ಪಾಕಿಸ್ತಾನ ಕ್ರಿಕೆಟ್ ಮುಖ್ಯಸ್ಥ ಮೊಹ್ಸಿನ್ ನಖ್ವಿ
- ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರೀ ಹೈಡ್ರಾಮಾ ಸೃಷ್ಟಿಸಿದ ಪಾಕ್
- ಸತತ ಸೋಲಿನಿಂದಲೂ ಪಾಕ್ ಕ್ರಿಕೆಟ್ ಮಂಡಳಿಗೆ ಬಂದಿಲ್ಲ ಬುದ್ಧಿ
- ಪಿಸಿಬಿ ಹಾಗೂ ಮುಖ್ಯಸ್ಥನಿಗೆ ಹಿಗ್ಗಾಮುಗ್ಗಾ ಜಾಡಿಸಿದ ಪಾಕ್ ಕ್ರಿಕೆಟಿಗ
ನವದೆಹಲಿ: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರೀ ಹೈಡ್ರಾಮಾ ಸೃಷ್ಟಿಸಿ, ಕ್ರಿಕೆಟ್ ಪ್ರಿಯರ ಛೀಮಾರಿಗೆ ತುತ್ತಾದ ಪಾಕಿಸ್ತಾನ (Pakistan) ತಂಡ, ಕಡೆಗೂ ಗೆಲುವು ಸಾಧಿಸುವಲ್ಲಿ ಮುಗ್ಗರಿಸಿತು. ಸೂಪರ್-8 ಹಂತದ ನಿರ್ಣಾಯಕ ಪಂದ್ಯದಲ್ಲಿ ಶ್ರೀಲಂಕಾ ಎದುರು ಹೀನಾಯ ಸೋಲು ಅನುಭವಿಸುವ ಮೂಲಕ ಟೂರ್ನಿಯಿಂದ ಹೊರಬಿದ್ದ ಪಾಕ್ ಕ್ರಿಕೆಟ್ ತಂಡದ ಸ್ಥಿತಿ ಸದ್ಯ ಅದೋ ಗತಿಯಾಗಿದೆ.
ಯಾವಾಗ ಬಾಂಗ್ಲಾ ವಿರುದ್ಧ ನಿಲ್ಲುವುದಾಗಿ ಹೇಳಿದ ಪಿಸಿಬಿ, ಟೀಮ್ ಇಂಡಿಯಾ ಜೊತೆಗೆ ನಾವು ಪಂದ್ಯವನ್ನು ಆಡುವುದಿಲ್ಲ ಎಂದು ದೊಡ್ಡ ನಾಟಕವನ್ನೇ ಆಡಿತು. ಅದಾದ ಕೆಲವೇ ಕೆಲವು ದಿನಗಳಲ್ಲಿ ತಮ್ಮ ಮಾತಿಗೆ ನಿಲ್ಲದೇ, ಭಾರತ ಎದುರು ಪಂದ್ಯವನ್ನಾಡಿ, ಹೀನಾಯವಾಗಿ ಸೋಲುಂಡಿತು. ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ಪಾಕ್, ಅಲ್ಲಿಂದ ನೇರವಾಗಿ ಬಾಂಗ್ಲಾ ವಿರುದ್ಧದ ಏಕದಿನ ಸರಣಿಯಲ್ಲಿಯೂ ಫ್ಲಾಪ್ ಪ್ರದರ್ಶನ ನೀಡಿ ಸೋಲು ಅನುಭವಿಸಿತು. ಈ ಎಲ್ಲ ಬೆಳವಣಿಗೆಯಿಂದ ಸಿಡಿಮಿಡಿಗೊಂಡ ಪಾಕ್ ಬ್ಯಾಟರ್ ಅಹ್ಮದ್ ಶೆಹಜಾದ್, ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಪಾಕಿಸ್ತಾನ ತಂಡದಲ್ಲಿರುವ ಆಟಗಾರರು ಸತತವಾಗಿ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಇದೆಲ್ಲ ಗೊತ್ತಿದ್ದರೂ ಸಹ ಪಿಸಿಬಿ ಮಾತ್ರ ಅವರನ್ನು ಬೆಂಬಲಿಸುತ್ತಲೇ ಬಂದಿದೆ. ಅವರಿಗೆ ಅವಕಾಶಗಳನ್ನು ಕೊಡುತ್ತಾ, ಇಂಥಾ ಹೀನಾಯ ಸೋಲಿಗೆ ಕಾರಣವಾಗುತ್ತಿದೆ. ಅಸಲಿಗೆ, ನೀವು (ಮೊಹ್ಸಿನ್ ನಖ್ವಿ) ಆಡಿಸುತ್ತಿರುವ ಆ 6ರಿಂದ 8 ಕ್ರಿಕೆಟಿಗರ ಸಾಮರ್ಥ್ಯ ಅಷ್ಟಕ್ಕಷ್ಟೇ ಎಂದಿದ್ದಾರೆ.
5-6 ವರ್ಷಗಳ ಹಿಂದೆ ಶುರುವಾದ ಪಾಕಿಸ್ತಾನ ಸೂಪರ್ ಲೀಗ್ ಹಾಗೂ ಇಂದಿನ ಕ್ರಿಕೆಟ್ ತಂಡದ ಪ್ರಮುಖ ಮುಖಗಳು ಈ ಆಟಗಾರರು. ಇವರೆಲ್ಲ ನಿಜಕ್ಕೂ ಪಾಕ್ ಹಣೆಬರಹ ಬದಲಿಸಲು ಸಾಧ್ಯವೇ? ಇವರಿಗೆಲ್ಲ ನೀವು ಹಲವಾರು ಪ್ರಾಯೋಜಕತ್ವಗಳನ್ನು ಕೊಟ್ಟಿದ್ದೀರಿ. ಅವರ ಮೇಲೆ ಹಣವನ್ನು ಸುರಿದಿದ್ದೀರಿ. ಪಿಎಸ್ಎಲ್ನಲ್ಲಿ ನಾಯಕತ್ವದ ಜವಾಬ್ದಾರಿಯನ್ನು ನೀಡಿದ್ದೀರಿ. ಇಡೀ ಪಾಕಿಸ್ತಾನ ಕ್ರಿಕೆಟ್ ತಂಡವನ್ನೇ ಆ 6 ಕ್ರಿಕೆಟಿಗರು ಮತ್ತು ಅವರ ಏಜೆಂಟರಿಗೆ ಒಪ್ಪಿಸಿದ್ದೀರಿ. ಈಗ ಏನು ಮಾಡಿದ್ದಾರೆ ಅವರು? ಎಂದರು.
ಈ ಆಟಗಾರರ ಧೈರ್ಯ ಎಷ್ಟಿದೆಯೆಂದರೆ, ಇಂದಿಗೂ ತಮ್ಮ ತಪ್ಪನ್ನು ಒಪ್ಪಿಕೊಳ್ಳಲು ಅವರಾರು ಸಿದ್ಧರಿಲ್ಲ. ಅವರ ಅಹಂಕಾರ ಮುರಿಯುತ್ತಿಲ್ಲ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈಗ ತುಂಬಾ ದುರ್ಬಲವಾಗಿದೆ. ನನ್ನ ಜೀವನದಲ್ಲಿ ಪಿಸಿಬಿಯಷ್ಟು ದುರ್ಬಲ ಮತ್ತೊಂದಿಲ್ಲ. ಹೊಸ ಮುಖಗಳನ್ನು ತರುವ ಕೆಲಸವನ್ನು ಬಿಟ್ಟು, ತಮ್ಮವರನ್ನೇ ಆಡಿಸುವ ಮೂಲಕ ವ್ಯವಸ್ಥೆಯನ್ನು ಹಾಳು ಮಾಡಿಟ್ಟಿದೆ ಎಂದು ಶೆಹಜಾದ್ ತಮ್ಮ ಯೂಟ್ಯೂಬ್ನಲ್ಲಿ ಕಿಡಿಕಾರಿದ್ದಾರೆ,(ಏಜೆನ್ಸೀಸ್).