ಏಕದಿನ, ಟಿ20 ವಿಶ್ವಕಪ್ ಸ್ವರೂಪ ಬದಲಾವಣೆ 
ಕ್ರಿಕೆಟ್

ಏಕದಿನ, ಟಿ20 ವಿಶ್ವಕಪ್ ಸ್ವರೂಪ ಬದಲಾವಣೆ! ಉಪಾಂತ್ಯಕ್ಕೇರಲು 3 ಸುತ್ತುಗಳ ಹಾದಿ

ನವದೆಹಲಿ: ಮುಂಬರುವ 2027ರ ಏಕದಿನ ವಿಶ್ವಕಪ್ ಮತ್ತು 2028ರ ಟಿ20 ವಿಶ್ವಕಪ್ ಟೂರ್ನಿಗಳ ಸ್ವರೂಪವನ್ನು ಬದಲಾಯಿಸುವ ಮಹತ್ವದ ನಿರ್ಧಾರ ವನ್ನು ಐಸಿಸಿ ತೆಗೆದುಕೊಂಡಿದೆ. ಸ್ಕಾಟ್ಲೆಂಡ್ನ ಎಡಿನ್ಬರ್ಗ್ನಲ್ಲಿ ಇತ್ತೀಚೆಗೆ ನಡೆದ ಐಸಿಸಿ ವಾರ್ಷಿಕ ಮಹಾಸಭೆಯಲ್ಲಿ ಅಂಗೀಕರಿಸಲ್ಪಟ್ಟ ಈ ನಿರ್ಧಾರಗಳನ್ನು ಐಸಿಸಿ ಬುಧವಾರ ಅಧಿಕೃತವಾಗಿ ಪ್ರಕಟಿಸಿದೆ.
ಟೂರ್ನಿಗಳ ಸ್ಪರ್ಧಾತ್ಮಕತೆ, ಗುಣಮಟ್ಟ ಹೆಚ್ಚಿಸುವ ದೃಷ್ಟಿಯಿಂದ ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಆಟಗಾರರು ಮತ್ತು ಅಭಿಮಾನಿಗಳಿಗೂ ಇದು ಹೆಚ್ಚು ರೋಮಾಂಚಕ ಅನುಭವ ನೀಡುವ ನಿರೀಕ್ಷೆ ಇದೆ. 2028ರ ಏಕದಿನ ವಿಶ್ವಕಪ್ನಲ್ಲಿ 14 ತಂಡಗಳು ಆಡಲಿದ್ದು, 2 ಆತಿಥೇಯ (ದಕ್ಷಿಣ ಆಫ್ರಿಕಾ, ಜಿಂಬಾಬ್ವೆ) ಜತೆಗೆ ಐಸಿಸಿ ರ್ಯಾಂಕಿಂಗ್ನ ಅಗ್ರ 8 ತಂಡಗಳು ನೇರಅರ್ಹತೆ ಗಳಿಸಲಿವೆ. ಉಳಿದ 4 ತಂಡಗಳನ್ನು ಅರ್ಹತಾ ಸುತ್ತಿನ ಮೂಲಕ ಆಯ್ಕೆ ಮಾಡಲಾಗುತ್ತದೆ. 3ನೇ ಆತಿಥೇಯ ದೇಶ ನಮೀಬಿಯಾಕ್ಕೆ ನೇರ ಅರ್ಹತೆ ಸಿಗುವುದಿಲ್ಲ.

ಟಿ20 ವಿಶ್ವಕಪ್ನಲ್ಲಿ ಎಲಿಮಿನೇಟರ್!

