ಅಭ್ಯಾಸ ಪಂದ್ಯದಲ್ಲಿ ಕನ್ನಡಿಗ ಪಡಿಕ್ಕಲ್ ಶತಕದಾಟ; ಕೊಲಂಬೊ ಟೆಸ್ಟ್ಗೆ ಸ್ಥಾನ ಪಕ್ಕಾ!
ಕೊಲಂಬೊ: ಎಡಗೈ ಬ್ಯಾಟರ್ ಹಾಗೂ ಕನ್ನಡಿಗ (
) ದೇವದತ್ ಪಡಿಕ್ಕಲ್ (142*ರನ್, 164 ಎಸೆತ, 18 ಬೌಂಡರಿ) ಆತಿಥೇಯ ಶ್ರೀಲಂಕಾ ಇಲೆವೆನ್ ವಿರುದ್ಧದ ತ್ರಿದಿನ ಅಭ್ಯಾಸ ಪಂದ್ಯದಲ್ಲಿ ಭಾರತ ಪರ ಭರ್ಜರಿ ಶತಕ ಸಿಡಿಸಿದ್ದಾರೆ. ಈ ಮೂಲಕ ಅವರು, ಸ್ವಾತಂತ್ರ್ಯ ದಿನದಂದು ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಆಡುವುದನ್ನು ಖಾತ್ರಿಪಡಿಸಿಕೊಂಡಿದ್ದಾರೆ.
ಪಂದ್ಯದ ಮೊದಲ ದಿನ ಲಂಕಾ ಇಲೆವೆನ್ 90 ಓವರ್ ಆಡಿ 8 ವಿಕೆಟ್ಗೆ 363 ರನ್ ಗಳಿಸಿದ್ದರೆ, ಎರಡನೇ ದಿನ ಭಾರತ ತಂಡ ಕೂಡ 90 ಓವರ್ ಆಡಿ 6 ವಿಕೆಟ್ಗೆ 357 ರನ್ ಗಳಿಸಿತು. ಪಡಿಕ್ಕಲ್ ಮಿಂಚಿದ ನಡುವೆ ಮತ್ತೋರ್ವ ಕನ್ನಡಿಗ ಹಾಗೂ ಹಂಗಾಮಿ ನಾಯಕ ಕೆಎಲ್ ರಾಹುಲ್ (40) ಮತ್ತು ರವೀಂದ್ರ ಜಡೇಜಾ (63) ಕೂಡ ಉತ್ತಮ ಅಭ್ಯಾಸ ನಡೆಸಿದರೆ, ಆರಂಭಿಕ ಯಶಸ್ವಿ ಜೈಸ್ವಾಲ್ (0), ವಿಕೆಟ್ ಕೀಪರ್-ಬ್ಯಾಟರ್ಗಳಾದ ರಿಷಭ್ ಪಂತ್ (2) ಮತ್ತು ಧ್ರುವ ಜುರೆಲ್ (1) ಬೇಗನೆ ಔಟ್ ಆಗಿ ನಿರಾಸೆ ಮೂಡಿಸಿದರು. ಸ್ಪಿನ್ನರ್ ಮಾನವ್ ಸುಥರ್ (41) ಮತ್ತು ವೇಗಿ ಗುರುನೂರ್ ಬ್ರಾರ್ (36*) ಉಪಯುಕ್ತ ಆಟವಾಡಿ ಗಮನಸೆಳೆದರು. ದಿಲುಮ್ ಸುಧೀರ ಎಸೆದ ದಿನದ ಕೊನೇ ಓವರ್ನಲ್ಲಿ ಗುರುನೂರ್ 4 ಸಿಕ್ಸರ್ (6,6,0,6,6) ಸಿಡಿಸಿ ಮಿಂಚಿದರು.
ಪಂದ್ಯದ 3ನೇ ಹಾಗೂ ಅಂತಿಮ ದಿನವಾದ ಭಾನುವಾರ ಉಭಯ ತಂಡಗಳು ತಲಾ 45 ಓವರ್ ಬ್ಯಾಟಿಂಗ್ ಮಾಡಲಿವೆ. ಬಳಿಕ ಸೋಮವಾರ ಭಾರತ ತಂಡ ಗಾಲೆಗೆ ತೆರಳಲಿದ್ದು, ಆ.15ರಿಂದ ಮೊದಲ ಟೆಸ್ಟ್ ನಡೆಯಲಿದೆ.
