ಪಾಕ್ ಕ್ರಿಕೆಟಿಗ ಮೊಹಮ್ಮದ್ ಅಮೀರ್
- ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಉತ್ತಮ ಇನ್ನಿಂಗ್ಸ್
- ಸಂಜು ಆಟವನ್ನು ಹೊಗಳಿದ ಪಾಕ್ ಕ್ರಿಕೆಟಿಗ ಮೊಹಮ್ಮದ್ ಅಮೀರ್
- ಟೀಮ್ ಇಂಡಿಯಾ ಆಟ ಕಳಪೆಯಾಗಿದೆ ಎಂದ ಅಮೀರ್
ಕರಾಚಿ: ನಿನ್ನೆ (ಮಾ.01) ಕೋಲ್ಕತದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಕೊನೆಯ ಸೂಪರ್-8 ಹಾಗೂ ಟಿ20 ವಿಶ್ವಕಪ್ನ ನಿರ್ಣಾಯಕ ಪಂದ್ಯದಲ್ಲಿ ಭಾರತ ಸಂಜು ಸ್ಯಾಮನ್ಸ್ ಅವರ ಅದ್ಭುತ ಇನ್ನಿಂಗ್ಸ್ ಸಹಾಯದಿಂದ ರೋಚಕ ಜಯ ಸಾಧಿಸಿತು. ತಂಡದ ಪರ ಕೊನೆಯವರೆಗೂ ಅಜೇಯರಾಗಿ ಉಳಿದ ಸಂಜು, ಕಡೆಗೂ ಟೀಮ್ ಇಂಡಿಯಾದ ಸೆಮೀಸ್ ಕನಸನ್ನು ಈಡೇರಿಸಿದರು.
ಸಂಜು ಸ್ಯಾಮ್ಸನ್ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನಕ್ಕೆ ಮನಸೋತ ಕ್ರಿಕೆಟ್ ಪ್ರಿಯರು ಮತ್ತು ಮಾಜಿ ಹಿರಿಯ ಕ್ರಿಕೆಟಿಗರು, ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ಮತ್ತೊಂದೆಡೆ, ಇತರೆ ದೇಶದ ಕ್ರಿಕೆಟಿಗರು ಕೂಡ ಸಂಜು ಅವರ ಆಕರ್ಷಕ ಇನ್ನಿಂಗ್ಸ್ ಬಗ್ಗೆ ಗುಣಗಾನ ಮಾಡುತ್ತಿದ್ದಾರೆ. ಇದೇ ವಿಚಾರಕ್ಕೆ ಮೂಗು ತೂರಿಸಿರುವ ಪಾಕ್ ಕ್ರಿಕೆಟಿಗ ಮೊಹಮ್ಮದ್ ಅಮೀರ್, ಸಂಜು ಬೆನ್ನುತಟ್ಟಿದ್ದೇ ಆದರೂ ಟೀಮ್ ಇಂಡಿಯಾ ಬ್ಯಾಟಿಂಗ್ ಪಡೆಯನ್ನು ಟೀಕಿಸಿದ್ದಾರೆ.
ತಮ್ಮ ತಂಡ ಶ್ರೀಲಂಕಾ ವಿರುದ್ಧ ಅಬ್ಬರಿಸಲು ಹೋಗಿ ಮುಗ್ಗರಿಸಿದ್ದೇ ತಡ, ಟಿ20 ವಿಶ್ವಕಪ್ ಟೂರ್ನಿಯಿಂದ ಎಕ್ಸಿಟ್ ಆಯಿತು. ಇದನ್ನು ಮರೆತ ಅಮೀರ್, ಟೀಮ್ ಇಂಡಿಯಾ ಯಾವುದೇ ಕಾರಣಕ್ಕೂ ಸೆಮೀಸ್ಗೆ ಹೋಗುವುದಿಲ್ಲ ಎಂದು ಭವಿಷ್ಯ ನುಡಿದಿದ್ದರು. ಆದರೀಗ, ಆ ಭವಿಷ್ಯವಾಣಿ ಮತ್ತು ಲೆಕ್ಕಾಚಾರಗಳೆಲ್ಲವೂ ಇದೀಗ ತಲೆಕೆಳಗಾಗಿದೆ. ಭಾರತ ಕಡೆಗೂ ಸೆಮೀಸ್ ಕನಸನ್ನು ಈಡೇರಿಸಿಕೊಂಡಿದೆ. ಇದನ್ನು ಸಹಿಸಲಾರದ ಅಮೀರ್, ಮತ್ತೊಮ್ಮೆ ನಾಲಿಗೆ ಹರಿಬಿಟ್ಟಿದ್ದಾರೆ.
