- ಐಸಿಸಿ ತಮ್ಮ ಮನವಿ ತಿರಸ್ಕರಿಸಿದ್ದಕ್ಕೆ ಬಿಸಿಬಿ ಪ್ರತಿಕ್ರಿಯೆ
- ಸರ್ಕಾರದೊಂದಿಗೆ ಚರ್ಚಿಸಿ ಹೇಳುವುದಾಗಿ ತಿಳಿಸಿದ್ದ ಬಿಸಿಬಿ ಅಧ್ಯಕ್ಷ ಅಮೀನುಲ್ ಇಸ್ಲಾಂ
- ಸರ್ಕಾರದ ನಿರ್ಧಾರವೇ ಅಂತಿಮ
- ಕಡೆಗೂ ನಾವು ಟೂರ್ನಿಯಲ್ಲಿ ಆಡುವುದಿಲ್ಲ ಎಂಬ ನಿಲುವು
ಢಾಕಾ: ಫೆಬ್ರವರಿ 7ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡುವುದಿಲ್ಲ ಎಂದು ಬಾಂಗ್ಲಾದೇಶ ತನ್ನ ನಿಲುವನ್ನು ಪುನರುಚ್ಚರಿಸಿದೆ. ನಮ್ಮ ಭದ್ರತಾ ದೃಷ್ಟಿಯಿಂದ ಭಾರತದಲ್ಲಿ ಆಡುವುದಿಲ್ಲ ಎಂದು ವಿವರಿಸಿದ್ದರು ಕೂಡ ಭಾರತ ಮಾತ್ರ ನಮ್ಮ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತಿಲ್ಲ ಎಂದು ಬಾಂಗ್ಲಾದೇಶದ ಕ್ರೀಡಾ ಸಚಿವಾಲಯದ ಸಲಹೆಗಾರ ಆಸಿಫ್ ನಜ್ರುಲ್ ಹೇಳಿದ್ದಾರೆ. ಇದೀಗ ಐಸಿಸಿ ತಮ್ಮ ಒಪ್ಪಂದವನ್ನು ತಿರಸ್ಕರಿಸಿದ ಕೂಡಲೇ ಬಿಸಿಬಿ, ಬಾಂಗ್ಲಾ ಸರ್ಕಾರಕ್ಕೆ ಅಂತಿಮ ನಿರ್ಧಾರವನ್ನು ತಿಳಿಸುವಂತೆ ಕೋರಿದೆ.
ತಮ್ಮ ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಕ್ಕೆ ಸ್ಥಳಾಂತರಿಸಬೇಕೆಂಬ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಮನವಿಯನ್ನು ಕಡೆಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ತಿರಸ್ಕರಿಸಿದೆ. ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಮತ್ತು ಬಾಂಗ್ಲಾದೇಶ ತನ್ನ ಪಂದ್ಯಗಳನ್ನು ಭಾರತದಲ್ಲಿಯೇ ಆಡಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿತು. ಇದೇ ಸಮಯದಲ್ಲಿ, ಟೂರ್ನಿಯಲ್ಲಿ ಭಾಗವಹಿಸುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಸಲು 24 ಗಂಟೆಗಳ ಗುಡುವು ನೀಡಲಾಯಿತು. ಇದರಿಂದ ಅಸಮಾಧಾನಗೊಂಡಿದ್ದ ಬಿಸಿಬಿ, ತನ್ನ ಸರ್ಕಾರದೊಂದಿಗೆ ಚರ್ಚಿಸಿ ಹೇಳುವುದಾಗಿ ಸ್ಪಷ್ಟಪಡಿಸಿತ್ತು. ಹೀಗೆಂದ ಕೆಲವೇ ಗಂಟೆಗಳಲ್ಲಿ ಟೂರ್ನಿಯ ಭಾಗವಾಗಿ ನಾವು ಭಾರತಕ್ಕೆ ಪ್ರವಾಸ ಮಾಡೋದಿಲ್ಲ ಎಂದು ಸ್ಪಷ್ಟಪಡಿಸಿದೆ.
ಈ ಕುರಿತು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಅಧ್ಯಕ್ಷ ಅಮಿನುಲ್ ಇಸ್ಲಾಂ ಮಾತನಾಡಿ, "ನಾವು ನಿರ್ಧಾರದಲ್ಲಿ ಬದಲಾವಣೆ ಆಗುತ್ತೆ ಎಂದೇ ನಿರೀಕ್ಷಿಸಿದ್ದೆವು. ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಬಾಂಗ್ಲಾದೇಶ ಸರ್ಕಾರದೊಂದಿಗೆ ಮಾತನಾಡಲು ಐಸಿಸಿ ಬಳಿ ನಾವು ಹೆಚ್ಚಿನ ಸಮಯವನ್ನು ಕೋರಿದ್ದೆವು. ಆದರೆ, ಐಸಿಸಿ ನಮ್ಮ ನಿರ್ಧಾರವನ್ನು ತಿರಸ್ಕರಿಸಿತು. ಸರ್ಕಾರದ ಮೇಲೆ ಒತ್ತಡ ಹೇರಲು ನಾವು ಬಯಸುವುದಿಲ್ಲ. ಏಕೆಂದರೆ, ಈಗಾಗಲೇ ಹೇಳಿರುವಂತೆ ಭಾರತ ನಮಗೆ ಸುರಕ್ಷಿತವಲ್ಲ. ನಾವು ಶ್ರೀಲಂಕಾದಲ್ಲಿ ಆಡಲು ಬಯಸುತ್ತೇವೆ. ಇಲ್ಲಿಯವರೆಗೆ, ಇದರಲ್ಲಿ ಯಾವುದೇ ಬದಲಾವಣೆಯಾಗಿಲ್ಲ" ಎಂದು ಇಸ್ಲಾಂ ತಿಳಿಸಿದರು.
ಐಸಿಸಿಗೆ ಮತ್ತೊಮ್ಮೆ ಮನವಿ ಸಲ್ಲಿಸುತ್ತೇವೆ. ಇದರೊಟ್ಟಿಗೆ ನಮ್ಮ ಸರ್ಕಾರಕ್ಕೂ ಅಂತಿಮ ಅಭಿಪ್ರಾಯವನ್ನು ತಿಳಿಸುವಂತೆ ಕೋರಿದ್ದೇವೆ. ಬಾಂಗ್ಲಾ ತಂಡ ಭಾರತಕ್ಕೆ ಪ್ರವಾಸ ಮಾಡೋದಿಲ್ಲ. ಈ ವಿಚಾರದಲ್ಲಿ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದಿದ್ದಾರೆ,(ಏಜೆನ್ಸೀಸ್).