ಪಾಕಿಸ್ತಾನ ಕ್ರಿಕೆಟ್ ಮುಖ್ಯಸ್ಥ ಮೊಹ್ಸಿನ್ ನಖ್ವಿ
- ಫೆಬ್ರವರಿ 7ರಿಂದ ಟಿ20 ವಿಶ್ವಕಪ್ ಮೆಗಾ ಟೂರ್ನಮೆಂಟ್ ಆರಂಭ
- ಭಾರತ ವಿರುದ್ಧ ಪಂದ್ಯವನ್ನು ಆಡೋದಿಲ್ಲ ಎಂದಿರುವ ಪಾಕ್ಗೆ ಹೆಚ್ಚಿದ ಬಿಸಿ
- ಶ್ರೀಲಂಕಾ ಹಾಗೂ ಐಸಿಸಿ ವಾರ್ನಿಂಗ್ನಿಂದ ನಿರ್ಧಾರ ಬದಲಿಸುವ ಅನಿವಾರ್ಯತೆ
Pakistan: ಇದೇ ಫೆ.7ರಿಂದ ಆರಂಭವಾಗಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್‌ಗೆ ಟೂರ್ನಿಯ ಮೊದಲ ಪಂದ್ಯದಲ್ಲೇ ಪಾಕಿಸ್ತಾನ (Pakistan) ಹೀನಾಯ ಸೋಲುಂಡರೆ, ಅತ್ತ ಟೀಮ್ ಇಂಡಿಯಾ ವಿಜಯದ ಮೂಲಕ ಶುಭಾರಂಭ ಮಾಡಿದೆ. ಇದು ಪಾಕ್ಗೆ ಈಗಾಗಲೇ ಬೆಂಕಿಯಿಟ್ಟಂತಾಗಿದೆ. ಈ ಮಧ್ಯೆ, ಮೆಗಾ ಟೂರ್ನಮೆಂಟ್ನಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮಾಡುತ್ತಿರುವ ಹೈಡ್ರಾಮಾಗೆ ಇದೀಗ ಬ್ರೇಕ್ ಬೀಳುವ ಎಲ್ಲ ಲಕ್ಷಣಗಳು ಕಂಡುಬಂದಿವೆ.
ಫೆ.15ರಂದು ಭಾರತ ವಿರುದ್ಧ ಆಡಲ್ಲ!
ಫೆ.15ರಂದು ಶ್ರೀಲಂಕಾದ ಕೊಲೊಂಬಾ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ವಿರುದ್ಧದ ಪಂದ್ಯವನ್ನು ನಾವು ಆಡೋದಿಲ್ಲ, ಬದಲಿಗೆ ಬಹಿಷ್ಕರಿಸುತ್ತಿದ್ದೇವೆ ಎಂದಿರುವ ಪಿಸಿಬಿ ನಾಟಕವಂತು ಸದ್ಯ ಕ್ರಿಕೆಟ್ ಪ್ರಿಯರಿಂದ ಮಾತ್ರವಲ್ಲ, ಬಿಸಿಸಿಐ ಮತ್ತು ಐಸಿಸಿಗೂ ಸಾಕಾಗಿ ಹೋಗಿದೆ. ಇದಕ್ಕೆ ಫುಲ್ಸ್ಟಾಪ್ ಎಳೆಯಲು ಚೆಕ್ಮೇಟ್ ಇಟ್ಟಿರುವ ಶ್ರೀಲಂಕಾ, ನೀವು ಈ ಪಂದ್ಯವನ್ನು ಆಡಲೇಬೇಕು. ಇಲ್ಲವಾದರೆ, ನಮಗೆ ನಿಮ್ಮ ನಿರ್ಧಾರದಿಂದ ದೊಡ್ಡ ಮಟ್ಟದ ನಷ್ಟ ಉಂಟಾಗಲಿದೆ ಎಂದು ತಿಳಿಸಿದೆ.
