ದೇವದತ್ ಪಡಿಕ್ಕಲ್ 4ನೇ ಶತಕದಬ್ಬರ, ಕರ್ನಾಟಕಕ್ಕೆ ಸತತ 5ನೇ ಜಯ
ಅಹಮದಾಬಾದ್: ಎಡಗೈ ಆರಂಭಿಕ ದೇವದತ್ ಪಡಿಕ್ಕಲ್ (108 ರನ್, 120 ಎಸೆತ, 8 ಬೌಂಡರಿ, 3 ಸಿಕ್ಸರ್) ಟೂರ್ನಿಯ 5 ಪಂದ್ಯಗಳಲ್ಲಿ ಸಿಡಿಸಿದ 4ನೇ ಶತಕದ ಬಲದಿಂದ ಹಾಲಿ ಚಾಂಪಿಯನ್ ಕರ್ನಾಟಕ (Karnataka) ತಂಡ ವಿಜಯ್ ಹಜಾರೆ ಟ್ರೋಫಿಯಲ್ಲಿ (Vijay Hazare Trophy) ಸತತ 5ನೇ ಗೆಲುವಿನೊಂದಿಗೆ ಅಜೇಯ ಓಟ ಮುಂದುವರಿಸಿದೆ. ಶನಿವಾರ ನಡೆದ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ಪಡೆ ತ್ರಿಪುರ ವಿರುದ್ಧ 80 ರನ್ಗಳಿಂದ ಸುಲಭ ಗೆಲುವು ದಾಖಲಿಸಿತು. ಇದರೊಂದಿಗೆ ಕರ್ನಾಟಕ ತಂಡ ಒಟ್ಟು 20 ಅಂಕ ಗಳಿಸಿ ಎ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದು, ನಾಕೌಟ್ ಪ್ರವೇಶವನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಪುದುಚೇರಿ ಎದುರು ಆಘಾತ ಎದುರಿಸಿದ ಮಧ್ಯಪ್ರದೇಶ (16) 2ನೇ ಸ್ಥಾನಕ್ಕಿಳಿದಿದೆ.
ನಮೋ ಸ್ಟೇಡಿಯಂನಲ್ಲಿ ನಡೆದ ಕಾದಾಟದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಕರ್ನಾಟಕ, ಆರಂಭಿಕ ಆಘಾತ ಎದುರಿಸಿತು. ನಾಯಕ ಮಯಾಂಕ್ ಅಗರ್ವಾಲ್ (5) ಮತ್ತು ಕರುಣ್ ನಾಯರ್ (0) ಬೇಗನೆ ಔಟಾದರು. ಬಳಿಕ ಪಡಿಕ್ಕಲ್ (Devdutt Padikkal) ಶತಕದಾಟ ಮತ್ತು ಆರ್. ಸ್ಮರಣ್ (60 ರನ್, 82 ಎಸೆತ, 8 ಬೌಂಡರಿ) ಮತ್ತು ಅಭಿನವ್ ಮನೋಹರ್ (79*ರನ್, 43 ಎಸೆತ, 6 ಬೌಂಡರಿ, 4 ಸಿಕ್ಸರ್) ಅರ್ಧಶತಕದ ನೆರವಿನಿಂದ ಕರ್ನಾಟಕ ತಂಡ 7 ವಿಕೆಟ್ಗೆ 332 ರನ್ ಕಲೆಹಾಕಿತು. ಪ್ರತಿಯಾಗಿ ಶ್ರೇಯಸ್ ಗೋಪಾಲ್ (33ಕ್ಕೆ 3) ಮತ್ತು ವೈಶಾಕ್ ವಿಜಯ್ಕುಮಾರ್ (54ಕ್ಕೆ 3) ದಾಳಿಗೆ ನಲುಗಿದ ತ್ರಿಪುರ, ಸ್ವಪ್ನಿಲ್ ಸಿಂಗ್ (100 ರನ್, 93 ಎಸೆತ, 7 ಬೌಂಡರಿ, 2 ಸಿಕ್ಸರ್) ಶತಕದ ಪ್ರತಿರೋಧದ ನಡುವೆಯೂ 49 ಓವರ್ಗಳಲ್ಲಿ 252 ರನ್ಗಳಿಗೆ ಆಲೌಟ್ ಆಗಿ ಶರಣಾಯಿತು.
