ಪಾಕ್ ಆಲ್‌ರೌಂಡರ್ ಹಮ್ಜಾ ನಾಸರ್
- ಆಲ್‌ರೌಂಡರ್ ಹಮ್ಜಾ ನಾಸರ್ ತಂಡದಿಂದ ಎರಡು ವರ್ಷಗಳ ಕಾಲ ಬ್ಯಾನ್
- ಬರೋಬ್ಬರಿ 1 ಮಿಲಿಯನ್ ರೂಪಾಯಿ ಭಾರಿ ದಂಡ
- ವೀಸಾ ಅರ್ಜಿಯಲ್ಲಿ ತಪ್ಪು ಮಾಹಿತಿ ನೀಡಿದ ಬೆನ್ನಲ್ಲೇ ಕಠಿಣ ಕ್ರಮ
ಕರಾಚಿ: ಆಲ್‌ರೌಂಡರ್ ಹಮ್ಜಾ ನಾಸರ್ನನ್ನು ತಂಡದಿಂದ ಎರಡು ವರ್ಷಗಳ ಕಾಲ ಬ್ಯಾನ್ ಮಾಡಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಬರೋಬ್ಬರಿ 1 ಮಿಲಿಯನ್ ರೂಪಾಯಿ ಭಾರಿ ದಂಡವನ್ನು ವಿಧಿಸಿದೆ.
ವೀಸಾ ಅರ್ಜಿಯಲ್ಲಿ ತಪ್ಪು ಮಾಹಿತಿ ನೀಡಿರುವುದು ಕಂಡುಬಂದ ಬೆನ್ನಲ್ಲೇ ಈ ಶಿಸ್ತಿನ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ. ಎರಡು ವರ್ಷಗಳ ಕಠಿಣ ನಿಷೇಧ ಜತೆಗೆ, ಒಂದು ಮಿಲಿಯನ್ ಪಾಕಿಸ್ತಾನಿ ರೂಪಾಯಿ ದಂಡವನ್ನು ಹಾಕಲಾಗಿದೆ. ದೇಶೀಯ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಹಮ್ಜಾ, ವಿಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗುವ ಸಾಧ್ಯತೆಗಳಿತ್ತು. ಆದರೆ, ಅಷ್ಟರೊಳಗೆ ಬ್ಯಾನ್ ಮಾಡಿರುವುದು ಅವರ ಕರಿಯರ್ಗೆ ಕಪ್ಪು ಚುಕ್ಕೆ ಇಟ್ಟಂತಾಗಿದೆ.
ವರದಿಗಳ ಪ್ರಕಾರ, ವೀಸಾಗೆ ಸಲ್ಲಿಕೆಯಾಗಿರುವ ಅರ್ಜಿಯಲ್ಲಿ ಪ್ರಮುಖ ದಾಖಲೆಗಳು ಸರಿಯಿಲ್ಲ ಮತ್ತು ಅನೇಕ ಸಲ್ಲಿಕೆಗಳು ಒಪ್ಪುವಂತಿಲ್ಲ ಎಂಬುದು ವಿಚಾರಣೆಯಲ್ಲಿ ಬಯಲಾಗಿದೆ. ಈ ವಿಷಯದ ಪೂರ್ಣ ತನಿಖೆಯನ್ನು ಮಾಡುವಂತೆ ಮೂವರು ಸದಸ್ಯರ ಸಮಿತಿಯನ್ನು ರಚಿಸಲಾಯಿತು. ಹಮ್ಜಾಗೆ ತಮ್ಮ ಕಡೆಯಿಂದ ಆಗಿರುವ ತಪ್ಪನ್ನು ವಿವರಿಸಲು ಮುಕ್ತ ಅವಕಾಶವನ್ನೂ ನೀಡಲಾಯಿತು. ಎಲ್ಲವನ್ನೂ ಆಲಿಸಿದ ಬಳಿಕ, ಪುರಾವೆಗಳನ್ನು ಪರಿಶೀಲಿಸಿ, ವರದಿಯನ್ನು ಸಲ್ಲಿಸಲಾಯಿತು.
ಸಮಿತಿ ನೀಡಿದ ವರದಿಯನ್ನು ಮೌಲ್ಯಮಾಪನ ಮಾಡಿದ ನಂತರವೇ ಪಿಸಿಬಿ ಆಟಗಾರನನ್ನು ಎರಡು ವರ್ಷಗಳ ಕಾಲ ಪಾಕ್ಕ್ರಿಕೆಟ್ನಿಂದ ಹೊರಗಟ್ಟಿದೆ. ಈ ನಿಯಮದ ಪ್ರಕಾರ, ಆಲ್‌ರೌಂಡರ್, ಮುಂದಿನ ಎರಡು ವರ್ಷಗಳ ಕಾಲ ಅಂತಾರಾಷ್ಟ್ರೀಯ ಅಥವಾ ದೇಶೀಯ ಕ್ರಿಕೆಟ್‌ನಲ್ಲಿ ಭಾಗಿಯಾಗಲು ಸಾಧ್ಯವಿಲ್ಲ,(ಏಜೆನ್ಸೀಸ್).