ಪಾಕ್ ಸುದ್ದಿ ವಾಹಿನಿಯಲ್ಲಿ ಫೇಕ್ ವಿಡಿಯೋ ಪ್ರಸಾರ
- ಹೈಡ್ರಾಮಾ ಮೊಟುಕುಗೊಳಿಸಿದ ಪಾಕಿಸ್ತಾನದ ನಾಟಕ ಇನ್ನೂ ಮುಗಿದಿಲ್ಲ
- ಪಾಕಿಸ್ತಾನ ಸುದ್ದಿ ಮಾಧ್ಯಮದಲ್ಲಿ ಬಿಸಿಸಿಐ ಉಪಾಧ್ಯಕ್ಷರ ಫೇಕ್ ವಿಡಿಯೋ ಪ್ರಸಾರ
- ಈ ಕುರಿತು ಸ್ವತಃ ರಾಜೀವ್ ಶುಕ್ಲಾ ಸ್ಪಷ್ಟನೆ
ನವದೆಹಲಿ: ಐಸಿಸಿ ಎಚ್ಚರಿಕೆ ಹಾಗೂ ಬಿಸಿಬಿ ಮನವಿ ಬೆನ್ನಲ್ಲೇ ತಮ್ಮ ಹೈಡ್ರಾಮಾ ಮೊಟುಕುಗೊಳಿಸಿದ ಪಾಕಿಸ್ತಾನ, ತಾವು ಫೆ.15ರಂದು ಭಾರತ ವಿರುದ್ಧದ ಟಿ20 ವಿಶ್ವಕಪ್ ಪಂದ್ಯವನ್ನು ಆಡುತ್ತೇವೆ ಎಂದಿತು. ಇದಾದ ಬಳಿಕವೂ ಅಲ್ಲಲ್ಲಿ ಸಣ್ಣ ನಾಟಕಗಳನ್ನು ಮಾಡುತ್ತಿರುವ ಪಿಸಿಬಿ ಮತ್ತೊಮ್ಮೆ ನರಿಬುದ್ಧಿ ತೋರಿದೆ ಎಂಬುದಕ್ಕೆ ಈ ಫೇಕ್ ವಿಡಿಯೋನೇ ಸಾಕ್ಷಿ.
ಫೆ.15ರಂದು ಇಂಡೋ-ಪಾಕ್ ಕದನ
ಇಂಡೋ-ಪಾಕ್ ಕದನಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಮಾತನಾಡಿರುವ ವಿಡಿಯೋ ಎಂದು ಪ್ರಸಾರ ಮಾಡಿರುವ ಪಾಕಿಸ್ತಾನಿ ಮಾಧ್ಯಮಗಳು, ಮತ್ತೊಮ್ಮೆ ಸುಖಾಸುಮ್ಮನೆ ಭಾರತವನ್ನು ಕೆಣಕಿದೆ. ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಸುತ್ತ ಈಗಾಗಲೇ ಅನೇಕ ಉದ್ವಿಗ್ನ ಪರಿಸ್ಥಿತಿಗಳು ನಡೆದಿದ್ದು, ಈ ಮಧ್ಯೆ, ಹೊಸದೊಂದು ನಾಟಕವನ್ನು ಪಾಕ್ ಮಾಡಿರುವುದು ಹಲವರ ಪಿತ್ತವನ್ನು ನೆತ್ತಿಗೇರಿಸಿದೆ.
ಬಿಸಿಸಿಐ ಉಪಾಧ್ಯಕ್ಷ ಸ್ಪಷ್ಟನೆ
ಮಾಜಿ ನಾಯಕ ಶೋಯೆಬ್ ಮಲಿಕ್ ಪಾಕಿಸ್ತಾನದ ಟಿವಿ ಕಾರ್ಯಕ್ರಮವೊಂದರಲ್ಲಿ ನಿರೂಪಕರಾಗಿ ಭಾಗಿಯಾಗಿದ್ದು, ಅದರಲ್ಲಿ, ಭಾರತ ಮತ್ತು ಪಾಕಿಸ್ತಾನ ಟಿ20 ವಿಶ್ವಕಪ್ ಕುರಿತು ಪಾಕ್ ಹೊಡೆದ ಯು-ಟರ್ನ್ ಬಗ್ಗೆ ಉಪಾಧ್ಯಕ್ಷ ರಾಜೀವ್ ಶುಕ್ಲಾ ಹೇಗೆಲ್ಲ ಪ್ರತಿಕ್ರಿಯಿಸಿದ್ದಾರೆ ಎಂಬ ಫೇಕ್ ವಿಡಿಯೋವನ್ನು ARY ಎಂಬ ಸುದ್ದಿ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗಿದೆ. ಇದು ಅಲ್ಲಿನ ಸೋಷಿಯಲ್ ಮೀಡಿಯಾಗಳಲ್ಲಿಯೂ ವೈರಲ್ ಆಗಿದೆ. ಇದಕ್ಕೆ ಕಿಡಿಕಾರಿರುವ ರಾಜೀವ್ ಶುಕ್ಲಾ, ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಶುಕ್ಲಾ ಹೇಳಿದ್ದಿಷ್ಟು
ಅವರು ಪ್ರಸಾರ ಮಾಡಿರುವ ವಿಡಿಯೋ ನನ್ನದ್ದಲ್ಲ. ಆ ಹೇಳಿಕೆಗಳು ನಾನು ನೀಡಿರುವುದಲ್ಲ. ಬದಲಿಗೆ ಎಐ ಬಳಸಿ ರಚಿಸಲಾದ ವಿಡಿಯೋಗಳು. ದೃಶ್ಯಕ್ಕೆ ನಕಲಿ ಆಡಿಯೋವನ್ನು ಸಿಂಕ್ ಮಾಡಲಾಗಿದೆ. ಇದ್ಯಾವುದು ನನ್ನ ಮಾತುಗಳಲ್ಲ. ಇಂಥಾ ದಾರಿತಪ್ಪಿಸುವ ವಿಡಿಯೊಗಳನ್ನು ಯಾರೂ ನಂಬಬೇಡಿ ಮತ್ತು ಶೇರ್ ಮಾಡಬೇಡಿ. ಈ ರೀತಿಯ ದೃಶ್ಯಗಳು ನಿಮ್ಮ ಗಮನಕ್ಕೆ ಬಂದರೆ ನನಗೆ ವರದಿ ಮಾಡಿ" ಎಂದು ರಾಜೀವ್ ಶುಕ್ಲಾ ತಮ್ಮ 'ಎಕ್ಸ್'ನಲ್ಲಿ ಬರೆದುಕೊಂಡಿದ್ದಾರೆ,(ಏಜೆನ್ಸೀಸ್).