ಪಾಕ್ ಪುರುಷರು ಆಡದಿದ್ದರೇನಂತೆ, ಫೆಬ್ರವರಿ 15ಕ್ಕೆ ಪಾಕ್ ಮಹಿಳೆಯರು ಭಾರತದ ವಿರುದ್ಧ ಆಡಲಿದ್ದಾರೆ!
ನವದೆಹಲಿ: ಪಾಕಿಸ್ತಾನ ಪುರುಷರ ತಂಡ ಭಾರತ ವಿರುದ್ಧದ ಟಿ20 ವಿಶ್ವಕಪ್ (Men's T20 World Cup) ಪಂದ್ಯ ಬಹಿಷ್ಕರಿಸಿರುವ ನಡುವೆ ಪಾಕಿಸ್ತಾನ ಮಹಿಳಾ ತಂಡ (Pakistan Women's A team) ಅದೇ ದಿನ ಅಂದರೆ ಫೆಬ್ರವರಿ 15ಕ್ಕೆ ಬ್ಯಾಂಕಾಕ್ನಲ್ಲಿ ನಿಗದಿಯಾಗಿರುವ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ (Rising Stars Asia Cup) ಟೂರ್ನಿಯ ಪಂದ್ಯದಲ್ಲಿ ಭಾರತದ ವಿರುದ್ಧ ಆಡಲಿದೆ. ಮಹಿಳಾ ತಂಡಕ್ಕೆ ಇದುವರೆಗೆ ಸರ್ಕಾರ ಅಥವಾ ಪಿಸಿಬಿಯಿಂದ ಯಾವುದೇ ಸೂಚನೆ ಬಂದಿಲ್ಲ ಎನ್ನಲಾಗಿದೆ. ಫೆಬ್ರವರಿ 13ರಿಂದ 22ರವರೆಗೆ ಥಾಯ್ಲೆಂಡ್ನ ಬ್ಯಾಂಕಾಕ್ನಲ್ಲಿ ನಡೆಯಲಿರುವ ಮಹಿಳೆಯರ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಭಾರತ ಎ ತಂಡ ಟೂರ್ನಿಯ ಮೊದಲ ದಿನ ಯುಎಇ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. ಫೆಬ್ರವರಿ 15ರಂದು ಭಾರತ ಮತ್ತು ಪಾಕಿಸ್ತಾನ ಎ ತಂಡಗಳು ಮುಖಾಮುಖಿ ಆಗಲಿವೆ. ಇದರೊಂದಿಗೆ ಫೆ. 15ಕ್ಕೆ ಭಾರತ-ಪಾಕ್ ನಡುವೆ ಪಂದ್ಯವೊಂದು ನಡೆಯುವುದು ನಿಶ್ಚಿತವೆನಿಸಿದೆ. ಟೂರ್ನಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸಲಿದ್ದು, ಭಾರತ, ಪಾಕಿಸ್ತಾನ ಎ ಜತೆಗೆ ಯುಎಇ, ನೇಪಾಳ ಎ ಗುಂಪಿನಲ್ಲಿವೆ. ಬಾಂಗ್ಲಾದೇಶ ಎ, ಶ್ರೀಲಂಕಾ ಎ, ಮಲೇಷ್ಯಾ ಮತ್ತು ಆತಿಥೇಯ ಥಾಯ್ಲೆಂಡ್ ತಂಡಗಳು ಬಿ ಗುಂಪಿನಲ್ಲಿವೆ. ಭಾರತ ತಂಡ ಫೆಬ್ರವರಿ 17ರಂದು ನೇಪಾಳ ವಿರುದ್ಧ ತನ್ನ 3ನೇ ಹಾಗೂ ಅಂತಿಮ ಲೀಗ್ ಪಂದ್ಯ ಆಡಲಿದೆ. ಎರಡೂ ಗುಂಪಿನ ಅಗ್ರ 2 ತಂಡಗಳು ನಾಕೌಟ್ ಹಂತಕ್ಕೇರಲಿದ್ದು, ಫೆಬ್ರವರಿ 20ರಂದು ಸೆಮಿಫೈನಲ್ನಲ್ಲಿ ಸೆಣಸಲಿವೆ. ಫೆಬ್ರವರಿ 22ಕ್ಕೆ ಫೈನಲ್ ನಿಗದಿಯಾಗಿದೆ.