ಆಸ್ಟ್ರೇಲಿಯಾ-ನ್ಯೂಜಿಲೆಂಡ್ನಲ್ಲಿ ನಡೆಯಲಿರುವ 2028ರ ಟಿ20 ವಿಶ್ವಕಪ್ನಲ್ಲೂ 20 ತಂಡಗಳು ಭಾಗವಹಿಸಲಿವೆ. ಆದರೆ ಪರಿಷ್ಕೃತ ಮಾದರಿಯಲ್ಲಿ ಸೆಮಿಫೈನಲ್ ಹಾದಿ ತುಸು ಜಟಿಲವಾಗಿರಲಿದೆ. ಅಲ್ಲದೆ ಟೂರ್ನಿಯ 2ನೇ ಸುತ್ತಿನಲ್ಲೂ ಹೆಚ್ಚಿನ ತಂಡಗಳು ಆಡುವ ಅವಕಾಶ ಪಡೆಯಲಿವೆ. ಸೂಪರ್-8 ಹಂತ ಸೂಪರ್-10 ಹಂತಕ್ಕೆ ವಿಸ್ತರಣೆಯಾಗಿರುವುದು ಇದಕ್ಕೆ ಕಾರಣ. ಗುಂಪು ಹಂತ (30 ಪಂದ್ಯ): 2024 ಮತ್ತು 2026ರಲ್ಲಿ ತಲಾ 5 ತಂಡಗಳ 4 ಗುಂಪುಗಳಿದ್ದರೆ, 2028ರಲ್ಲಿ 20 ತಂಡಗಳನ್ನು ತಲಾ 4ರಂತೆ 5 ಗುಂಪು ಗಳಲ್ಲಿ ವಿಂಗಿಡಿಸಲಾಗುತ್ತದೆ. ಪ್ರತಿ ಗುಂಪಿನ ಅಗ್ರ 2 ತಂಡಗಳು ಮುಂದಿನ ಸೂಪರ್-10 ಹಂತಕ್ಕೇರಲಿವೆ.

ಸೂಪರ್-10 (20 ಪಂದ್ಯ): ಈ ಹಂತದಲ್ಲೂ ತಲಾ 5 ತಂಡಗಳ 2 ಗುಂಪುಗಳು ಇರಲಿದ್ದು, ರೌಂಡ್ ರಾಬಿನ್ ಮಾದರಿಯಲ್ಲಿ ಪಂದ್ಯ ನಡೆಯಲಿವೆ. ಎರಡೂ ಗುಂಪಿನ ಅಗ್ರ 2 ತಂಡಗಳು ನೇರವಾಗಿ ಸೆಮಿಫೈನಲ್ಗೇರಲಿವೆ.

ಎಲಿಮಿನೇಟರ್ಸ್ (2 ಪಂದ್ಯ): ಸೂಪರ್-10 ಹಂತದಿಂದ ಸೆಮಿಫೈನಲ್ಗೇರುವ ಇನ್ನೆರಡು ತಂಡಗಳು ಎಲಿಮಿನೇಟರ್ ಎಂಬ ಮತ್ತೊಂದು ಸುತ್ತಿನಲ್ಲಿ ಆಡಬೇಕಾಗುತ್ತದೆ. ಸೂಪರ್-10 ಹಂತದ 2 ಗುಂಪುಗಳಲ್ಲಿ 2 ಮತ್ತು 3ನೇ ಸ್ಥಾನ ಪಡೆದ ತಂಡಗಳು ಇದರಲ್ಲಿ ಆಡಲಿವೆ. 2ನೇ ಸ್ಥಾನ ಪಡೆದ ತಂಡ ಇನ್ನೊಂದು ಗುಂಪಿನ 3ನೇ ಸ್ಥಾನಿ ವಿರುದ್ಧ ಎಲಿಮಿನೇಟರ್ ಆಡಲಿದ್ದು, ಗೆದ್ದ ತಂಡ ಸೆಮಿಫೈನಲ್ಗೇರಲಿದೆ. ಟೂರ್ನಿಯಲ್ಲಿ ಫೈನಲ್ ಸಹಿತ ಒಟ್ಟು 55 ಪಂದ್ಯಗಳು ನಡೆಯಲಿವೆ.

