ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ಸೂಪರ್​-8 ಪಂದ್ಯ 
ಕ್ರಿಕೆಟ್

ಇದೆಂಥಾ ಮಾತು? ಅವರು ಆ ರೀತಿ ಆಡಿದರೆ ತಾನೇ? ಪಾಕ್​ ಸೂಪರ್​-8 ಪಂದ್ಯ ಬೆನ್ನಲ್ಲೇ ವೀರೂ ಶಪಥ ನುಡಿ | PAK vs SL

ಪ್ರಮುಖ ಮುಖ್ಯಾಂಶಗಳು

  • ಇಂದು (ಫೆ.28) ಪಲ್ಲೆಕಲೆ ಕ್ರೀಡಾಂಗಣದಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನ ಮಧ್ಯೆ ನಿರ್ಣಾಯಕ ಸೂಪರ್​-8 ಪಂದ್ಯ
  • ಇಂದಿನ ಪಂದ್ಯದಲ್ಲಿ ಪಾಕ್​ ಸೆಮೀಸ್​ ಕನಸು ನಿರ್ಧಾರ
  • ಬಹುತೇಕ ಅನುಮಾನ ಎನ್ನಲಾದ ಸೆಮೀಸ್​ ಆಸೆಗಿದೆ ಒಂದೇ ಒಂದು ಅವಕಾಶ! ಅದಕ್ಕೂ ನಡೆಯಬೇಕಿದೆ ಪವಾಡ
  • ಪಾಕಿಸ್ತಾನ ಸೆಮಿಫೈನಲ್​ ತಲುಪುವುದು ಅಸಾಧ್ಯ ಎಂದು ಭವಿಷ್ಯ ನುಡಿದ ಸೆಹ್ವಾಗ್
ಕೊಲೊಂಬೊ: ಇಂದು (ಫೆ.28) ಪಲ್ಲೆಕಲೆಯಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವೆ ಟಿ20 ವಿಶ್ವಕಪ್​ ಟೂರ್ನಿಯ ನಿರ್ಣಾಯಕ ಸೂಪರ್-8 ಪಂದ್ಯ ನಡೆಯಲಿದೆ. ಈ ಪಂದ್ಯವನ್ನು ಪಾಕಿಸ್ತಾನ ಭಾರಿ ಅಂತರದಲ್ಲಿ ಗೆದ್ದರೆ ಮಾತ್ರ ಸೆಮಿಫೈನಲ್ ಆಸೆ ಈಡೇರಲಿದೆ. ಇಲ್ಲದಿದ್ದಲ್ಲಿ, ಸೀದಾ ಗಂಟುಮೂಟೆ ಕಟ್ಟಿಕೊಂಡು ತವರಿಗೆ ನಡೆಯಬೇಕು.  ಈ ಮಧ್ಯೆ, ಟೀಮ್ ಇಂಡಿಯಾ ಮಾಜಿ ಹಿರಿಯ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅಚ್ಚರಿ ಹೇಳಿಕೆಯನ್ನು ನೀಡಿದ್ದಾರೆ. 

ಪಾಕ್​ಗೆ ಸೆಮೀಸ್​ ಚಾನ್ಸ್​ ಹೇಗೆ?

ಇಂದಿನ ಪಂದ್ಯದಲ್ಲಿ, ಪಾಕ್​ ಏನಾದರೂ ಶ್ರೀಲಂಕಾ ವಿರುದ್ಧ ಮೊದಲು ಬ್ಯಾಟ್ ಮಾಡಿದರೆ, ಅವರು ಅದೇ ಗುರಿಯನ್ನು 64 ರನ್‌ಗಳಿಂದ ಚೇಸ್​ ಮಾಡಬೇಕು. ಅಂದರೆ, 14.1 ಓವರ್‌ಗಳಲ್ಲೇ ಬೆನ್ನಟ್ಟುವ ಅನಿವಾರ್ಯತೆ. ಆಗ ಮಾತ್ರ ಪಾಕಿಸ್ತಾನ ಕಿವೀಸ್‌ಗಿಂತ ಉತ್ತಮ ರನ್ ರೇಟ್ ಹೊಂದಲು ಸಾಧ್ಯ. ಆಗ ನೇರವಾಗಿ ಸೆಮಿಫೈನಲ್ ಪ್ರವೇಶಿಸಬಹುದು. ಅಕಸ್ಮಾತ್​ ಇದೇನಾದರೂ ನಡೆಯಲಿಲ್ಲ ಎಂದರೆ ಖಂಡಿತವಾಗಿ ಪಾಕ್​ ಸೆಮೀಸ್​ ಕನಸು ನುಚ್ಚುನೂರು ಆಗಲಿದೆ.