ಒಂದೆಡೆ ಸಾಯಿ ಸುದರ್ಶನ್ ಅಲಭ್ಯತೆ ಮತ್ತು ಮತ್ತೊಂದೆಡೆ ದೇವದತ್ ಪಡಿಕ್ಕಲ್ ಶತಕದಾಟ ಭಾರತ ತಂಡದ ಮ್ಯಾನೇಜ್ಮೆಂಟ್ಗೆ ದೊಡ್ಡ ಗೊಂದಲವೊಂದನ್ನು ಬಗೆಹರಿಸಿದೆ. ಮೊದಲ ಟೆಸ್ಟ್ ಪಂದ್ಯದ ಆಡುವ 11ರ ಬಳಗದಲ್ಲಿ ಪಡಿಕ್ಕಲ್ ಸ್ಥಾನ ಪಡೆಯುವುದು ಮತ್ತು 3ನೇ ಕ್ರಮಾಂಕದಲ್ಲಿ ಆಡುವುದು ಪಕ್ಕಾ ಆಗಿದೆ. ಜೈಸ್ವಾಲ್ ದಿನದ 2ನೇ ಎಸೆತದಲ್ಲೇ ಔಟಾದ ಬಳಿಕ ಪಡಿಕ್ಕಲ್, ರಾಹುಲ್ ಜತೆಗೂಡಿ 2ನೇ ವಿಕೆಟ್ಗೆ 96 ರನ್ ಜತೆಯಾಟವಾಡಿದರು. ಬಳಿಕ ಜಡೇಜಾ ಜತೆ 3ನೇ ವಿಕೆಟ್ಗೆ 72 ರನ್ ಸೇರಿಸಿದರು. ಪಡಿಕ್ಕಲ್ 121 ಎಸೆತಗಳಲ್ಲಿ ಶತಕ ಪೂರೈಸಿದ ಬೆನ್ನಲ್ಲೇ ಸ್ವಯಂ ನಿವೃತ್ತಿ ಪಡೆದು ಇತರರಿಗೆ ಬ್ಯಾಟಿಂಗ್ ಮಾಡಲು ಅವಕಾಶ ಕಲ್ಪಿಸಿದರು. ಬಳಿಕ ದಿನದ ಕೊನೆಯಲ್ಲಿ 17 ಓವರ್ ಬಾಕಿ ಇದ್ದಾಗ ಮತ್ತೆ ಬ್ಯಾಟಿಂಗ್ಗೆ ಇಳಿದರು.
ಭಾರತ ತಂಡದ ನಾಯಕ ಶುಭಮಾನ್ ಗಿಲ್, ಲಂಕಾದಲ್ಲಿ ಬ್ಯಾಟಿಂಗ್ ತರಬೇತಿಯ ವೇಳೆ ಆಗಿರುವ ಬಲಗೈ ಉಂಗುರ ಬೆರಳಿನ ಗಾಯದಿಂದಾಗಿ ತ್ರಿದಿನ ಅಭ್ಯಾಸ ಪಂದ್ಯದ 2ನೇ ದಿನವೂ ಮೈದಾನಕ್ಕಿಳಿಯಲಿಲ್ಲ. ಅವರ ಬದಲಿಗೆ ರವೀಂದ್ರ ಜಡೇಜಾ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರು. ಗಿಲ್ ಗೈರಿನಲ್ಲಿ ಕನ್ನಡಿಗ ಕೆಎಲ್ ರಾಹುಲ್ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಶ್ರೀಲಂಕಾ ಇಲೆವೆನ್: 8 ವಿಕೆಟ್ಗೆ 363 ಡಿಕ್ಲೇರ್; ಭಾರತ: 90 ಓವರ್ಗಳಲ್ಲಿ 8 ವಿಕೆಟ್ಗೆ 357 (ಜೈಸ್ವಾಲ್ 0, ರಾಹುಲ್ 40, ಪಡಿಕ್ಕಲ್ 142*, ಜಡೇಜಾ 63, ಪಂತ್ 2, ಜುರೆಲ್ 1, ಸುಥರ್ 41, ಕುಲದೀಪ್ 1, ಸಿರಾಜ್ 1, ಸಾರಾಂಶ್ ಜೈನ್ 22, ಗುರುನೂರ್ 36*, ರಮೇಶ್ ಮೆಂಡಿಸ್ 77ಕ್ಕೆ 2, ಅಸಂಕ ಮನೋಜ್ 32ಕ್ಕೆ 2, ವಿಶ್ವ ಫೆರ್ನಾಂಡೊ 42ಕ್ಕೆ 1).
ಟೆಸ್ಟ್ ಸರಣಿಗೆ ಸುದರ್ಶನ್ ಅಲಭ್ಯ
ಎಡಗೈ ಬ್ಯಾಟರ್ ಸಾಯಿ ಸುದರ್ಶನ್ ಶ್ರೀಲಂಕಾ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ. ಕಾಲಿನ ಹೆಬ್ಬೆರಳು ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಅವರು ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಕಳೆದ ತಿಂಗಳು ಶ್ರೀಲಂಕಾದಲ್ಲಿ ಭಾರತ ಎ ಪರ 2ನೇ ಚತುರ್ದಿನ ಪಂದ್ಯ ಆಡುವ ವೇಳೆ ಅವರು ಈ ಗಾಯಕ್ಕೊಳಗಾಗಿದ್ದರು. ಬಳಿಕ ಬೆಂಗಳೂರಿನ ಬಿಸಿಸಿಐ ಶ್ರೇಷ್ಠತಾ ಕೇಂದ್ರದಲ್ಲಿ ಪುನಶ್ಚೇತನ ಶಿಬಿರದಲ್ಲಿದ್ದರು. ಆದರೆ ಅವರಿನ್ನೂ ಟೆಸ್ಟ್ ಕ್ರಿಕೆಟ್ ಆಡುವಷ್ಟು ಗುಣಮುಖರಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಸುದರ್ಶನ್ ಬದಲಿಗೆ ಬೇರೆ ಬ್ಯಾಟರ್ಅನ್ನು ಬಿಸಿಸಿಐ ಇನ್ನಷ್ಟೇ ಆರಿಸಬೇಕಾಗಿದೆ.