿದೆ. ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೆ ಪ್ಲೇಯಿಂಗ್ ಇಲೆವೆನ್ ಆಯ್ಕೆ ಮಾಡುವಾಗ, ಅಶಿಸ್ತು ತೋರಿದ ಆಲಿಯಾವನ್ನು ಕೈಬಿಡಲು ಸನಾ ಕೋಚ್​ಗೆ ಸೂಚಿಸಿದ್ದರಂತೆ. ಆದರೆ, ವಹಾಬ್ ರಿಯಾಜ್ ಮಾತ್ರ ಇದಕ್ಕೆ ಒಪ್ಪದೆ, ಆಲಿಯಾರನ್ನು ಆಡಿಸಿದ್ದಾಗಿ ಕೇಳಿಬಂದಿದೆ.
ಈ ಪಂದ್ಯದಲ್ಲಿ ಪಾಕಿಸ್ತಾನ ಹೀನಾಯ ಸೋಲು ಅನುಭವಿಸಿದ ಕೂಡಲೇ ಕೆಂಡಾಮಂಡಲಗೊಂಡ ಸನಾ, ಇಡೀ ತಂಡದ ಎದುರೇ ಕೋಚ್​ ವಹಾಬ್ ರಿಯಾಜ್‌ಗೆ, ಡಿಸಿಪ್ಲಿನ್ ಇಲ್ಲದ ಆಟಗಾರ್ತಿಯನ್ನು ಆಡಿಸಿ ನೀವೇ ತಂಡದ ಸೋಲಿಗೆ ಕಾರಣರಾಗಿದ್ದೀರಿ ಎಂದು ಮುಖಕ್ಕೆ ಹೊಡೆದಂತೆ ಹೇಳಿದರು. ಇದರ ಮಧ್ಯೆ, ಕೆಲವು ಹಿರಿಯ ಆಟಗಾರ್ತಿಯರು ಮತ್ತು ಕೋಚ್​ ನಡುವೆ ರಾಜಕೀಯ ನಡೆಯುತ್ತಿದೆ ಎನ್ನಲಾಗಿದೆ.
ನಾವುಗಳು ಹೇಳುವ ಯಾವುದೇ ವಿಚಾರವನ್ನು ಆಟಗಾರ್ತಿಯರು ಮೈದಾನದಲ್ಲಿ ಶಿಸ್ತಿನಿಂದ ಮಾಡುತ್ತಿಲ್ಲ ಎಂದು ಕೋಚ್‌ಗಳು ಅಸಮಾಧಾನ ಹೊರಹಾಕಿದ್ದಾರೆ. ಈ ಎಲ್ಲಾ ವಿವಾದಗಳ ಬಗ್ಗೆ ಇಲ್ಲಿಯವರೆಗೂ ಯಾವುದೇ ರೀತಿಯಲ್ಲೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪ್ರತಿಕ್ರಿಯಿಸಿಲ್ಲ. ಮತ್ತು ಸಂಪೂರ್ಣವಾಗಿ ಮೌನಕ್ಕೆ ಜಾರಿದೆ. ಪುರುಷರ ತಂಡದಲ್ಲಿಯೂ ಇದೇ ಪರಿಸ್ಥಿತಿ ಇದ್ದು, ಆಟಗಾರರು ಮತ್ತು ಪಿಸಿಬಿ ನಡುವೆ ಉತ್ತಮ ಹೊಂದಾಣಿಕೆಯಿಲ್ಲ. ಇದು ಹೀಗೆ ಮುಂದುವರಿದರೆ, ಪಾಕಿಸ್ತಾನ ಅಂತ ಒಂದು ಕ್ರಿಕೆಟ್​ ತಂಡವಿತ್ತು ಎಂದು ಮುಂದೊಂದು ದಿನ ನೆನಪಿಸಿಕೊಂಡು ನಗಬೇಕಷ್ಟೇ,(ಏಜೆನ್ಸೀಸ್).