ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಅಘಾ
- ಪಲ್ಲೆಕಲೆ ಕ್ರೀಡಾಂಗಣದಲ್ಲಿ ನಡೆದ ಶ್ರೀಲಂಕಾ-ಪಾಕಿಸ್ತಾನ ನಿರ್ಣಾಯಕ ಸೂಪರ್-8 ಪಂದ್ಯ
- ಕಡೆಗೂ ಕಮರಿ ಹೋಯ್ತು ಪಾಕ್ ಸೆಮೀಸ್ ಕನಸು
- ಈ ಪಂದ್ಯದ ಸೋಲಿನಿಂದ ಪಾಕ್ ತಂಡಕ್ಕೆ ಭಾರೀ ಛೀಮಾರಿ
- ನಿವೃತ್ತಿಗೆ ಮುಂದಾದ್ರಾ ತಂಡದ ನಾಯಕ ಸಲ್ಮಾನ್ ಅಲಿ ಅಘಾ
ಕೊಲೊಂಬೊ: ನಿನ್ನೆ (ಫೆ.28) ಪಲ್ಲೆಕಲೆಯಲ್ಲಿ ನಡೆದ ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ಪಂದ್ಯದಲ್ಲಿ ಪಾಕ್ ಹೀನಾಯ ಸೋಲು ಅನುಭವಿಸಿತು. ಟಿ20 ವಿಶ್ವಕಪ್ ಟೂರ್ನಿಯ ನಿರ್ಣಾಯಕ ಸೂಪರ್-8 ಪಂದ್ಯದಲ್ಲಿ ಭಾರೀ ಮುಖಭಂಗ ಉಂಡ ಸಲ್ಮಾನ್ ಅಲಿ ಅಘಾ ಪಡೆಯ ಸೆಮಿಫೈನಲ್ ಕನಸು ಕಡೆಗೂ ಕಮರಿ ಹೋಯಿತು. ಈ ಸೋಲಿನಿಂದ ಕಂಗೆಟ್ಟ ಪಾಕ್ ತಂಡಕ್ಕೆ ತನ್ನ ದೇಶದ ಅಭಿಮಾನಿಗಳಿಂದ ಭಾರೀ ಟೀಕೆ, ಛೀಮಾರಿಗಳು ವ್ಯಕ್ತವಾಗಿವೆ. ಇದರ ಬೆನ್ನಲ್ಲೇ ನಾಯಕ ಸಲ್ಮಾನ್ ಅಲಿ ಅಘಾ ನಿವೃತ್ತಿ ಪ್ರಶ್ನೆಗಳು ಜೋರಾಗಿವೆ.
ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಗೆದ್ದು ಖಂಡಿತ ಪಾಕಿಸ್ತಾನ ಸೆಮೀಸ್ಗೆ ಎಂಟ್ರಿಕೊಡಲಿದೆ ಎಂದೇ ಹಲವರು ಆಶಿಸಿದ್ದರು. ಆದರೆ, ಈ ಲೆಕ್ಕಾಚಾರಗಳನ್ನು ಲಂಕಾ ಪಡೆ ತಲೆಕೆಳಗಾಗಿಸಿತು. ಇದೀಗ ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿರುವ ಪಾಕ್ ನಾಯಕ ಸಲ್ಮಾನ್ ಅಲಿ ಅಘಾ ನೋವಿನ ಮಾತಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಹೀನಾಯ ಸೋಲಿನ ಬೆನ್ನಲ್ಲೇ ಬಾಬರ್ ಅಜಮ್, ಸಲ್ಮಾನ್ರನ್ನು ತಂಡದಿಂದ ಕಿತ್ತು ಬಿಸಾಡಬೇಕು ಎಂಬ ಕೂಗುಗಳು ಪಾಕಿಸ್ತಾನದಲ್ಲಿ ಜೋರಾಗಿವೆ. ಇದಕ್ಕೆ ಸಂಬಂಧಿಸಿದಂತೆ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಅಲಿ ಉತ್ತರಿಸಿದ್ದು ಹೀಗೆ.
ತವರಿಗೆ ಹೋದ ಮೇಲೆ...