ಶ್ರೀಲಂಕಾಕ್ಕೆ ತೆರಳಿದ ಪಾಕ್ ತಂಡ
ಭಾರತ ವಿರುದ್ಧದ ಪಂದ್ಯ ಬಹಿಷ್ಕರಿಸಿರುವುದರಿಂದ ಐಸಿಸಿ ತೆಗೆದುಕೊಳ್ಳುವ ಕಠಿಣ ಕ್ರಮದ ಬಗ್ಗೆ ಇನ್ನೂ ಸ್ಪಷ್ಟತೆ ಸಿಗದಿರುವ ನಡುವೆ ಪಾಕಿಸ್ತಾನ ಕ್ರಿಕೆಟ್ ತಂಡ ಟಿ20 ವಿಶ್ವಕಪ್ಗಾಗಿ ಮಂಗಳವಾರ ಶ್ರೀಲಂಕಾಕ್ಕೆ ಪ್ರಯಾಣಿಸಿತು. ಹೊಸ ವಿಶ್ವಕಪ್ ಕಿಟ್ನೊಂದಿಗೆ ಪಾಕ್ ತಂಡ ಲಾಹೋರ್ನಲ್ಲಿ ಹೋಟೆಲ್ನಿಂದ ಬಸ್ ಮೂಲಕ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಿದ ವಿಡಿಯೋವನ್ನು ಪಿಸಿಬಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದೆ. "ಭಾರತ ವಿರುದ್ಧದ ಪಂದ್ಯ ಬಹಿಷ್ಕರಿಸುವುದು ನಮ್ಮ ನಿರ್ಧಾರವಲ್ಲ. ಸರ್ಕಾರ ಮತ್ತು ಪಿಸಿಬಿ ಹೇಳಿದಂತೆ ನಾವು ಕೇಳುತ್ತೇವೆ' ಎಂದು ಪಾಕ್ ನಾಯಕ ಸಲ್ಮಾನ್ ಅಘಾ ಹೇಳಿದ್ದಾರೆ. ಪಾಕ್ ತಂಡ ಶನಿವಾರ ಕೊಲಂಬೊದಲ್ಲಿ ನೆದರ್ಲೆಂಡ್ ವಿರುದ್ಧ ಆಡುವ ಮೂಲಕ ಟಿ20 ವಿಶ್ವಕಪ್ ಅಭಿಯಾನ ಆರಂಭಿಸಬೇಕಾಗಿದೆ. ಅದಕ್ಕೆ ಮುನ್ನ ಬುಧವಾರ ಐರ್ಲೆಂಡ್ ವಿರುದ್ಧ ಅಭ್ಯಾಸ ಪಂದ್ಯವೊಂದು ನಿಗದಿಯಾಗಿದೆ.
*ಕ್ರಿಕೆಟ್ ಜಗತ್ತಿನ ಪ್ರತಿಕ್ರಿಯೆಗಳ ನಂತರ ಮುಂದಿನ 4&5 ದಿನಗಳಲ್ಲಿ ಪಾಕಿಸ್ತಾನದ ನಿಲುವು ಬದಲಾಗಬಹುದು. ಇದೇನು ಹೊಸದೆನಿಸದು. ಯಾಕೆಂದರೆ ಪಾಕಿಸ್ತಾನದ ಕ್ರಿಕೆಟಿಗರು ಇದೇ ರೀತಿ ನಿವೃತ್ತಿಯನ್ನು 4 ದಿನಗಳ ಬಳಿಕ ಹಿಂಪಡೆದ ದೃಷ್ಟಾಂತಗಳಿವೆ. ಇನ್ನಷ್ಟು ಸಮಯ ಆಡಲು ಅಭಿಮಾನಿಗಳು ಹೇಳಿದರು ಎಂಬ ಸಮಜಾಯಿಷಿಯನ್ನೂ ನೀಡಿದ್ದಿದೆ. ಇದೇ ರೀತಿ ಫೆ. 15ಕ್ಕೆ ಮುನ್ನ ಪಾಕಿಸ್ತಾನ, ಭಾರತ ವಿರುದ್ಧ ಆಡುವುದಾಗಿ ಹೇಳಬಹುದು.
| ಸುನೀಲ್ ಗಾವಸ್ಕರ್, ಮಾಜಿ ಕ್ರಿಕೆಟಿಗ