ಕರ್ನಾಟಕ: 7 ವಿಕೆಟ್ಗೆ 332 (ಮಯಾಂಕ್ 5, ಪಡಿಕ್ಕಲ್ 108, ಕರುಣ್ 0, ಸ್ಮರಣ್ 60, ರಾಹುಲ್ 35, ಅಭಿನವ್ 79*, ವಿದ್ಯಾಧರ್ 1, ಶ್ರೇಯಸ್ 29, ಅಭಿಜಿತ್ ಸರ್ಕಾರ್ 50ಕ್ಕೆ 4), ತ್ರಿಪುರ: 49 ಓವರ್ಗಳಲ್ಲಿ 252 (ತೇಜಸ್ವಿ ಜೈಸ್ವಾಲ್ 25, ವಿಜಯ್ ಶಂಕರ್ 1, ರಜತ್ ಡೇ 66, ಸ್ವಪ್ನಿಲ್ ಸಿಂಗ್ 100, ಶ್ರೇಯಸ್ 33ಕ್ಕೆ 3, ವೈಶಾಕ್ 54ಕ್ಕೆ 3, ಪ್ರಸಿದ್ಧಕೃಷ್ಣ 47ಕ್ಕೆ 1, ವಿದ್ಯಾಧರ್ 44ಕ್ಕೆ 1, ಶ್ರೀಶ 38ಕ್ಕೆ 1). ಪಂದ್ಯಶ್ರೇಷ್ಠ: ದೇವದತ್ ಪಡಿಕ್ಕಲ್.
25 ವರ್ಷದ ದೇವದತ್ ಪಡಿಕ್ಕಲ್ ಹಾಲಿ ಋತುವಿನ ಭರ್ಜರಿ ಫಾರ್ಮ್ ಮುಂದುವರಿಸಿದ್ದು, ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಿದ 5 ಪಂದ್ಯಗಳಲ್ಲಿ 4 ಶತಕ ಸಿಡಿಸುವ ಮೂಲಕ ಒಟ್ಟಾರೆ 514 ರನ್ ಕಲೆಹಾಕಿದ್ದಾರೆ. ಈ ಮೂಲಕ ಟೂರ್ನಿಯ ಗರಿಷ್ಠ ಸ್ಕೋರರ್ ಪಟ್ಟ ಕಾಯ್ದುಕೊಂಡಿದ್ದಾರೆ. 38 ಲಿಸ್ಟ್ ಎ ಪಂದ್ಯಗಳಲ್ಲಿ ಇದು ಅವರ 13ನೇ ಶತಕವಾಗಿದೆ. ಜತೆಗೆ 12 ಅರ್ಧಶತಕ ಗಳಿಸಿದ್ದಾರೆ. ಆದರೂ ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡದಲ್ಲಿ ಅವರಿಗೆ ಸ್ಥಾನ ಲಭಿಸದೆ ನಿರಾಸೆ ಅನುಭವಿಸಿದರು.
*8: ಕರುಣ್ ನಾಯರ್ ದೇಶೀಯ ಏಕದಿನ ಟೂರ್ನಿಯಲ್ಲಿ 8ನೇ ಬಾರಿ ಸೊನ್ನೆ ಸುತ್ತಿದರು. ಇದರೊಂದಿಗೆ ಕರ್ನಾಟಕ ಪರ ಏಕದಿನದಲ್ಲಿ ಗರಿಷ್ಠ ಶೂನ್ಯ ಗಳಿಸಿದ ಕೆ.ಗೌತಮ್(7) ಅನಪೇಕ್ಷಿತ ದಾಖಲೆ ಮುರಿದರು.
ವಿಜಯ್ ಹಜಾರೆ ಟ್ರೋಫಿಯಲ್ಲಿ ಕಡ್ಡಾಯವಾಗಿ 2 ಪಂದ್ಯ ಆಡಬೇಕೆಂಬ ಬಿಸಿಸಿಐ ಸೂಚನೆಯನ್ವಯ, ಟೀಮ್ ಇಂಡಿಯಾ ಬ್ಯಾಟರ್ ಕೆಎಲ್ ರಾಹುಲ್ ಕರ್ನಾಟಕ ಪರ ಮೊದಲ ಪಂದ್ಯವಾಡಿದರು. ವಿಕೆಟ್ ಕೀಪಿಂಗ್ ಜತೆಗೆ 5ನೇ ಕ್ರಮಾಂಕದ ಬ್ಯಾಟರ್ ಆಗಿ ಆಡಿದ ಅವರು, 28 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಿತ 35 ರನ್ ಗಳಿಸಿ ಔಟಾದರು. ಭಾರತ ಏಕದಿನ ತಂಡ ಸೇರಿಕೊಳ್ಳುವ ಮುನ್ನ ರಾಜಸ್ಥಾನ ವಿರುದ್ಧ ಮುಂದಿನ ಪಂದ್ಯದಲ್ಲೂ ಅವರು ಆಡುವ ನಿರೀೆ ಇದೆ.