ಶೆಫಾಲಿಗೆ ಆಕ್ರಮಣಕಾರಿ ಸೆಂಡ್ಆಫ್ ನೀಡಿದ್ದ ಪಾಕ್ ನಾಯಕಿ ಫಾತಿಮಾ ಸನಾಗೆ ಶೇ.10 ದಂಡ!
ದುಬೈ: ಮಹಿಳಾ ಟಿ20 ಏಷ್ಯಾಕಪ್ (Women''s Asia Cup) ಪಂದ್ಯದ ವೇಳೆ ಭಾರತ ತಂಡದ ಆರಂಭಿಕ ಬ್ಯಾಟುಗಾರ್ತಿ ಶೆಫಾಲಿ ವರ್ಮ ಅವರನ್ನು ಔಟ್ ಮಾಡಿದ ಬಳಿಕ ಡಗೌಟ್ಗೆ ಮರಳುವಂತೆ ಸನ್ನೆ ಮಾಡಿ ಆಕ್ರಮಣಕಾರಿಯಾಗಿ ಸೆಂಡ್ ಆಫ್ ನೀಡಿದ್ದ ಪಾಕಿಸ್ತಾನ ತಂಡದ ನಾಯಕಿ ಫಾತಿಮಾ ಸನಾಗೆ ಐಸಿಸಿ ನೀತಿಸಂಹಿತೆಯ ಅನ್ವಯ ಪಂದ್ಯ ಸಂಭಾವನೆಯ ಶೇ. 10 ದಂಡ ಶಿಕ್ಷೆ ವಿಧಿಸಲಾಗಿದೆ.
ಕಳೆದ ಶನಿವಾರ ನಡೆದ ಪಂದ್ಯದಲ್ಲಿ ಭಾರತೀಯ ಇನಿಂಗ್ಸ್ನ 2ನೇ ಓವರ್ ವೇಳೆ ಈ ಘಟನೆ ನಡೆದಿತ್ತು. ಫಾತಿಮಾ ಸನಾಗೆ ಒಂದು ಡಿಮೆರಿಟ್ ಅಂಕವನ್ನೂ ನೀಡಲಾಗಿದೆ.
ಪಾಕಿಸ್ತಾನ ಕೇವಲ 55 ರನ್ಗಳಿಗೆ ಆಲೌಟ್ ಆಗಿದ್ದ ನಡುವೆಯೂ ಫಾತಿಮಾ ಈ ರೀತಿ ಅಹಂಕಾರದಿಂದ ವರ್ತಿಸಿದ್ದು ತೀವ್ರ ಟೀಕೆಗೆ ಗುರಿಯಾಗಿತ್ತು.