ಅಭಿಷೇಕ್ ಶರ್ಮ(ಬಲ), ಮೊಹಮ್ಮದ್ ಅಮಿರ್ (ಎಡ)
- ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಬ್ಬರಿಸದ ಅಭಿಷೇಕ್ ಶರ್ಮ
- ಸತತ ಮೂರು ಪಂದ್ಯಗಳಲ್ಲಿ ಒಂದು ರನ್ ಗಳಿಸದೆ ಔಟ್
- ಅಭಿಷೇಕ್ ಒಬ್ಬ ಟೆಕ್ನಿಕ್ ಇಲ್ಲದೆ ಆಡುವ ಬ್ಯಾಟರ್ ಎಂದ ಪಾಕ್ ಆಟಗಾರ
Abhishek Sharma: ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಬ್ಯಾಕ್ ಟು ಬ್ಯಾಕ್ ಗೆಲುವು ಸಾಧಿಸಿದೆ. ಆಡಿರುವ ನಾಲ್ಕು ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಗೆಲುವಿನ ಓಟ ಮುಂದುವರೆಸಿದೆ. ಈಗಾಗಲೇ ಸೂಪರ್ 8 ಹಂತಕ್ಕೆ ನೇರ ಪ್ರವೇಶ ಪಡೆದಿರುವ ಸೂರ್ಯಕುಮಾರ್ ಯಾದವ್ ಪಡೆಗೆ ಅಭಿಷೇಕ್ ಶರ್ಮ ಅವರ ಕಳಪೆ ಪ್ರದರ್ಶನ ಸದ್ಯ ತಲೆನೋವಾಗಿ ಕಾಡಲಾರಂಭಿಸಿದೆ.
ತಂಡದ ಪರ ಸ್ಫೋಟಕ ಇನ್ನಿಂಗ್ಸ್ ಆಡುವ ಅಭಿಷೇಕ್ ಶರ್ಮ ಟಿ20 ವಿಶ್ವಕಪ್ನಲ್ಲಿ ಮಾತ್ರ ಡಕ್ಔಟ್ ಆಗುತ್ತಿರುವುದು ಈಗ ಕ್ರಿಕೆಟ್ ಪ್ರಿಯರನ್ನು ಕೆರಳಿಸಿದೆ. ಉತ್ತಮ ಆರಂಭಿಕ ಬ್ಯಾಟರ್ ಆಗಿ ಗುರುತಿಸಿಕೊಂಡಿರುವ ಅಭಿಷೇಕ್, ಅದ್ಯಾಕೋ ಒಂದೇ ಒಂದು ರನ್ ಕಲೆಹಾಕಲು ತೀರ ಪರದಾಡುವ ಪರಿಸ್ಥಿತಿ ತಲುಪಿದ್ದಾರೆ. ಯುಎಸ್ಎ, ಪಾಕಿಸ್ತಾನ ಮತ್ತು ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯಗಳಲ್ಲಿ ಅಭಿಷೇಕ್ ಶೂನ್ಯಕ್ಕೆ ಔಟ್ ಆಗಿರುವುದು ಇದೀಗ ಪಾಕಿಸ್ತಾನದ ಆಟಗಾರ ಮೊಹಮ್ಮದ್ ಅಮೀರ್ ಸೊಕ್ಕಿನ ಮಾತಿಗೆ ಕಾರಣವಾಗಿದೆ.
"ಅಭಿಷೇಕ್ ಒಬ್ಬ ಅದ್ಭುತ ಬ್ಯಾಟರ್ ಏನಲ್ಲ. ಆತ ಟೆಕ್ನಿಕ್ ಇಲ್ಲದೆ ಆಡುವ ಕ್ರಿಕೆಟಿಗ. ಅಭಿಷೇಕ್ರನ್ನು ನಾನು ನಮ್ಮದೇ ತಂಡದ ಬ್ಯಾಟರ್ ಸೈಮ್ ಆಯುಬ್ಗೆ ಹೋಲಿಸುತ್ತೇನೆ. ಕಾರಣ, ಆಯುಬ್ ಬಂದಾಗ ಅವನಿಗೆ ಯಾವ ಕಡೆ ಹೊಡೆಯಬೇಕು ಅನ್ನೋದೇ ಗೊತ್ತಿರಲಿಲ್ಲ. ಆಡಬಾರದ ಜಾಗದಲ್ಲಿ ಆಡ್ತಿದ್ದ. ಲೆಗ್ಸೈಡ್ ರನ್ಗಳನ್ನು ಕಲೆಹಾಕುತ್ತಿದ್ದ. ಬಾಲ್ ನಾಲ್ಕನೇ ಅಥವಾ ಐದನೇ ಸ್ಟಂಪ್ನತ್ತ ಬಂದರೆ ಅವನಿಗೆ ಏನು ಮಾಡಬೇಕೋ ತಿಳಿಯುತ್ತಿರಲಿಲ್ಲ. ಅಭಿಷೇಕ್ ಕೂಡ ಹಾಗೆಯೇ" ಎಂದಿದ್ದಾರೆ.
'ಹಾರ್ನ ಮನ ಹೈನ್' ಶೋನಲ್ಲಿ ಈ ಕುರಿತಂತೆ ಮಾತನಾಡಿದ ಅಮಿರ್, ಸೈಮ್ ಮತ್ತು ಅಭಿಷೇಕ್ ಇಬ್ಬರೂ ಸಹ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಉಳಿಯಬೇಕು ಎಂದರೆ ತಮ್ಮ ಆಲ್ರೌಂಡ್ ಪ್ರದರ್ಶನದ ಮೇಲೆ ಹೆಚ್ಚು ಗಮನ ಹರಿಸಬೇಕು. ಮೈದಾನದಲ್ಲಿ ಎಲ್ಲಿಯವರೆಗೆ ಇವರು ಕಷ್ಟ ಪಡೋದಿಲ್ಲವೋ, ಅಲ್ಲಿಯವರೆಗೆ ಅಂತಾರಾಷ್ಟ್ರೀಯ ಬೌಲರ್ಗಳು ನಿಮ್ಮ ಸ್ಟ್ರಾಂಗ್ ಜೋನ್ಗೆ ಬೌಲ್ ಮಾಡೋದಿಲ್ಲ ಎಂದರು,(ಏಜೆನ್ಸೀಸ್).