ನಿಮ್ಮ ಕ್ಯಾಪ್ಟನ್ ಸ್ಥಾನದಿಂದ ಕೆಳಗಿಳಿಯುತ್ತೀರಾ ಅಥವಾ ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಿಮ್ಮನ್ನು ತೆಗೆದುಹಾಕಲಿದೆಯೇ? ಎಂದು ಕೇಳಲಾಯಿತು. ಇದಕ್ಕೆ ನಗುತ್ತಲೇ ಕೂಲ್ ಆಗಿಯೇ ಉತ್ತರಿಸಿದ ಅಘಾ, ತವರಿಗೆ ಹೋದ ಮೇಲೆ ಇದೆಲ್ಲದರ ಬಗ್ಗೆ ಯೋಚಿಸಿ ಒಂದು ನಿರ್ಧಾರಕ್ಕೆ ಬರುತ್ತೇನೆ ಎಂದರು. ಈ ಮಧ್ಯೆ, ಹೆಡ್ ಕೋಚ್ ಹೆಸನ್ ಅವರ ನಿರ್ಧಾರವೇ ಅಂತಿಮನಾ? ನೀವಿಲ್ಲಿ ಡಮ್ಮಿ ಕ್ಯಾಪ್ಟನ್ ಆದ್ರಾ? ಎಂಬ ಪ್ರಶ್ನೆಗೆ ಅಲಿ ಖಾರವಾಗಿ ಉತ್ತರಿಸಿದ್ದಾರೆ.
ನೋಡಿ ಸರ್, ಒಂದು ತಂಡ ಅಂದಮೇಲೆ ಇಲ್ಲಿ ಎಲ್ಲರ ಅಭಿಪ್ರಾಯಗಳು ಮುಖ್ಯ. ಯಾರೋ ಒಬ್ಬರ ಮಾತಿನಿಂದ ಇದು ನಡೆಯಲ್ಲ. ಒಂದಷ್ಟು ಚರ್ಚೆಗಳು ಮತ್ತು ಎಲ್ಲರ ಅಭಿಪ್ರಾಯಗಳನ್ನು ಆಧರಿಸಿಯೇ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಇದೊಂದು ಟೀಮ್ ಆಟ ಎಂದರು. ಸಲ್ಮಾನ್ರ ಹೇಳಿಕೆಗಳು ಸದ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಪಿಸಿಬಿ ಅವರ ಮೇಲೆ ಒತ್ತಾಯವನ್ನು ಹೇರಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಬಾಬರ್ ಅಜಮ್ಗೆ ಗೇಟ್ಪಾಸ್ ಕೊಡುವುದು ಬಹುತೇಕ ಖಚಿತ ಎಂದೇ ಹೇಳಲಾಗಿದೆ. ಆದರೆ, ಸಲ್ಮಾನ್ ಕಥೆ ಏನಾಗಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.
ಪಾಕ್ ಸೋಲಿನ ಪಂದ್ಯ
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಶ್ರೀಲಂಕಾ, ಪಾಕ್ಗೆ ಬ್ಯಾಟ್ ಮಾಡುವಂತೆ ಆಹ್ವಾನಿಸಿತು. ಅಂತೆಯೇ ಬ್ಯಾಟ್ ಮಾಡಿದ ಪಾಕಿಸ್ತಾನ, 20 ಓವರ್ನಲ್ಲಿ 8 ವಿಕೆಟ್ ನಷ್ಟಕ್ಕೆ 212 ರನ್ ಕಲೆಹಾಕಿತು. ಈ ಬೃಹತ್ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ, ಆರಂಭಿಕ ಹಂತದಲ್ಲೇ ಬಹುಮುಖ್ಯ ವಿಕೆಟ್ಗಳನ್ನು ಕಳೆದುಕೊಂಡಿತು. ಇದು ಪಾಕ್ ಸೆಮೀಸ್ ಕನಸನ್ನು ಜೀವಂತವಾಗಿರಿಸಿತು. ಆದರೆ, ಲೆಕ್ಕಾಚಾರದ ಪ್ರಕಾರ, 147 ರನ್ ತಲುಪದಂತೆ ಶ್ರೀಲಂಕಾ ಪಡೆಯನ್ನು ಕಟ್ಟಿಹಾಕುವಲ್ಲಿ ಎಡವಿದ ಪಾಕ್ ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿತು.