- ಫೆ.15ರಂದು ಕೊಲೊಂಬೊದಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ಪಂದ್ಯ
- ಈ ಪಂದ್ಯದಲ್ಲಿ 61 ರನ್ಗಳಿಂದ ಹೀನಾಯ ಸೋಲುಂಡ ಪಾಕ್
- ಸೋತ ಬೆನ್ನಲ್ಲೇ ಭಾರೀ ಆಕ್ರೋಶ, ಟೀಕೆಗಳ ಸುರಿಮಳೆ
- ಅವಮಾನ ಸಹಿಸಲಾಗದೆ ಇಬ್ಬರು ಆಟಗಾರರಿಗೆ ತಂಡದಿಂದ ಗೇಟ್ಪಾಸ್
Pakistan: ಫೆ.15ರಂದು ಕೊಲೊಂಬೊದಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಪಡೆ 61 ರನ್ಗಳ ಭರ್ಜರಿ ಜಯ ದಾಖಲಿಸಿತು. ಈ ಮೂಲಕ ಟಿ20 ವಿಶ್ವಕಪ್ನಲ್ಲಿ ಮತ್ತೆ ಪಾಕ್ ತಂಡಕ್ಕೆ ಮಣ್ಣು ಮುಕ್ಕಿಸಿತು. ಭಾರತಕ್ಕೆ ಇದು 8ನೇ ಗೆಲುವು ಎಂಬುದು ಮತ್ತೊಂದು ವಿಶೇಷ. ಈ ಮಧ್ಯೆ, ಹೀನಾಯ ಸೋಲುಂಡ ಪಾಕ್ಗೆ ಭಾರೀ ಟೀಕೆ, ವ್ಯಂಗ್ಯಗಳು ವ್ಯಕ್ತವಾಗುತ್ತಿವೆ. ಈ ಅವಮಾನ ತಾಳಲಾರದ ಪಿಸಿಬಿ, ಇದೀಗ ಇಬ್ಬರು ಸ್ಟಾರ್ ಆಟಗಾರರನ್ನು ತಂಡದಿಂದ ಕೈಬಿಡಲು ಮುಂದಾಗಿದೆ.
ಸಾಲು ಸಾಲು ಟೀಕೆ, ಅವಮಾನ
61 ರನ್ಗಳಿಂದ ಟೀಮ್ ಇಂಡಿಯಾ ಎದುರು ಮಂಡಿಯೂರಿದ ಪಾಕಿಸ್ತಾನಕ್ಕೆ ಮುಂದಿನ ಪಂದ್ಯದಲ್ಲಿಯೂ ಸೋಲಿನ ಭೀತಿ ಕಾಡಲಾರಂಭಿಸಿದೆ. ಒಂದೆಡೆ, ಭಾರತ ವಿರುದ್ಧ ಸೋಲುಂಡ ಬೆನ್ನಲ್ಲೇ ಪಾಕಿಸ್ತಾನಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಮತ್ತೊಂದೆಡೆ, ಮಾಜಿ ಕ್ರಿಕೆಟಿಗರಾದ ವಾಸಿಮ್ ಅಕ್ರಂ, ಶೋಯೆಬ್ ಅಕ್ತರ್, ಶಾಹಿದ್ ಆಫ್ರಿದಿ ಸೇರಿದಂತೆ ಹಲವು ಮಾಜಿ ಹಿರಿಯ ಆಟಗಾರರು ತಂಡದಿಂದ ಕೆಲವರನ್ನು ಹೊರಗಿಡುವಂತೆ ಪಿಸಿಬಿಗೆ ಒತ್ತಾಯಿಸಿದ್ದಾರೆ.
ಇವರಿಬ್ಬರಿಗೂ ಗೇಟ್ಪಾಸ್
ಭಾರೀ ಆಕ್ರೋಶ, ಸಹಿಸಲಾಗದ ಅವಮಾನಗಳ ಬೆನ್ನಲ್ಲೇ ಪಾಕ್ ಕ್ರಿಕೆಟ್ ಮಂಡಳಿ ಇದೀಗ ನಮೀಬಿಯಾ ವಿರುದ್ಧದ ಮುಂದಿನ ಪಂದ್ಯಕ್ಕೆ ಟಿ20 ವಿಶ್ವಕಪ್ ತಂಡದಿಂದ ಬಾಬರ್ ಅಜಮ್ ಮತ್ತು ಶಾಹೀನ್ ಶಾ ಆಫ್ರಿದಿಯನ್ನು ಕಿತ್ತುಬಿಸಾಡಲು ನಿರ್ಧರಿಸಿದೆ. ಟೀಮ್ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ಇವರಿಬ್ಬರು ಉತ್ತಮ ಪ್ರದರ್ಶನ ನೀಡಲಿಲ್ಲ ಎಂಬ ಕಾರಣಕ್ಕೆ ತೆಗದುಹಾಕಲಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ.
ಇವರಿಬ್ಬರ ಸ್ಥಾನಕ್ಕೆ ಯಾರು?
"ಬುಧವಾರ (ಫೆ.18) ನಮೀಬಿಯಾ ವಿರುದ್ಧದ ಪಂದ್ಯದಿಂದ ಬಾಬರ್ ಮತ್ತು ಶಾಹೀನ್ರನ್ನು ಕೈಬಿಡಲಿರುವ ಮ್ಯಾನೇಜ್ಮೆಂಟ್, ಇವರಿಬ್ಬರ ಸ್ಥಾನಕ್ಕೆ ಸಲ್ಮಾನ್ ಮಿರ್ಜಾ/ನಸೀಮ್ ಶಾ ಮತ್ತು ಫಖರ್ ಜಮಾನ್ ಅವರನ್ನು ಆಡಿಸಲು ನಿರ್ಧರಿಸಿದೆ ಎಂದು ವರದಿಯಾಗಿದೆ. ಇದೇನಾದರೂ ಆಗಿದ್ದೇ ಆದರೆ, ಇಲ್ಲಿಗೆ ಬಾಬರ್ ಮತ್ತು ಶಾಹೀನ್ರ ವಿಶ್ವಕಪ್ ಪಯಣ ಅಂತ್ಯಗೊಳ್ಳುತ್ತದೆ. ಮತ್ತು ಮುಂದಿನ ದಿನಗಳಲ್ಲಿ ಅವಕಾಶಗಳ ಕೊರೆತಯೂ ಕಾಡುತ್ತದೆ ಎಂಬುದರಲ್ಲಿ ಅನುಮಾನವೇ ಇಲ್ಲ,(ಏಜೆನ್ಸೀಸ್).