- ಇಂದಿನಿಂದ ಟಿ20 ವಿಶ್ವಕಪ್ ಟೂರ್ನಿ ಆರಂಭ
- ಟೂರ್ನಿ ಆರಂಭಕ್ಕೂ ಮುನ್ನ ಪಾಕ್ ಕ್ಯಾಪ್ಟನ್ ಹೇಳಿಕೆ ವೈರಲ್
- ಪರೋಕ್ಷವಾಗಿ ಟೀಮ್ ಇಂಡಿಯಾ ಮತ್ತು ಐಸಿಸಿ ಕುಟುಕಿದ ಸಲ್ಮಾನ್ ಅಲಿ ಅಘಾ
ನವದೆಹಲಿ: ಇಂದಿನಿಂದ (ಫೆ.07) ಟಿ20 ವಿಶ್ವಕಪ್ ಟೂರ್ನಿ ಆರಂಭವಾಗುತ್ತಿದ್ದು, ಕ್ರಿಕೆಟ್ ಪ್ರಿಯರಿಗಂತು ಮಾರ್ಚ್ 8 ರವರೆಗೆ ಭರಪೂರ ಮನರಂಜನೆ ಸಿಗಲಿದೆ. ಈ ಮಧ್ಯೆ, ಭಾರತ ಮತ್ತು ಪಾಕಿಸ್ತಾನ ನಡುವಿನ ವಿವಾದ ಇದೀಗ ದೊಡ್ಡ ಮಟ್ಟದಲ್ಲಿ ಗೊಂದಲ ಸೃಷ್ಟಿಸಿದೆ. ಫೆ.15ರಂದು ಕೊಲೊಂಬೊದಲ್ಲಿ ನಡೆಯಲಿರುವ ಇಂಡೋ-ಪಾಕ್ ಪಂದ್ಯವನ್ನು ಬಹಿಷ್ಕರಿಸುವುದಾಗಿ ಹೇಳಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ತಮ್ಮ ಮಾತಿಗೆ ನಿಲ್ಲುವುದಾಗಿ ಸ್ಪಷ್ಟಪಡಿಸಿದೆ. ಟೂರ್ನಿ ಆರಂಭಕ್ಕೂ ಮುನ್ನ ಕ್ಯಾಪ್ಟನ್ ಸಲ್ಮಾನ್ ಅಲಿ ಅಘಾ ಆಡಿದ ಮಾತುಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಕಿಡಿ ಹಚ್ಚಿದೆ.
ನಾವು ರೋಲ್ ಮಾಡೆಲ್ಸ್!
"ಪ್ರಸ್ತುತ, ಒಂದಷ್ಟು ವಿಷಯಗಳನ್ನು ಬದಿಗಿಟ್ಟು ಮೈದಾನದಲ್ಲಿ ಗೆಲುವಿನತ್ತ ಗಮನ ಹರಿಸಬೇಕಿದೆ. ಹೊರಗೆ ಏನು ನಡೆಯುತ್ತಿದೆ ಎಂಬುದರ ಬಗ್ಗೆ ನಾವು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ನಾವು ಒಂದು ತಂಡವಾಗಿ ಅದರ ಬಗ್ಗೆ ಮಾತನಾಡುವುದಿಲ್ಲ ಎಂದರು. ಇನ್ನೂ ಹ್ಯಾಂಡ್ ಶೇಕ್ ವಿವಾದಕ್ಕೆ ಪ್ರತಿಕ್ರಿಯಿಸಿದ ಅಲಿ, ಇಂತಹ ವಿವಾದಗಳು ಆಟಕ್ಕೆ ಒಳ್ಳೆಯದಲ್ಲ. ನಾವು ವೈಯಕ್ತಿಕವಾಗಿ ಅದರ ಬಗ್ಗೆ ಕೆಟ್ಟದಾಗಿ ಭಾವಿಸದಿದ್ದರೂ, ಕ್ರಿಕೆಟ್‌ಗೆ ಇದು ಸೂಕ್ತವಲ್ಲ. ನಾವು ರೋಲ್ ಮಾಡೆಲ್ಸ್. ಇದು ನಾವೇನು ಮಾಡ್ತೇವೋ, ಮಕ್ಕಳು ಅದನ್ನೇ ಕಲಿಯುತ್ತಾರೆ. ಹೀಗಾಗಿಯೇ ಅಂತಹ ವಿಷಯಗಳನ್ನು ಆದಷ್ಟು ತಪ್ಪಿಸಬೇಕು" ಎಂದಿದ್ದಾರೆ.