ಏಕದಿನ ವಿಶ್ವಕಪ್ಗೆ ಸೂಪರ್ ಸಿರೀಸ್ ಸೇರ್ಪಡೆ

ದಕ್ಷಿಣ ಆಫ್ರಿಕಾ, ಜಿಂಬಾಬ್ವೆ, ನಮೀಬಿಯಾದ ಸಂಯುಕ್ತ ಆಶ್ರಯದಲ್ಲಿ ಮುಂದಿನ ವರ್ಷ ನಡೆಯಲಿರುವ ಎಕದಿನ ವಿಶ್ವಕಪ್ನಲ್ಲಿ ಸೆಮೀಸ್ಗೆ ಮುನ್ನ 3 ಸುತ್ತುಗಳಲ್ಲಿ ಪಂದ್ಯಗಳು ನಡೆಯಲಿವೆ. 2019, 2023ರ ವಿಶ್ವಕಪ್ಗಳಲ್ಲಿ 10 ತಂಡಗಳಷ್ಟೇ ಆಡಿದ್ದವು. 2027ರ ಟೂರ್ನಿಯಲ್ಲಿ ಒಟ್ಟು 14 ತಂಡಗಳು ಭಾಗವಹಿಸಲಿದ್ದರೂ, ಪ್ರಮುಖ ಹಂತದಲ್ಲಿ 12 ತಂಡಗಳಷ್ಟೇ ಆಡಲಿವೆ. ಆರಂಭಿಕ ಸೂಪರ್ ಸಿರೀಸ್ ಹಂತದಲ್ಲೇ 2 ತಂಡಗಳು ಹೊರಬೀಳಲಿವೆ.

ಮೊದಲ ಸುತ್ತು-ಸೂಪರ್ ಸಿರೀಸ್: ಅರ್ಹತೆ 14 ತಂಡಗಳ ಪೈಕಿ ಕೆಳಗಿನ 3 ತಂಡಗಳು (12ರಿಂದ 14ನೇ ಸ್ಥಾನ) ರೌಂಡ್ ರಾಬಿನ್ ಮಾದರಿಯ ಸೂಪರ್ ಸಿರೀಸ್ ಹಂತದಲ್ಲಿ ಆಡಲಿದ್ದು, ವಿಜೇತ ತಂಡ ಮಾತ್ರ ಮುಂದಿನ ಸುತ್ತಿಗೆ ಅರ್ಹತೆ ಪಡೆಯಲಿದೆ.

ಎರಡನೇ ಸುತ್ತು-ಗುಂಪು ಹಂತ(30 ಪಂದ್ಯ): ಈ ಸುತ್ತಿನಲ್ಲಿ 12 ತಂಡಗಳು ಕಣಕ್ಕಿಳಿಯಲಿದ್ದು, ತಲಾ 6ರಂತೆ 2 ಗುಂಪುಗಳಲ್ಲಿ ರೌಂಡ್ ರಾಬಿನ್ ಮಾದರಿಯಲ್ಲಿ ಆಡಲಿವೆ. ಪ್ರತಿ ಗುಂಪಿನ ಅಗ್ರ 3 ತಂಡಗಳು ಮತ್ತು 4ನೇ ಸ್ಥಾನ ಪಡೆದ ಅತ್ಯುತ್ತಮ ತಂಡವೊಂದು ಮುಂದಿನ ಸೂಪರ್-7 ಹಂತಕ್ಕೇರಲಿದೆ.

3ನೇ ಸುತ್ತು-ಸೂಪರ್-7 (21 ಪಂದ್ಯ): ಈ ಸುತ್ತಿನಲ್ಲಿ 7 ತಂಡಗಳು ರೌಂಡ್ ರಾಬಿನ್ ಮಾದರಿಯಲ್ಲಿ ತಲಾ ಒಮ್ಮೆ ಮುಖಾಮುಖಿ ಆಗಲಿದ್ದು, ಅಗ್ರ 4 ತಂಡಗಳು ನೇರವಾಗಿ ಸೆಮಿಫೈನಲ್ ಹಂತಕ್ಕೇರಲಿವೆ.

ನಾಕೌಟ್: ಸೆಮಿಫೈನಲ್ನಲ್ಲಿ ಸೂಪರ್-7 ಹಂತದ ಅಗ್ರಸ್ಥಾನಿ ಮತ್ತು 4ನೇ ಸ್ಥಾನಿ ತಂಡಗಳು ಹಾಗೂ 3-4ನೇ ಸ್ಥಾನಿ ತಂಡಗಳು ಮುಖಾಮುಖಿ ಆಗಲಿವೆ. ಫೈನಲ್ ಸಹಿತ ಒಟ್ಟು 57 ಪಂದ್ಯ ನಡೆಯಲಿವೆ.