- ಟಿ20 ವಿಶ್ವಕಪ್‌ನಲ್ಲಿ ದ.ಆಫ್ರಿಕಾ ಎದುರು ಟೀಮ್ ಇಂಡಿಯಾಗೆ ಹೀನಾಯ ಸೋಲು
- ದ.ಆಫ್ರಿಕಾ ವಿರುದ್ಧ ಅಬ್ಬರಿಸಲು ಪರದಾಡಿದ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ನೆನಪು
- ಮೂರು ಪಂದ್ಯಗಳಲ್ಲಿ ಕೊಹ್ಲಿ ನೀಡಿದ ಇನ್ನಿಂಗ್ಸ್ ಗೆಲುವಿಗೆ ಕಾರಣ
- ಟೀಮ್ ಇಂಡಿಯಾ ದಿಗ್ಗಜ ಬ್ಯಾಟರ್ ನೆನೆದ ಪಾಕಿಸ್ತಾನಿ ಕ್ರಿಕೆಟಿಗರು
Virat Kohli: ನಿನ್ನೆ (ಫೆ.22) ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಎರಡನೇ ಸೂಪರ್-8 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಹೀನಾಯ ಸೋಲು ಅನುಭವಿಸಿತು. ಸೆಮಿಫೈನಲ್ಗೆ ಪ್ರವೇಶ ಪಡೆಯಬೇಕು ಎಂದರೆ ಈ ಹಂತದ ಪ್ರತಿಯೊಂದು ಪಂದ್ಯವನ್ನು ಗೆಲ್ಲುವುದು ಅನಿವಾರ್ಯ ಎಂಬುದನ್ನು ಅರಿತಿದ್ದರೂ ಕಳಪೆ ಪ್ರದರ್ಶನ ಮೂಲಕ ಸೋತಿದ್ದು ಸದ್ಯ ಕ್ರಿಕೆಟ್ ಪ್ರಿಯರ ಬೇಸರಕ್ಕೆ ಕಾರಣವಾಗಿದೆ. ಈ ಮಧ್ಯೆ, ಟೀಮ್ ಇಂಡಿಯಾ ದಿಗ್ಗಜ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಇನ್ನಿಂಗ್ಸ್ ನೆನಪಿಸಿಕೊಂಡ ಪಾಕ್ ಕ್ರಿಕೆಟಿಗರು, ಸ್ಟಾರ್ ಆಟಗಾರನಿಗೆ ಸಲಾಂ ಎಂದಿದ್ದಾರೆ.
ದಾಖಲೆಗಳ ಸರದಾರ
ದಕ್ಷಿಣ ಆಫ್ರಿಕಾ ನೀಡಿದ ಗುರಿಯನ್ನು ತಲುಪಲು ತೀರ ಹೆಣಗಾಡಿದ ಟೀಮ್ ಇಂಡಿಯಾ ಪರಿಸ್ಥಿತಿಯನ್ನು ಗಮನಿಸಿದ ಕ್ರಿಕೆಟ್ ಪ್ರಿಯರು, ಈ ಕಠಿಣ ಸಂದರ್ಭದಲ್ಲಿ ಟೀಮ್ ಇಂಡಿಯಾದ ದಿಗ್ಗಜ ಬ್ಯಾಟರ್, ದಾಖಲೆಗಳ ಸರದಾರ, ರನ್ಮಷಿನ್ ವಿರಾಟ್ ಕೊಹ್ಲಿ ಇರಬಾರದಿತ್ತೇ? ಎಂದು ಕೊರಗಾಡಿದರು. ಏಕೆ ನಾವು ಕಿಂಗ್ ಕೊಹ್ಲಿಯನ್ನು ಚೇಸ್ಮಾಸ್ಟರ್ ಎಂದು ಕರೆಯುತ್ತೇವೆ ಎಂಬುದನ್ನು ಈ ಸಂದರ್ಭದಲ್ಲಿ ನೆನಪಿಸಿದರು. ಇದೇ ಸಮಯದಲ್ಲಿ ತಂಡದಲ್ಲಿ ಕೊಹ್ಲಿ ಇದ್ದಿದ್ರೆ ನಮಗಿಂತ ಹೀನಾಯ ಸೋಲು ಬರುತ್ತಿತ್ತೇ? ಎಂದು ಅವರ ಹಳೆಯ ಇನ್ನಿಂಗ್ಸ್ ಅನ್ನು ಮುನ್ನೆಲೆಗೆ ತಂದರು.
ಭಾರತ ತನ್ನ ಟಿ20 ವಿಶ್ವಕಪ್ ಇತಿಹಾಸದಲ್ಲಿ 150ಕ್ಕಿಂತ ಹೆಚ್ಚು ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ್ದು ಕೇವಲ ಮೂರು ಬಾರಿ ಮಾತ್ರ. ಅದು 2014ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 173, 2016ರಲ್ಲಿ ಆಸ್ಟ್ರೇಲಿಯಾ ವಿರುದ್ಧ 161 ಮತ್ತು 2022ರಲ್ಲಿ ಪಾಕಿಸ್ತಾನ ವಿರುದ್ಧ 160. ಅಸಲಿಗೆ ಈ ಮೂರು ಪಂದ್ಯಗಳಲ್ಲಿಯೂ ಒಂದೇ ಒಂದು ಸಾಮಾನ್ಯ ಅಂಶವಿದೆ. ಅದೇ ವಿರಾಟ್ ಕೊಹ್ಲಿ. ಕಾರಣ, ಈ ಮೂರು ಪಂದ್ಯಗಳಲ್ಲಿಯೂ ಗುರಿಯನ್ನು ಚೇಸ್ ಮಾಡುವಾಗಲೇ ಗೆದ್ದಿರುವುದು. ಅದು ಕೊಹ್ಲಿ ಅವರ ಇನ್ನಿಂಗ್ಸ್ನಿಂದಲೇ ಎಂಬುದು ಇಲ್ಲಿ ಗಮನಾರ್ಹ.