ವೀರೂ ಭವಿಷ್ಯ!

"ಪಾಕಿಸ್ತಾನಕ್ಕೆ ಇದು ಸುಲಭವಿಲ್ಲ. ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಪಂದ್ಯವನ್ನು ಇಂಗ್ಲೆಂಡ್ ಗೆಲ್ಲಲಿ ಎಂಬ ಪಾಕಿಸ್ತಾನಿಗಳ ಪ್ರಾರ್ಥನೆಗೆ ಉತ್ತರ ಸಿಕ್ಕಿರಬಹುದು. ಆದರೆ, ಶ್ರೀಲಂಕಾ ವಿರುದ್ಧ ಭಾರಿ ಅಂತರದಿಂದ ಗೆಲ್ಲಲಿ ಎಂಬ ಬೇಡಿಕೆಗೆ ಉತ್ತರ ಸಿಗುವುದಿಲ್ಲ. ಅವರು ಬಹಳ ದಿನಗಳಿಂದ ಪ್ರಾರ್ಥಿಸುತ್ತಿದ್ದಾರೆ. ಆದರೆ ಅದು ಆಗಲ್ಲ. ಪಾಕ್​ ತಂಡವು ಸೆಮಿಫೈನಲ್ ತಲುಪುವುದು ಅಸಾಧ್ಯ. ಏನಾದರೂ ಪವಾಡ ಸಂಭವಿಸಿದರೆ ಮಾತ್ರ, ಅವರ ಸೆಮಿಫೈನಲ್​ ಕನಸು ಈಡೇರುತ್ತದೆ. ಅದು ನಡೆದರೆ ಒಳ್ಳೆಯದೇ" ಎಂದಿದ್ದಾರೆ.
"ಪಾಕಿಸ್ತಾನ ಮೊದಲು ಬ್ಯಾಟ್ ಮಾಡಿದರೆ, 64 ರನ್‌ಗಳಿಂದ ಗೆಲುವು ಸಾಧಿಸುವುದು ಅಷ್ಟು ಸುಲಭವಿಲ್ಲ. 160 ರನ್‌ಗಳ ಗುರಿಯನ್ನು ಚೇಸ್​ ಮಾಡುವ ಪರಿಸ್ಥಿತಿ ಎದುರಾದರೆ, ಅದರಲ್ಲೂ 14.1 ಓವರ್‌ಗಳಲ್ಲಿ ಅದನ್ನು ಸಾಧಿಸುವುದು ಖಂಡಿತ ಕಷ್ಟಸಾಧ್ಯ. ಆ ರೀತಿ ನೋಡುವುದಾದರೆ, ಎದುರಾಳಿ ತಂಡವಾದ ಶ್ರೀಲಂಕಾ ತೀರ ಕಳಪೆ ಕ್ರಿಕೆಟ್ ಆಡಬೇಕಾಗುತ್ತದೆ. ಆದರೆ, ಶ್ರೀಲಂಕಾ ಅಂತಹ ತಳಮಟ್ಟದ ಪ್ರದರ್ಶನ ನೀಡುವುದಿಲ್ಲ ಎಂಬುದು ನನ್ನ ಅನಿಸಿಕೆ" ಎಂದು 'ಕ್ರಿಕ್‌ಬಜ್' ಚರ್ಚೆಯಲ್ಲಿ ಸೆಹ್ವಾಗ್ ಭವಿಷ್ಯ ನುಡಿದಿದ್ದಾರೆ,(ಏಜೆನ್ಸೀಸ್).