ಪಾಕ್ಗೆ ಶ್ರೀಲಂಕಾ ಚೆಕ್ಮೇಟ್
2009ರಲ್ಲಿ ಲಾಹೋರ್ನಲ್ಲಿ ನಮ್ಮ ತಂಡದ ಮೇಲೆ ಆದಂತಹ ದಾಳಿ ಇಂದಿಗೂ ಮರೆಯಲು ಸಾಧ್ಯವಿಲ್ಲ. ಅಂದು ಯಾವ ಕ್ರಿಕೆಟ್ ತಂಡವು ಪಾಕಿಸ್ತಾನಕ್ಕೆ ಬರಲು ಮುಂದಾಗಲಿಲ್ಲ. ಆದ್ರೆ, ನಾವು ಧೈರ್ಯ ಮಾಡಿ ಇಡೀ ಟೂರ್ನಿಯನ್ನು ಮುಗಿಸಿಕೊಟ್ಟೆವು. ಅದನ್ನು ಪಿಸಿಬಿ ಮರೆಯುವಂತಿಲ್ಲ. ಭಾರತ ವಿರುದ್ಧ ನೀವು ಆಡದೆ ಹೋದರೆ, ಆ ಪಂದ್ಯದಿಂದ ಬರುವ ಆದಾಯ ತಪ್ಪುತ್ತದೆ. ಇದರಿಂದ ಶ್ರೀಲಂಕಾ ಕ್ರಿಕೆಟ್ಗೆ ಭಾರೀ ನಷ್ಟವಾಗುತ್ತದೆ ಎಂಬುದು ನಿಮಗೆ ನೆನಪಿರಲಿ. ಈಗ ನಿರ್ಧಾರ ನಿಮ್ಮ ಕೈಯಲ್ಲಿದೆ ಎಂದು ಎಚ್ಚರಿಸಿದೆ. ಈ ವಿಚಾರ ಪತ್ರದ ಮೂಲಕ ಪಿಸಿಬಿಗೆ ತಲುಪುತ್ತಿದ್ದಂತೆ ಇದೀಗ ಪಾಕ್ ಮುಖ್ಯಸ್ಥ ಮೊಹ್ಸಿನ್ ನಖ್ವಿ ತಮ್ಮ ಸರ್ಕಾರದೊಂದಿಗೆ ಮಾತುಕತೆ ನಡೆಸಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ.
ಸರ್ಕಾರದ ಜತೆ ಮತ್ತೆ ಮಾತುಕತೆ
ಪ್ರಸ್ತುತ, ಟಿ20 ವಿಶ್ವಕಪ್ ಟೂರ್ನಿ ಆಡಲು ಅನುಮತಿ ಕೊಟ್ಟಿರುವ ಪಾಕಿಸ್ತಾನ ಸರ್ಕಾರ, ತಮ್ಮ ತಂಡಕ್ಕೆ ಭಾರತ ವಿರುದ್ಧದ ಪಂದ್ಯವನ್ನು ಮಾತ್ರ ಬಹಿಷ್ಕರಿಸುವಂತೆ ಹೇಳಿದೆ. ಆದರೀಗ, ಶ್ರೀಲಂಕಾ ಕೊಟ್ಟಿರುವ ಎಚ್ಚರಿಕೆ ಮತ್ತು ಐಸಿಸಿ ಕಳುಹಿಸಿರುವ ವಾರ್ನಿಂಗ್ ಎರಡೂ ಪಿಸಿಬಿಗೆ ದೊಡ್ಡ ತಲೆನೋವು ತಂದಿಟ್ಟಿದ್ದು, ಒಂದೇ ಒಂದು ಪಂದ್ಯವನ್ನು ಬಹಿಷ್ಕರಿಸಿದರೆ ಮುಂದಿನ ದಿನಗಳಲ್ಲಿ ಭಾರೀ ನಷ್ಟ ಮತ್ತು ಅಡಚಣೆಗಳನ್ನು ಎದುರಿಸುವ ಅನಿವಾರ್ಯತೆ ಎದುರಾಗಿದೆ. ಈ ನಿಟ್ಟಿನಲ್ಲಿ, ಸರ್ಕಾರದ ಜತೆ ಮಾತುಕತೆ ನಡೆಸಲು ನಖ್ವಿ ಮುಂದಾಗಿದ್ದಾಗಿ ಕ್ರಿಕೆಟ್ ವರದಿಗಳು ತಿಳಿಸಿವೆ,(ಏಜೆನ್ಸೀಸ್).