'ಹಾರ್ನ ಮನ ಹೇ' ಪಾಡ್ಕಾಸ್ಟ್ನಲ್ಲಿ ಈ ಕುರಿತಂತೆ ಮಾತನಾಡಿದ ಅಮೀರ್, "ನನ್ನ ಮಾತನ್ನು ಅವರು ಸುಳ್ಳು ಮಾಡಿದರು. ಇಲ್ಲಿ ಆ ಕ್ರೆಡಿಟ್ ಯಾರಿಗೆ ಸಲ್ಲುತ್ತೆ. ಕೇವಲ ಸಂಜು ಸ್ಯಾಮ್ಸನ್ಗೆ ಮಾತ್ರ. ತಮ್ಮ ಕರಿಯರ್ನಲ್ಲಿ ಇದು ಸ್ಯಾಮ್ಸನ್ ಅವರ ಅತ್ಯುತ್ತಮ ಇನ್ನಿಂಗ್ಸ್. ಐಪಿಎಲ್ ಮತ್ತು ಬೇರೆ ಫಾರ್ಮೆಟ್ನ ಕ್ರಿಕೆಟ್ನಲ್ಲಿ ಅವರ ಆಟ ನೋಡಿದ್ದೀನಿ. ಆದರೆ, ವೆಸ್ಟ್ ಇಂಡೀಸ್ ವಿರುದ್ಧ ಆಡಿದ ರೀತಿ ಗಮನಾರ್ಹ. ಅದರಲ್ಲೂ, ಮಾಡು ಇಲ್ಲವೇ ಮಡಿ ಎನ್ನುವಂತ ಪರಿಸ್ಥಿತಿಯಲ್ಲಿ ಖಂಡಿತ ಮೆಚ್ಚುವಂತದ್ದು" ಎಂದರು.
"ಇದನ್ನು ಪೂರ್ತಿಯಾಗಿ ಕ್ರಿಕೆಟ್ ಆ್ಯಂಗಲ್ನಲ್ಲಿ ನೋಡಿ ಹೇಳುವುದಾದರೆ, ಟೀಮ್ ಇಂಡಿಯಾ ಒಳ್ಳೆಯ ಕ್ರಿಕೆಟ್ ಆಡುತ್ತಿಲ್ಲ. ಅವರ ಫೀಲ್ಡಿಂಗ್ ನೋಡಿ. ಮೂರರಿಂದ ನಾಲ್ಕು ಕ್ಯಾಚ್ಗಳನ್ನು ಬಿಟ್ಟರು. ಫೀಲ್ಡ್ ಮಾಡಲು ಒದ್ದಾಡಿದರು. ಬುಮ್ರಾ ಬಿಟ್ಟರೆ ಉಳಿದೆಲ್ಲ ಬೌಲರ್ಗಳು ರನ್ಗಳನ್ನು ನೀಡಿದರು. ಭಾರತ ಕೇವಲ ಒಬ್ಬ ಬಲಿಷ್ಠ ಬೌಲರ್ ಮೇಲೆಯೇ ಹೆಚ್ಚು ಅವಲಂಬಿಸಿದೆ" ಎಂದು ಅಮೀರ್ ಹೇಳಿದ್ದಾರೆ,(ಏಜೆನ್ಸೀಸ್).