- ಬಾಂಗ್ಲಾದೇಶ ತಂಡದ ಸ್ಥಾನಕ್ಕೆ ಸ್ಕಾಟ್ಲ್ಯಾಂಡ್ಗೆ ಅವಕಾಶ
- ಟಿ20 ವಿಶ್ವಕಪ್ ಟೂರ್ನಿಯಿಂದ ಬಾಂಗ್ಲಾ ಕಿಕ್ಔಟ್
- ಭಾರತದ ಮೇಲಿನ ಒಲವಿನಿಂದ ಐಸಿಸಿ ಈ ನಿರ್ಧಾರ
- ಐಸಿಸಿ ವಿರುದ್ಧ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಕಿಡಿ
ನವದೆಹಲಿ: ಐಸಿಸಿ ಬಾಂಗ್ಲಾದೇಶ ತಂಡವನ್ನು ಟಿ20 ವಿಶ್ವಕಪ್ ಟೂರ್ನಿಯಿಂದ ಕೈಬಿಟ್ಟಿದ್ದೇ ತಡ, ಆರಂಭದಿಂದಲೂ ಬಾಂಗ್ಲಾದೇಶ ಬೆನ್ನಿಗೆ ನಿಂತಿರುವ ಪಾಕಿಸ್ತಾನಕ್ಕೆ ಇದೀಗ ಬೆಂಕಿ ಇಟ್ಟಂತಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ವಿರುದ್ಧ ತಿರುಗಿಬಿದ್ದಿರುವ ಪಿಸಿಬಿ ಮತ್ತು ಪಾಕಿಸ್ತಾನಿ ಕ್ರಿಕೆಟಿಗರು, ಭಾರತವನ್ನು ಬೆಂಬಲಿಸಿ, ಬಾಂಗ್ಲಾ ತಂಡವನ್ನು ಹೊರ ನೂಕಿದ್ದು ಸರಿಯಲ್ಲ ಎಂದು ಕಿಡಿಕಾರುತ್ತಿದ್ದಾರೆ.
ಭಾರತಕ್ಕೆ ದುಬೈನಲ್ಲಿ ಆಡಲು ಅನುವು ಮಾಡಿಕೊಟ್ಟ ವಿಚಾರ ಪರೋಕ್ಷವಾಗಿ ಪ್ರಸ್ತಾಪ
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸುವುದಿಲ್ಲ ಎಂದಿದ್ದ ಬಿಸಿಬಿಯನ್ನು ಕಡೆಗೂ ಐಸಿಸಿ ವಿಶ್ವಕಪ್ ಟೂರ್ನಿಯಿಂದ ಕಿತ್ತುಬಿಸಾಡಿದೆ. ಅವರ ಸ್ಥಾನಕ್ಕೆ ಸ್ಕಾಟ್ಲ್ಯಾಂಡ್ಗೆ ಅವಕಾಶ ನೀಡಿದೆ. ಈ ಮಧ್ಯೆ, ಮೂಗು ತೂರಿರುವ ಪಾಕಿಸ್ತಾನಕ್ಕೆ ಈಗಾಗಲೇ ಐಸಿಸಿ ಖಡಕ್ ಎಚ್ಚರಿಕೆಯನ್ನೂ ರವಾನಿಸಿದೆ. ಆದರೆ, ಭಾರತ ವಿರುದ್ಧ ತೋರುವ ನರಿಬುದ್ಧಿಯನ್ನು ಬಿಡಲಾರದ ಪಾಕ್ ಕ್ರಿಕೆಟಿಗರು, ಐಸಿಸಿ ಭಾರತಕ್ಕೆ ತಕ್ಕಂತೆ ಕಾರ್ಯನಿರ್ವಹಿಸುತ್ತಿದೆ ಎಂದಿದ್ದಾರೆ.
ಐಸಿಸಿ ಆಗಿಯೇ ಇರಬೇಕು
ಈ ಬಗ್ಗೆ ಟ್ವೀಟ್ (ಪ್ರಸ್ತುತ ಎಕ್ಸ್) ಮಾಡಿರುವ ಪಾಕ್ ಮಾಜಿ ಕ್ರಿಕೆಟಿಗ, ಕೋಚ್ ಮೊಹಮ್ಮದ್ ಯೂಸಫ್, ಕ್ರಿಕೆಟ್ ಪ್ರೀತಿಸುವ ಬಾಂಗ್ಲಾದೇಶದಂತಹ ರಾಷ್ಟ್ರವು ಕೇವಲ ಭದ್ರತಾ ಸಮಸ್ಯೆಯಿಂದಾಗಿ ಕ್ರಿಕೆಟ್‌ನಿಂದ ವಂಚಿತರಾಗುವುದನ್ನು ನೋಡಲು ತುಂಬಾ ದುಃಖ ಆಗುತ್ತಿದೆ. ಈ ಹಿಂದೆ ಇದೇ ರೀತಿಯ ಸಮಸ್ಯೆಗಳು ಕಾಡಿದಾಗ, ಬೇರೆ ದೇಶದ ಕ್ರೀಡಾಂಗಣಗಳಲ್ಲಿ ಆಡಿಸಲು ಅವಕಾಶ ನೀಡಲಾಯಿತು. ಇಲ್ಲಿ ಮಾನದಂಡಗಳು ದೇಶದಿಂದ ದೇಶಕ್ಕೆ ಬದಲಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಐಸಿಸಿ ಒಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯಂತೆ ಕಾರ್ಯನಿರ್ವಹಿಸಬೇಕೇ ಹೊರತು ಯಾವುದೋ ಒಂದು ಮಂಡಳಿಯ ಹಿತಾಸಕ್ತಿಗಳನ್ನು ಪೂರೈಸುವಂತೆ ಕಾಣಬಾರದು. ನ್ಯಾಯಸಮ್ಮತತೆ ಮತ್ತು ಸ್ಥಿರತೆ ಜಾಗತಿಕ ಕ್ರಿಕೆಟ್‌ನ ಅಡಿಪಾಯ ಎಂದು ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಅಸಲಿಗೆ, ಯೂಸಫ್ ಇಲ್ಲಿ ಐಸಿಸಿ ಭಾರತ ಪರ ನಿಂತು, ಬಾಂಗ್ಲಾ ತಂಡವನ್ನು ಟಿ20 ವಿಶ್ವಕಪ್ ಟೂರ್ನಿಯಿಂದ ಕಿತ್ತುಬಿಸಾಡಿದೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿರುವುದು ಸ್ಪಷ್ಟ,(ಏಜೆನ್ಸೀಸ್).