ಪಾಕಿಸ್ತಾನ ಮಹಿಳಾ ತಂಡದ ವಿರುದ್ಧ ಟ್ರೋಲ್​  
ಕ್ರಿಕೆಟ್

ಹೊಟ್ಟೆ ತುಂಬಾ ತಿಂದು ಹೋಗಿ... ಮಹಿಳಾ ಟಿ20 ವಿಶ್ವಕಪ್​ನಿಂದ ಹೊರಬಿದ್ದ ಪಾಕ್​ಗೆ ಫ್ಯಾನ್ಸ್​ ಆಕ್ರೋಶ! ಟ್ರೋಲ್​ಗಳ ಸುರಿಮಳೆ

ಪ್ರಮುಖ ಮುಖ್ಯಾಂಶಗಳು

  • ಮಹಿಳಾ ಟಿ20 ವಿಶ್ವಕಪ್​ ಟೂರ್ನಿಯಿಂದ ಪಾಕಿಸ್ತಾನ ಹೊರಗೆ
  • ಗ್ರೂಪ್​ ಸ್ಟೇಜ್​ ಹಂತದಲ್ಲೇ ಹೊರಬಿದ್ದ ಪಾಕ್​ಗೆ ಫ್ಯಾನ್ಸ್ ಛೀಮಾರಿ
Pakistan: ಪ್ರಸಕ್ತ ನಡೆಯುತ್ತಿರುವ ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ಎದುರೇ ಸೋತ ಮೇಲೆ ಗೆಲುವಿನ ಲಯವನ್ನು ಸಂಪೂರ್ಣವಾಗಿ ಮರೆತ ಪಾಕಿಸ್ತಾನ, ಇದೀಗ ಬಹುಬೇಗನೇ ಎಕ್ಸಿಟ್​ ಆಗಿರುವುದು ಸದ್ಯ ಭಾರಿ ಟೀಕೆ, ಟ್ರೋಲ್​ಗಳಿಗೆ ಗುರಿಯಾಗಿದೆ.  
ಟೂರ್ನಿಯ ಮೊದಲ ಮೂರು ಪಂದ್ಯಗಳಲ್ಲಿ (ಭಾರತ, ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ) ಹೀನಾಯ ಸೋಲುಂಡ ಪಾಕಿಸ್ತಾನ, ಗ್ರೂಪ್​ ಸ್ಟೇಜ್​ನಲ್ಲಿಯೇ ಮನೆಗೆ ಹೋಗಿರುವುದು ಸದ್ಯ ಭಾರೀ ಮುಖಭಂಗಕ್ಕೆ ಕಾರಣವಾಗಿದೆ. ತಂಡವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಸಾಧ್ಯವಾಗದ ಮ್ಯಾನೇಜ್​ಮೆಂಟ್​ ಮತ್ತು ಹೆಡ್ ಕೋಚ್ ವಹಾಬ್ ರಿಯಾಜ್ ವಿರುದ್ಧ ಪಾಕಿಸ್ತಾನಿ ಕ್ರಿಕೆಟ್​ ಪ್ರೇಮಿಗಳು ತೀವ್ರ ಟೀಕೆ, ಟ್ರೋಲ್​ಗಳ ಸುರಿಮಳೆಯನ್ನು ಹರಿಸಿದ್ದಾರೆ.
ಮೊದಲ ಪಂದ್ಯದಲ್ಲಿ ಹರ್ಮನ್​ಪ್ರೀತ್​ ಕೌರ್​ ಪಡೆಯ ಎದುರೇ ಬರೋಬ್ಬರಿ 65 ರನ್‌ಗಳ ಭಾರಿ ಅಂತರದಲ್ಲಿ ಹೀನಾಯ ಸೋಲುಂಡ ಫಾತಿಮಾ ಸನಾ ನಾಯಕತ್ವದ ಪಾಕಿಸ್ತಾನ ತಂಡ, ನಂತರದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 2 ವಿಕೆಟ್‌ಗಳಿಂದ ಮತ್ತು ಬಾಂಗ್ಲಾದೇಶ ಎದುರು ಕಡಿಮೆ ಸ್ಕೋರ್​ಗೂ ಪೈಪೋಟಿ ಕೊಡಲು ಸಾಧ್ಯವಾಗದೆ ಅವಮಾನಕರ ಸೋಲನ್ನು ಉಂಡಿತು. ಮೈದಾನದಲ್ಲಿನ ಪ್ರದರ್ಶನ ಕಳಪೆಯಾದರೆ, ಅತ್ತ ಹೊರಗೆ ಆಟಗಾರ್ತಿಯರ ವರ್ತನೆ ಕಂಡು ಫ್ಯಾನ್ಸ್​ ಅಕ್ಷರಶಃ ಕೆರಳಿದ್ದಾರೆ.
ಟೂರ್ನಿಯ ಸಮಯದಲ್ಲಿ ರೆಸ್ಟೋರೆಂಟ್‌ಗಳಲ್ಲಿ ಸುತ್ತಾಡಿಕೊಂಡು ಭೂರಿ ಭೋಜನ ಸವಿದಿರುವ ಪಾಕಿಸ್ತಾನಿ ಆಟಗಾರ್ತಿಯರು, ಮಾಲ್​ನಲ್ಲಿ ಶಾಪಿಂಗ್​ ಮಾಡುತ್ತಿರುವ ವಿಡಿಯೊಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದನ್ನು ನೋಡಿ ಕೆಂಡಕಾರಿರುವ ಫ್ಯಾನ್ಸ್​, ಹೇಗಿದ್ದರೂ ಟೂರ್ನಿಯಿಂದ ಹೊರಬಂದಿದ್ದೀರಾ? ಈಗಲಾದರೂ ಹೊಟ್ಟೆ ತುಂಬುವಂತೆ ಹೋಗಿ ತಿನ್ನಿ ಎಂದು ವ್ಯಂಗ್ಯವಾಡಿದ್ದಾರೆ. 
ಮುಖ್ಯವಾಗಿ, ಹಿರಿಯ ಆಟಗಾರ್ತಿ ನಿದಾ ದಾರ್ ಮತ್ತು ಅವರ ತಂಡದ ಆಟಗಾರ್ತಿಯರಾದ ಅಲಿಯಾ ರಿಯಾಜ್ ಮತ್ತು ಅವರ ಪತಿ ಅಲಿ ಯೂನಿಸ್ (ಮಾಜಿ ನಾಯಕ ವಕಾರ್ ಯೂನಿಸ್ ಅವರ ಸಹೋದರ) ಜೊತೆಗಿನ ದೃಶ್ಯಗಳಿಂದ ನೆಟಿಗರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಮತ್ತೊಂದೆಡೆ, ಸತತ ಸೋಲುಗಳು ಹೀಗೆಯೇ ಮುಂದುವರಿದರೆ, ಪಾಕಿಸ್ತಾನದಲ್ಲಿ ಮಹಿಳಾ ಕ್ರಿಕೆಟ್‌ನ ಭವಿಷ್ಯ ಅಪಾಯದಲ್ಲಿದೆ ಎಂದು ಮಾಜಿ ಹಿರಿಯ ಆಟಗಾರ್ತಿಯರು ಎಚ್ಚರಿಸಿದ್ದಾರೆ,(ಏಜೆನ್ಸೀಸ್).