ಪಾಕ್ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್
- ಇಂದು (ಫೆ.28) ಪಲ್ಲೆಕಲೆ ಕ್ರೀಡಾಂಗಣದಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನ ಮಧ್ಯೆ ನಿರ್ಣಾಯಕ ಸೂಪರ್-8 ಪಂದ್ಯ
- ಮೊದಲ ಇನ್ನಿಂಗ್ಸ್ ಅಂತ್ಯಕ್ಕೆ ಪಾಕ್ ಭರ್ಜರಿ ಪ್ರದರ್ಶನ
- ಪಾಕಿಸ್ತಾನ ಸ್ಫೋಟಕ ಇನ್ನಿಂಗ್ಸ್ ಬೆನ್ನಲ್ಲೇ ಶೋಯೆಬ್ ಅಖ್ತರ್ ಓಪನ್ ಟಾಕ್
ಕೊಲೊಂಬೊ: ಟಿ20 ವಿಶ್ವಕಪ್ 2026ರ ಭಾಗವಾಗಿ ನಡೆಯುತ್ತಿರುವ ಪ್ರತಿಯೊಂದು ಸೂಪರ್-8 ಪಂದ್ಯಗಳು ಸದ್ಯ ಭಾರೀ ಕುತೂಹಲ ಕೆರಳಸುತ್ತಿವೆ. ಈ ಟೂರ್ನಮೆಂಟ್ ಅತ್ಯಂತ ರೋಮಾಂಚಕಾರಿ ಹಾದಿಯಲ್ಲಿ ಸಾಗುತ್ತಿದೆ. ಈಗಾಗಲೇ ಎರಡು ತಂಡಗಳು ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದು, ಇನ್ಯಾವ ಎರಡು ತಂಡಗಳು ಎಂಟ್ರಿಕೊಡಲಿವೆ ಎಂಬ ಕೌತುಕ ಕ್ರಿಕೆಟ್ ಪ್ರಿಯರನ್ನು ಬೆಂಬಿಡದೆ ಕಾಡುತ್ತಿದೆ. ಈ ಮಧ್ಯೆ, ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ನೀಡಿರುವ ಹೇಳಿಕೆ ಇದೀಗ ಹಲವರ ಅಚ್ಚರಿಗೆ ಕಾರಣವಾಗಿದೆ.
ಇಂದು ಪಲ್ಲೆಕಲೆ ಕ್ರೀಡಾಂಗಣದಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನ ಮಧ್ಯೆ ನಡೆಯುತ್ತಿರುವ ನಿರ್ಣಾಯಕ ಸೂಪರ್-8 ಪಂದ್ಯದಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳು ಗೆಲುವಿಗಾಗಿ ಸೆಣಸಾಡುತ್ತಿವೆ. ಹೇಗಾದರೂ ಮಾಡಿ ಈ ಪಂದ್ಯದಲ್ಲಿ ಗೆಲುವು ಸಾಧಿಸಲೇಬೇಕು ಎಂದು ಪಣತೊಟ್ಟಿರುವ ಪಾಕ್ ಒಂದೆಡೆಯಾದರೆ, ನಾಳಿನ ಮ್ಯಾಚ್ನಲ್ಲಿ ವೆಸ್ಟ್ ಇಂಡೀಸ್ ಎದುರು ಜಯ ಸಾಧಿಸಲು ಭಾರತ ಸನ್ನದ್ಧವಾಗಿದೆ. ಈ ಸಂದರ್ಭದಲ್ಲಿ, ಶೋಯೆಬ್ ಅಖ್ತರ್ ಮಾತನಾಡಿ, ಮತ್ತೊಮ್ಮೆ ಟೀಮ್ ಇಂಡಿಯಾ ಮತ್ತು ಪಾಕಿಸ್ತಾನ ಫೈನಲ್ ತಲುಪಲಿದೆ ಎಂದಿದ್ದಾರೆ.
ಇಂದಿನ ಶ್ರೀಲಂಕಾ-ಪಾಕ್ ಪಂದ್ಯದ ನಡುವೆ ಮಾತನಾಡಿದ ಶೋಯೆಬ್, ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳು ಸೆಮಿಫೈನಲ್ ತಲುಪಬೇಕು. ಮತ್ತು ಇಲ್ಲಿಂದ ನೇರವಾಗಿ ಫೈನಲ್‌ಗೂ ಹೋಗಬೇಕು. ಅಲ್ಲಾಹನ ಮೇಲೆ ನಂಬಿಕೆಯಿದೆ, ಅಂತಿಮ ಹಣಾಹಣಿಯಲ್ಲಿ ಖಂಡಿತವಾಗಿಯೂ ಭಾರತ-ಪಾಕ್ ನಡುವೆ ಪೈಪೋಟಿ ನಡೆಯಲಿದೆ. ಈ ಮ್ಯಾಚ್ನಲ್ಲಿ ಪಾಕ್ ಗೆದ್ದು ಬೀಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).
ಪಾಕ್ ಸೆಮೀಸ್ ಹಾದಿಗೆ ಇದೇ ಲೆಕ್ಕಾಚಾರ...
ಪಾಕಿಸ್ತಾನ ಸೆಮಿಫೈನಲ್ ರೇಸ್‌ನಲ್ಲಿರಬೇಕೇ? ಅಥವಾ ಗಂಟುಮೂಟೆ ಕಟ್ಟಿಕೊಂಡು ತವರಿಗೆ ಹೋಗಬೇಕೇ? ಎಂಬುದನ್ನು ನಿರ್ಧರಿಸುವ ಬಹುಮುಖ್ಯ ನಿರ್ಣಾಯಕ ಪಂದ್ಯ ಇಂದಿನದ್ದು. ಲೆಕ್ಕಾಚಾರಗಳ ಪ್ರಕಾರ, ಪಾಕಿಸ್ತಾನ ಈ ಪಂದ್ಯವನ್ನು ಭಾರಿ ಅಂತರದಿಂದ ಗೆದ್ದರೆ, ನ್ಯೂಜಿಲೆಂಡ್ ಅನ್ನು ಹಿಂದಿಕ್ಕಿ ನೇರವಾಗಿ ಸೆಮಿಫೈನಲ್‌ಗೆ ಹೋಗುತ್ತದೆ. ಅಸಲಿಗೆ, ಈ ಪಂದ್ಯವನ್ನು 65 ರನ್‌ಗಳಿಂದ ಪಾಕ್ ಗೆಲ್ಲಲೇಬೇಕಿದೆ. ಇಲ್ಲವೇ ಚೇಸಿಂಗ್ನಲ್ಲಿ ಕೇವಲ 12.4 ಓವರ್‌ಗಳಲ್ಲಿ ಗುರಿಯನ್ನು ಬೆನ್ನಟ್ಟಿ, ಮಣಿಸಬೇಕು. ಈ ಎರಡರಲ್ಲಿ ಯಾವುದೇ ಸಂಭವಿಸಿದರೂ, ಸಲ್ಮಾನ್ ಅಲಿ ಅಘಾ ಪಡೆ ತನ್ನ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸುತ್ತದೆ.