ಪಾಕ್ ತಂಡದ ನಾಯಕನ ರೋಲ್ ಮಾಡೆಲ್ ಹೇಳಿಕೆಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಟೀಕೆ, ವ್ಯಂಗ್ಯಗಳಿಗೆ ಗುರಿಯಾಗಿದೆ. ಮತ್ತೊಂದೆಡೆ, ಈಗಾಗಲೇ ಹೇಳಿರುವಂತೆ ಪಾಕ್ ಫೆ.15ರಂದು ಭಾರತ ಎದುರು ಆಡದೆ ಸುಮ್ಮನೆ ಇರಲಿದ್ಯಾ ಅಥವಾ ಕೊನೆ ಕ್ಷಣದಲ್ಲಿ ಕಣಕ್ಕಿಳಿಯಲಿದೆಯೇ ಎಂಬುದನ್ನು ಸದ್ಯ ಕಾದು ನೋಡಬೇಕಿದೆ.
ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಿರುವ ಮೆಗಾ ಟೂರ್ನಮೆಂಟ್ನಲ್ಲಿ ಒಟ್ಟು 20 ತಂಡಗಳು ಭಾಗವಹಿಸುತ್ತಿದ್ದು, ಒಟ್ಟು 50 ಪಂದ್ಯಗಳು ನಡೆಯಲಿವೆ. ಫೈನಲ್ ಪಂದ್ಯ ಮಾರ್ಚ್ 8ರಂದು ಅಹಮದಾಬಾದ್ನಲ್ಲಿ ನಡೆಯಲಿದೆ. ಅಂದಹಾಗೆ, 2026ರ ಟಿ20 ವಿಶ್ವಕಪ್‌ನ ಸ್ವರೂಪ 2024ರಲ್ಲಿ ನಡೆದ ಪಂದ್ಯಾವಳಿಯಂತೆಯೇ ಇರುತ್ತದೆ. 2024ರಲ್ಲಿ 20 ತಂಡಗಳು ಮೊದಲ ಬಾರಿಗೆ ಈ ಪಂದ್ಯಾವಳಿಯಲ್ಲಿ ಆಡಿದ್ದವು. ಮೊದಲ ಸುತ್ತಿನಲ್ಲಿ, 20 ತಂಡಗಳನ್ನು ತಲಾ ಐದು ತಂಡಗಳ ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಆಯಾ ತಂಡಗಳು ತಮ್ಮ ಗುಂಪಿನಲ್ಲಿರುವ ಇತರ ತಂಡಗಳೊಂದಿಗೆ ರೌಂಡ್-ರಾಬಿನ್ ಸ್ವರೂಪದಲ್ಲಿ ಆಡುತ್ತವೆ. ನಾಲ್ಕು ಗುಂಪುಗಳಿಂದ ಅಗ್ರ ಎರಡು ತಂಡಗಳು ಸೂಪರ್ 8 ಹಂತಕ್ಕೆ ಮುನ್ನಡೆಯುತ್ತವೆ.
ಟಿ20 ವಿಶ್ವಕಪ್ 2026 ಗ್ರೂಪ್ಗಳು
ಗ್ರೂಪ್ ಎ: ಭಾರತ (X1), ನಮೀಬಿಯಾ, ನೆದರ್‌ಲ್ಯಾಂಡ್ಸ್, ಪಾಕಿಸ್ತಾನ (Y3), ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ.
ಗ್ರೂಪ್ ಬಿ: ಆಸ್ಟ್ರೇಲಿಯಾ (X2), ಐರ್ಲೆಂಡ್, ಓಮನ್, ಶ್ರೀಲಂಕಾ (Y4), ಜಿಂಬಾಬ್ವೆ.
ಗ್ರೂಪ್ ಸಿ: ಇಂಗ್ಲೆಂಡ್ (Y1), ಇಟಲಿ, ನೇಪಾಳ, ಸ್ಕಾಟ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ (X3).
ಗ್ರೂಪ್ ಡಿ: ಅಫ್ಘಾನಿಸ್ತಾನ, ಕೆನಡಾ, ನ್ಯೂಜಿಲೆಂಡ್ (Y2), ದಕ್ಷಿಣ ಆಫ್ರಿಕಾ (X4), ಯುನೈಟೆಡ್ ಅರಬ್ ಎಮಿರೇಟ್ಸ್.