ಮುಂದಿನ ವರ್ಷ ಅ.2ಕ್ಕೆ ಏಕದಿನ ವಿಶ್ವಕಪ್ ಆರಂಭ?: ದ.ಆಫ್ರಿಕಾ, ಜಿಂಬಾಬ್ವೆ ಹಾಗೂ ನಮೀಬಿಯಾ ಆತಿಥ್ಯ
ನವದೆಹಲಿ: ಮುಂದಿನ ವರ್ಷ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಹಾಗೂ ನಮೀಬಿಯಾ ಸಂಯುಕ್ತ ಆತಿಥ್ಯದಲ್ಲಿ ನಿಗದಿಯಾಗಿರುವ ಐಸಿಸಿ ಪುರುಷರ ಏಕದಿನ ವಿಶ್ವಕಪ್ ಟೂರ್ನಿಗೆ ಅಕ್ಟೋಬರ್ 2ರಂದು ಚಾಲನೆ ಸಿಗುವ ಸಾಧ್ಯತೆಗಳಿವೆ. ಪ್ರತಿ ನಾಲ್ಕು ವರ್ಷಕ್ಕೊಮ್ಮೆ ನಡೆಯಲಿರುವ ಜಾಗತಿಕ ಕ್ರಿಕೆಟ್ ಟೂರ್ನಿಯ ಆರಂಭಿಕ ದಿನಾಂಕವನ್ನು ಐಸಿಸಿ ಇನ್ನು ಅಧಿಕೃತಪಡಿಸಿಲ್ಲ. ಆದರೆ, ಶಾಂತಿ ಮತ್ತು ಅಹಿಂಸೆಯನ್ನು ಪ್ರತಿಪಾದಿಸಿದ ಮಹಾತ್ಮ ಗಾಂಧೀಜಿ ಅವರನ್ನು ಸ್ಮರಿಸುವ ಸಲುವಾಗಿ, ಅವರ ಜನ್ಮದಿನದಂದೇ (ಗಾಂಧಿ ಜಯಂತಿ) ಟೂರ್ನಿಯನ್ನು ಆರಂಭಿಸುವ ಕಾರ್ಯಕ್ಕೆ ಮುಂದಾಗಿದೆ ಎಂದು ವರದಿಯಾಗಿದೆ.
ದಕ್ಷಿಣ ಆಫ್ರಿಕಾದಲ್ಲಿ 21 ವರ್ಷಗಳ ಕಾಲ ನೆಲೆಸಿ, ಉತ್ತಮ ಬಾಂಧವ್ಯ ಹೊಂದಿದ್ದ ಗಾಂಧೀಜಿ ಅವರನ್ನು ಗೌರವಿಸುವುದರ ಜತೆಗೆ ಅವರ ಸಂದೇಶಗಳನ್ನು ಸಾರುವ ನಿಟ್ಟಿನಲ್ಲಿ ಐಸಿಸಿ ಕಾರ್ಯ ಯೋಜನೆ ರೂಪಿಸಲು ಮುಂದಾಗಿದೆ. ಇದರನ್ವಯ ವೇಳಾಪಟ್ಟಿಯನ್ನು ಪರಿಷ್ಕರಿಸಲು ಐಸಿಸಿ ನಿರ್ಧರಿಸಿದ್ದು, ಫೈನಲ್ ಪಂದ್ಯ ನವೆಂಬರ್ 21ರಂದೇ ನಡೆಯುವ ನಿರೀಕ್ಷೆ ಇದೆ.
ಪ್ರಸ್ತುತ ವೇಳಾಪಟ್ಟಿ ಪ್ರಕಾರ ಅಕ್ಟೋಬರ್ 1 ರಿಂದ 7ರವರೆಗೆ ಅಭ್ಯಾಸ ಪಂದ್ಯಗಳು ನಂತರ ಅಕ್ಟೋಬರ್ 8ರಂದು ವಿಶ್ವಕಪ್ ಉದ್ಘಾಟನಾ ಪಂದ್ಯ ಆಯೋಜಿಸಲು ಐಸಿಸಿ ನಿರ್ಧರಿಸಿತ್ತು.
ಈ ಬಾರಿಯ ಏಕದಿನ ವಿಶ್ವಕಪ್ ಟೂರ್ನಿ ಸ್ವರೂಪದಲ್ಲಿ ಐಸಿಸಿ ಬದಲಾವಣೆ ನಡೆಸಿದ್ದು, ಒಟ್ಟು 14 ತಂಡಗಳು 50 ದಿನ ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. ದಕ್ಷಿಣ ಆಫ್ರಿಕಾದ ಎಂಟು, ಜಿಂಬಾಬ್ವೆಯ ಮೂರು ಮತ್ತು ನಮೀಬಿಯಾದ ರಾಜಧಾನಿ ವಿಂಡ್‌ಹೋಕ್ ಸೇರಿ ಒಟ್ಟು 12 ತಾಣಗಳು ಪಂದ್ಯಗಳಿಗೆ ಆತಿಥ್ಯವಹಿಸಲಿವೆ.
ದಕ್ಷಿಣ ಆಫ್ರಿಕಾ (ಸಹ ಆತಿಥೇಯ), ಜಿಂಬಾಬ್ವೆ (ಸಹ ಆತಿಥೇಯ), ಭಾರತ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಪಾಕಿಸ್ತಾನ, ಇಂಗ್ಲೆಂಡ್, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ತಂಡಗಳು ಈಗಾಗಲೇ ವಿಶ್ವಕಪ್‌ಗೆ ಅರ್ಹತೆ ಪಡೆದಿವೆ. ಉಳಿದ 4 ತಂಡಗಳಿಗೆ ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಅರ್ಹತಾ ಸುತ್ತಿನೊಂದಿಗೆ ಅರ್ಹತೆ ಲಭಿಸಲಿದೆ. ಸಹ-ಆತಿಥೇಯ ನಮೀಬಿಯಾ, ವೆಸ್ಟ್ ಇಂಡೀಸ್ ಮತ್ತು ಐರ್ಲೆಂಡ್ ತಂಡಗಳು ಈ ಅರ್ಹತಾ ಸುತ್ತಿನಲ್ಲಿ ಸೆಣಸಲಿವೆ.