ಸಂಜು ಸ್ಯಾಮ್ಸನ್, ಪಾಕ್ ಕ್ರಿಕೆಟಿಗ ಮೊಹಮ್ಮದ್ ಅಮೀರ್
- ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ರಣರೋಚಕ ಗೆಲುವು
- ಇಂಗ್ಲೆಂಡ್ ಮಾಡಿದ ಆ ಮಿಸ್ಟೇಕ್ನಿಂದಲೇ ಭಾರತ ಗೆದ್ದಿತು
- ವಿತಂಡವಾದ ವಾದ ಮಂಡಿಸಿದ ಪಾಕ್ ಕ್ರಿಕೆಟಿಗ ಮೊಹಮ್ಮದ್ ಅಮೀರ್
ಲಾಹೋರ್: ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ರಣರೋಚಕ ಗೆಲುವು ಸಾಧಿಸಿದ ಭಾರತ ಇದೀಗ ನೇರವಾಗಿ ಟಿ20 ವಿಶ್ವಕಪ್ ಫೈನಲ್ಗೆ ಲಗ್ಗೆಯಿಟ್ಟಿದೆ (IND vs ENG). ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಟೀಮ್ ಇಂಡಿಯಾ ಸತತ ಎರಡನೇ ಬಾರಿ ಗೆದ್ದು, ಟ್ರೋಫಿ ಎತ್ತಿಹಿಡಿಯಲಿದೆ ಎಂದೇ ಕ್ರಿಕೆಟ್ ಪ್ರೇಮಿಗಳು ಆಶಿಸಿದ್ದಾರೆ. ಆದರೆ, ಭಾರತ ಸೋಲಲಿ ಎಂದೇ ಜಪಿಸುತ್ತಿರುವ ಪಾಕ್ ಪ್ರೇಮಿಗಳಿಗೆ ಇದೀಗ ಭಾರೀ ಮುಖಭಂಗವೇ ಉಂಟಾಗಿದೆ.
ಈ ಸಾಲಿನಲ್ಲಿ ಮುಂಚೂಣಿಯಲ್ಲಿರುವುದೇ ಪಾಕ್ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಮೀರ್. ಅಭಿಷೇಕ್ ಶರ್ಮ ವಿರುದ್ಧ ನಾಲಿಗೆ ಹರಿಬಿಟ್ಟಿದ್ದ ಈತ, ಆ ನಂತರ ಭಾರತ ಯಾವುದೇ ಕಾರಣಕ್ಕೂ ಸೆಮೀಸ್ಗೆ ಹೋಗಲ್ಲ. ಅವರ ತಂಡದಲ್ಲಿ ಉತ್ತಮ ಬ್ಯಾಟಿಂಗ್ ಲೈನ್ಅಪ್ ಇಲ್ಲ. ಬೌಲಿಂಗ್ನಲ್ಲಿ ಜಸ್ಪ್ರಿತ್ ಬುಮ್ರಾ ಮೇಲೆ ಸಂಪೂರ್ಣವಾಗಿ ನಂಬಿಕೆ ಇಟ್ಟುಕೊಂಡಿದೆ ಎಂದಿದ್ದರು. ಆದ್ರೆ, ಭಾರತ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿ, ಸೆಮಿಫೈನಲ್ಗೆ ಲಗ್ಗೆಯಿಟ್ಟಿತು. ಇದರ ಬೆನ್ನಲ್ಲೇ ಮತ್ತೊಂದು ಭವಿಷ್ಯ ನುಡಿದ ಅಮೀರ್, ಇಂಗ್ಲೆಂಡ್ ವಿರುದ್ಧ ಸೂರ್ಯಕುಮಾರ್ ಪಡೆ ಸೋತು ಸುಣ್ಣವಾಗಲಿದೆ ಎಂದಿದ್ದರು. ಆದರೀಗ, ಅದು ಕೂಡ ಉಲ್ಟಾ ಆಗಿದೆ. ಇದರಿಂದ ಭಾರೀ ಮುಖಭಂಗ ಉಂಟಾದರೂ ಸಹ ತನ್ನ ಸೊಕ್ಕಿನ ಮಾತನ್ನು ಅಮೀರ್ ನಿಲ್ಲಿಸಿಲ್ಲ.
ತನ್ನ ಭವಿಷ್ಯ ನುಡಿಯನ್ನು ಸಮರ್ಥಿಸಿಕೊಂಡ ಅಮೀರ್, ನಾನು ಹೇಳಿದ್ದೇ ಸತ್ಯ. ಖಂಡಿತ ಭಾರತ ಸೋಲುತ್ತಿತ್ತು. ಆದರೆ, ಇಂಗ್ಲೆಂಡ್ ಬಿಟ್ಟ ಕ್ಯಾಚ್ಗಳಿಂದ ಸೆಮಿಫೈನಲ್ ಪಂದ್ಯವನ್ನು ಟೀಮ್ ಇಂಡಿಯಾ ಗೆದ್ದಿತು ಅಷ್ಟೇ. ನಾನಿಲ್ಲಿ ಕ್ರಿಕೆಟ್ ಬಗ್ಗೆ ಮಾತನಾಡುತ್ತಿದ್ದೇನೆ. ನಿಜಕ್ಕೂ ಈ ಪಂದ್ಯದಲ್ಲಿ ಭಾರತ ಉತ್ತಮ ಕ್ರಿಕೆಟ್ ಆಡಿತು. ಅವರ ಪ್ರದರ್ಶನವನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ, ಆಂಗ್ಲರು ಮಾಡಿದ ಎಡವಟ್ಟುಗಳೇ ಅವರ ಸೋಲಿಗೆ ಕಾರಣವಾಯಿತು ಎಂದರು.
ಈ ಎರಡು ತಂಡಗಳ ನಡುವಿನ ವ್ಯತ್ಯಾಸವೇ ಬುಮ್ರಾ. ಟೀಮ್ ಇಂಡಿಯಾ ಬ್ಯಾಟಿಂಗ್ ಮಾಡುವಾಗ ಆರಂಭದಲ್ಲೇ ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್, ನೇರವಾಗಿ ತಮ್ಮ ಕೈಗೆ ಬಂದ ಸಂಜು ಸ್ಯಾಮ್ಸನ್ ಅವರ ಕ್ಯಾಚ್ ಅನ್ನು ಹಿಡಿಯಬೇಕಿತ್ತು. ಆದರೆ, ಇಲ್ಲಿ ಅವರು ವಿಫಲರಾದರು. ಇದೇನಾದರೂ ಕ್ಯಾಚ್ ಆಗಿದಿದ್ದರೆ, ಖಂಡಿತ ಒಂದು ಓವರ್ ಮುಂಚಿತವಾಗಿಯೇ ಆಂಗ್ಲರು ಪಂದ್ಯ ಗೆದ್ದು ಬೀಗುತ್ತಿದ್ದರು ಎಂದಿದ್ದಾರೆ,(ಏಜೆನ್ಸೀಸ್).