ಇದಕ್ಕೆ 'ಕಿಂಗ್ ಕೊಹ್ಲಿ' ಅನ್ನೋದು
'ಕ್ರಿಕ್ಟುಡೇ' ಕ್ರಿಕೆಟ್ ವರದಿ ಪ್ರಕಾರ, ಪಾಕಿಸ್ತಾನದ ಮೊಹಮ್ಮದ್ ಅಮಿರ್, ಬಸಿತ್ ಅಲಿ ಮತ್ತು ಅಹಮ್ಮದ್ ಶೆಹಜಾದ್ ಕೊಹ್ಲಿ ಇನ್ನಿಂಗ್ಸ್ ಅನ್ನು ಸ್ಮರಿಸಿದರು. ಪಂದ್ಯದ ಪರಿಸ್ಥಿತಿ ಮತ್ತು ಬೇಡಿಕೆಗೆ ತಕ್ಕಂತೆ ಟೀಮ್ ಇಂಡಿಯಾ ಬ್ಯಾಟ್ಸ್‌ಮನ್‌ಗಳು ಆಡಲಿಲ್ಲ. ಇದರಿಂದಾಗಿ ದಕ್ಷಿಣ ಆಫ್ರಿಕಾ ತಂಡ ಸೂರ್ಯಕುಮಾರ್ ಯಾದವ್ ಪಡೆಯನ್ನು ಬೆತ್ತಲೆಯಾಗಿಸಿತು. ಇದೇ ಮೊದಲ ಬಾರಿಗೆ ಕೊಹ್ಲಿ ಇಲ್ಲದೆಯೇ ನಾವು ಚೇಸ್ ಮಾಡ್ತಿದ್ದೀವಿ ಎಂಬುದನ್ನೇ ಅವರು ಮರೆತಿದ್ದಾರೆ ಎಂದು ಅಮಿರ್ ಹೇಳಿದರು.
ಸ್ಫೋಟಕ ಇನ್ನಿಂಗ್ಸ್, ಚೇಸ್ಮಾಸ್ಟರ್
ಈಗಿರುವ ಟೀಮ್ ಇಂಡಿಯಾಗೆ ಬಹುಶಃ ಕೊಹ್ಲಿ ಮತ್ತು ರೋಹಿತ್ ಶರ್ಮ ನಮ್ಮ ತಂಡದಲ್ಲಿ ಇಲ್ಲ ಎಂಬುದು ಗೊತ್ತಿಲ್ಲ ಅನಿಸುತ್ತದೆ. ಅವರಿಬ್ಬರು ಪರಿಸ್ಥಿತಿಗೆ ತಕ್ಕಂತೆ ಆಡುತ್ತಿದ್ದರು. ಇಲ್ಲಿ ಹೆಡ್ಕೋಚ್ ಗೌತಮ್ ಗಂಭೀರ್ ಮತ್ತು ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ದೊಡ್ಡ ತಪ್ಪು ಮಾಡಿದ್ದಾರೆ. "ಪಾಕಿಸ್ತಾನದಂತೆಯೇ, ಭಾರತವೂ ಮೂವರು ಎಡಗೈ ಬೌಲರ್‌ಗಳನ್ನು ಕಳುಹಿಸುವ ಮೂಲಕ ತಪ್ಪು ಮಾಡಿದೆ. ಎದುರಾಳಿ ತಂಡಗಳು ಆಫ್-ಸ್ಪಿನ್ನರ್‌ಗಳನ್ನು ಇಳಿಸಿವೆ. ನೀವು ಎರಡು ವಿಕೆಟ್‌ಗಳನ್ನು ಕಳೆದುಕೊಂಡಾಗ, 180 ರನ್‌ಗಳ ಗುರಿಯನ್ನು ಬೆನ್ನಟ್ಟುವುದು ಕಠಿಣ ಕೆಲಸ ಎಂದಿದ್ದಾರೆ.
"ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತ ಮೂರು ಬಾರಿ 150ಕ್ಕಿಂತ ಹೆಚ್ಚಿನ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದೆ. ಈ ಮೂರರಲ್ಲೂ ವಿರಾಟ್ ಕೊಹ್ಲಿ ಅವರ 70, 82 ಮತ್ತು 82 ರನ್ ಇನ್ನಿಂಗ್ಸ್ಗಳೇ ಗೆಲುವು ತಂದುಕೊಟ್ಟಿರುವುದು" ಎಂದು ಅಮಿರ್ ಹೇಳಿದರು. ಈ ಸಂದರ್ಭದಲ್ಲಿ ಕೊಹ್ಲಿ ಅವರ ಇನ್ನಿಂಗ್ಸ್ ಮುನ್ನೆಲೆಗೆ ತಂದ ವಿಚಾರಕ್ಕೆ ಬಸಿತ್ ಮತ್ತು ಶೆಹಜಾದ್ ಮೆಚ್ಚುಗೆ ವ್ಯಕ್ತಪಡಿಸಿದರು,(ಏಜೆನ್ಸೀಸ್).