- ಟಿ20 ವಿಶ್ವಕಪ್ ಪಂದ್ಯಗಳಿಗಿಂತ ವಿವಾದ, ಗೊಂದಲಗಳೇ ಹೆಚ್ಚು ಸದ್ದು
- ಪಾಕ್ ವಿರುದ್ಧದ ಪಂದ್ಯಕ್ಕೂ ಮುನ್ನ ಯುಎಸ್ಎ ಆಟಗಾರನ ಹೇಳಿಕೆ ವೈರಲ್
- ಪಾಕಿಸ್ತಾನಕ್ಕೆ ಮತ್ತೊಮ್ಮೆ ಸೋಲಿನ ರುಚಿ ತೋರಿಸುತ್ತೀವಿ ಎಂದ ಕ್ರಿಕೆಟಿಗ
ನವದೆಹಲಿ: ಟಿ20 ವಿಶ್ವಕಪ್ ಟೂರ್ನಿಯ ಪಂದ್ಯಗಳಿಗಿಂತ ಸದ್ಯ ನಡೆಯುತ್ತಿರುವ ಗೊಂದಲ ಹಾಗೂ ವಿವಾದಗಳೇ ಭಾರೀ ಸದ್ದು ಮಾಡುತ್ತಿವೆ. ಫೆ.15ರಂದು ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಹೇಳಿದ್ದ ಪಾಕ್ ಅಹಂಕಾರದ, ಸೊಕ್ಕಿನ ಮಾತುಗಳು ಇದೀಗ ಕಡೆಗೂ ನಶಿಸಿ ಹೋಗಿದೆ. ಐಸಿಸಿ ತಿರಸ್ಕಾರ ಮತ್ತು ಬಿಸಿಬಿ ಮಾಡಿಕೊಂಡ ಮನವಿಯ ಬೆನ್ನಲ್ಲೇ ಟೀಮ್ ಇಂಡಿಯಾ ವಿರುದ್ಧದ ಹೈವೋಲ್ಟೇಜ್ ಪಂದ್ಯವನ್ನು ಆಡುವುದಾಗಿ ತಿಳಿಸಿದೆ.
ಈ ಮಧ್ಯೆ, ವಿಶ್ವಕಪ್ ಟೂರ್ನಿಯ ಭಾಗವಾಗಿ ಮಂಗಳವಾರ (ಫೆ.10) ಪಾಕಿಸ್ತಾನ ಮತ್ತು ಯುಎಸ್ಎ ತಂಡಗಳು ಕೊಲಂಬೊದಲ್ಲಿ ಪರಸ್ಪರ ಮುಖಾಮುಖಿಯಾಗಲಿದ್ದು, ಮತ್ತೊಂದು ಭರ್ಜರಿ ಪೈಪೋಟಿಗೆ ಸಜ್ಜಾಗಿವೆ. ಪಂದ್ಯಕ್ಕೂ ಮುನ್ನ ಪಾಕಿಸ್ತಾನ ತಂಡಕ್ಕೆ ಖಡಕ್ ವಾರ್ನಿಂಗ್ ನೀಡಿರುವ ಯುಎಸ್ಎ ಆಟಗಾರ ಮೊಹಮ್ಮದ್ ಮೊಹ್ಸಿನ್ ಹೇಳಿಕೆಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಖಡಕ್ ಎಚ್ಚರಿಕೆ
ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೊಹ್ಸಿನ್, ತಮ್ಮ ತಂಡದ ಮೇಲೆ ಯಾವುದೇ ಒತ್ತಡವಿಲ್ಲ. ಪ್ರಸ್ತುತ, ಎಲ್ಲಾ ಒತ್ತಡ ಇರುವುದು ಪಾಕ್ಗೆ ಮಾತ್ರ. ಯುಎಸ್ಎ ಆಟಗಾರರ ಕೌಶಲ್ಯಗಳು ಅಂದಿನಿಂದ ಗಮನಾರ್ಹವಾಗಿ ಸುಧಾರಿಸಿದೆ. ಆದ್ದರಿಂದ, ಮತ್ತೊಮ್ಮೆ ಪಾಕಿಸ್ತಾನದ ವಿರುದ್ಧ ನಾವು ಗೆಲ್ಲುತ್ತೇವೆ. ಕಳೆದ ವಿಶ್ವಕಪ್‌ನಲ್ಲಿ ನಾನು ತಂಡದ ಭಾಗವಾಗಿರಲಿಲ್ಲ. ಆದರೆ, ನಾನು ಅಲ್ಲಿದ್ದು, ಪಂದ್ಯಗಳನ್ನು ವೀಕ್ಷಿಸಿದೆ. ಆಗ ಮತ್ತು ಈಗಿನ ನಡುವಿನ ವ್ಯತ್ಯಾಸವೆಂದರೆ ನಮ್ಮ ಶಕ್ತಿ ದುಪ್ಪಟ್ಟಾಗಿದೆ. 2024ರ ವಿಶ್ವಕಪ್‌ನಲ್ಲಿ ಆ ತಂಡವನ್ನು ಮಣಿಸಿದ ಬಳಿಕ ನಮ್ಮ ಆತ್ಮವಿಶ್ವಾಸ ಇನ್ನೂ ಹೆಚ್ಚಾಗಿದೆ. ನಾವು ಮತ್ತೆ ಪಾಕಿಸ್ತಾನದ ವಿರುದ್ಧ ಗೆಲ್ಲುತ್ತೇವೆ ಎಂದಿದ್ದಾರೆ.
ಸೂಪರ್ ಓವರ್‌ನಲ್ಲಿ ರೋಚಕ ಗೆಲುವು (2024)
2024ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಆಡಿದ ಯುಎಸ್ಎ, ಆ ಪಂದ್ಯದಲ್ಲಿ ಟೈ ನೋಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 159 ರನ್ ಗಳಿಸಿತು. ನಂತರ, ಈ ಗುರಿಯನ್ನು ಬೆನ್ನಟ್ಟುವ ಮೂಲಕ, ಯುಎಸ್ಎ ಕೂಡ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 159 ರನ್ ಗಳಿಸಿತು. ಸ್ಕೋರ್‌ಗಳು ಟೈ ಆಗಿದ್ದರಿಂದ, ಪಂದ್ಯವು ಸೂಪರ್ ಓವರ್ ಹಂತಕ್ಕೆ ತಲುಪಿತು.
ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಯುಎಸ್ಎ ತಂಡವು 18 ರನ್ ಗಳಿಸಲು ಶಕ್ತವಾಯಿತು. ಈ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ತಂಡವು, ಕೇವಲ 13 ರನ್‌ಗಳನ್ನು ಗಳಿಸುವ ಮೂಲಕ ಪಂದ್ಯವನ್ನು ಕೈಚೆಲ್ಲಿತು. ಇದರೊಂದಿಗೆ, ಯುಎಸ್ಎ 5 ರನ್‌ಗಳಿಂದ ರೋಚಕ ಗೆಲುವು ಸಾಧಿಸಿತು. ಈ ಪಂದ್ಯದ ಗೆಲುವನ್ನೇ ಮುಂದಿಟ್ಟು, ಇಂದಿನ ಪಂದ್ಯದಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸವನ್ನು ಮೊಹ್ಸಿನ್ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).