ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ಸೂಪರ್-8 ಪಂದ್ಯ
- ಇಂದು (ಫೆ.28) ಪಲ್ಲೆಕಲೆ ಕ್ರೀಡಾಂಗಣದಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನ ಮಧ್ಯೆ ನಿರ್ಣಾಯಕ ಸೂಪರ್-8 ಪಂದ್ಯ
- ಇಂದಿನ ಪಂದ್ಯದಲ್ಲಿ ಪಾಕ್ ಸೆಮೀಸ್ ಕನಸು ನಿರ್ಧಾರ
- ಪಾಕಿಸ್ತಾನ ಮನವಿಗೆ ಶ್ರೀಲಂಕಾ ಅಸ್ತು? ಸೆಮೀಸ್ಗೆ ಪಾಕ್ ಖಚಿತ
ಕೊಲೊಂಬೊ: ಇಂದು (ಫೆ.28) ಪಲ್ಲೆಕಲೆಯಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವೆ ಟಿ20 ವಿಶ್ವಕಪ್ ಟೂರ್ನಿಯ ನಿರ್ಣಾಯಕ ಸೂಪರ್-8 ಪಂದ್ಯ ನಡೆಯಲಿದೆ. ಈ ಕುತೂಹಲಕಾರಿ ಪಂದ್ಯದಲ್ಲಿ ಪಾಕ್ಗೆ ಗೆಲುವಿಗೆ ಪವಾಡವೇ ನಡೆಯಬೇಕಿದೆ. ಇದು ಬಹುತೇಕ ಅನುಮಾನವೇ ಎಂಬುದು ಕ್ರಿಕೆಟ್ ಪ್ರಿಯರ ಸದ್ಯದ ಲೆಕ್ಕಾಚಾರ. ಇದೊಂದು ಕಡೆ ಸತ್ಯವೇ. ಆದ್ರೆ, ಇಲ್ಲೊಂದು ಸುದ್ದಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ. ಪಾಕ್ ಮತ್ತು ಶ್ರೀಲಂಕಾ ನಡುವೆ ಅದಾಗಲೇ ಫಿಕ್ಸಿಂಗ್ ಆಗಿದೆ ಎಂಬ ಸ್ಫೋಟಕ ವಿಚಾರ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಪವಾಡವೇ ಸಂಭವಿಸಬೇಕು!
ಪಾಕಿಸ್ತಾನ ಸೆಮಿಫೈನಲ್ ರೇಸ್‌ನಲ್ಲಿರಬೇಕೇ? ಅಥವಾ ಗಂಟುಮೂಟೆ ಕಟ್ಟಿಕೊಂಡು ತವರಿಗೆ ಹೋಗಬೇಕೇ? ಎಂಬುದನ್ನು ನಿರ್ಧರಿಸುವ ಬಹುಮುಖ್ಯ ನಿರ್ಣಾಯಕ ಪಂದ್ಯ ಇಂದಿನದ್ದು. ಲೆಕ್ಕಾಚಾರಗಳ ಪ್ರಕಾರ, ಪಾಕಿಸ್ತಾನ ಈ ಪಂದ್ಯವನ್ನು ಭಾರಿ ಅಂತರದಿಂದ ಗೆದ್ದರೆ, ನ್ಯೂಜಿಲೆಂಡ್ ಅನ್ನು ಹಿಂದಿಕ್ಕಿ ನೇರವಾಗಿ ಸೆಮಿಫೈನಲ್‌ಗೆ ಹೋಗುತ್ತದೆ. ಅಸಲಿಗೆ, ಈ ಪಂದ್ಯವನ್ನು 65 ರನ್‌ಗಳಿಂದ ಪಾಕ್ ಗೆಲ್ಲಲೇಬೇಕಿದೆ. ಇಲ್ಲವೇ ಚೇಸಿಂಗ್ನಲ್ಲಿ ಕೇವಲ 12.4 ಓವರ್‌ಗಳಲ್ಲಿ ಗುರಿಯನ್ನು ಬೆನ್ನಟ್ಟಿ, ಮಣಿಸಬೇಕು. ಈ ಎರಡರಲ್ಲಿ ಯಾವುದೇ ಸಂಭವಿಸಿದರೂ, ಸಲ್ಮಾನ್ ಅಲಿ ಅಘಾ ಪಡೆ ತನ್ನ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸುತ್ತದೆ.
ಏನದು ವರದಿ?
ವರದಿಗಳ ಪ್ರಕಾರ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು ಪಂದ್ಯಕ್ಕೂ ಮುನ್ನ ಶ್ರೀಲಂಕಾ ಸರ್ಕಾರದೊಂದಿಗೆ ಮಾತನಾಡಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಅದರಲ್ಲೂ, ಇಂದಿನ ಪಂದ್ಯವನ್ನು ಗೆಲ್ಲಲು ಪಾಕಿಸ್ತಾನಕ್ಕೆ ಸಹಾಯ ಮಾಡುವಂತೆ ಅವರು ಕೇಳಿದ್ದಾರೆ ಎನ್ನಲಾಗಿದೆ. ಶ್ರೀಲಂಕಾ ಕೂಡ ಇದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿರುವುದಾಗಿ ತೋರಿದೆ. ಅಸಲಿಗೆ, ಶ್ರೀಲಂಕಾ ಇಂದಿನ ಪಂದ್ಯದಲ್ಲಿ ಗೆದ್ದರೂ ಸೆಮೀಸ್ ಕನಸು ಭಗ್ನವೇ! ಹೀಗಿರುವಾಗ, ಮ್ಯಾಚ್ ಗೆದ್ದರೂ ಸೋತರೂ ಯಾವುದೇ ವ್ಯತ್ಯಾಸ ಇರುವುದಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ.
ಪಾಕಿಸ್ತಾನ ಸೆಮಿಫೈನಲ್‌ಗೆ ಹೋಗದಿದ್ದರೆ, ಮುಂಬರುವ ಎಲ್ಲಾ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ಭಾರತದಲ್ಲಿ ನಡೆಯಲಿವೆ. ಇದು ಶ್ರೀಲಂಕಾಕ್ಕೆ ದೊಡ್ಡ ಹಿನ್ನಡೆ ಕೂಡ ಆಗಲಿದೆ. ಈ ಎಲ್ಲ ವಿಷಯಗಳನ್ನು ಸೂಕ್ಷ್ಮವಾಗಿ ಅರಿತಿರುವ ಲಂಕಾ ಪಡೆ, ಪಾಕಿಸ್ತಾನದೊಂದಿಗೆ ಸಹಕರಿಸಲು ನಿರ್ಧರಿಸಿದೆ ಎಂದು ಹೇಳಲಾಗಿದೆ. ಅಷ್ಟಕ್ಕೂ ಇದೆಲ್ಲವೂ ನಿಜವೇ ? ಅಥವಾ ಕೇವಲ ಊಹಾಪೋಹಗಳೇ ಎಂಬುದು ಅಸ್ಪಷ್ಟ. ಇದು ಸತ್ಯವೇ ಆಗಿದ್ದರೆ, ಇಂದಿನ ಪಂದ್ಯದಲ್ಲಿ ಶ್ರೀಲಂಕಾ ಹೇಗೆ ಪಾಕಿಸ್ತಾನವನ್ನು ಬೆಂಬಲಿಸುತ್ತದೆ ಎಂಬುದನ್ನು ಕಾದು ನೋಡೋಣ,(ಏಜೆನ್ಸೀಸ್).