ಅಭಿಷೇಕ್ ಶರ್ಮ ಬ್ಯಾಟ್ ಚೆಕ್ ಮಾಡಿದ ಕಿವೀಸ್ ಆಟಗಾರರು
- 3ನೇ ಟಿ20 ಪಂದ್ಯದಲ್ಲಿ ಅಭಿಷೇಕ್ ಶರ್ಮಾ ವೀರೋಚಿತ ಪ್ರದರ್ಶನ
- ಕಿವೀಸ್ ಬೌಲರ್‌ಗಳನ್ನು ಕಾಡಿದ ಟೀಮ್ ಇಂಡಿಯಾ ಬ್ಯಾಟರ್ಗಳು
- ಸ್ಫೋಟಕ ಇನ್ನಿಂಗ್ಸ್ ಆಡಿದ ಅಭಿಷೇಕ್ ಅವರ ಬ್ಯಾಟ್ ಚೆಕ್ ಮಾಡಿದ ಕಿವೀಸ್ ಪಡೆ
Abhishek Sharma: ನಿನ್ನೆ (ಜ.25) ಗುವಾಹಟಿಯಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾದ ಯುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ತಮ್ಮ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಐತಿಹಾಸಿಕ ದಾಖಲೆಗೆ ಸಾಕ್ಷಿಯಾದರು. ಕೇವಲ 20 ಎಸೆತಗಳಲ್ಲಿ 7 ಬೌಂಡರಿ ಮತ್ತು 5 ಸಿಕ್ಸರ್‌ಗಳನ್ನು ಸಿಡಿಸಿದ ಅವರು, 68 ರನ್ ಗಳಿಸಿ ಅಜೇಯರಾಗಿ ಪಂದ್ಯದಲ್ಲಿ ಉಳಿದದ್ದು ಸದ್ಯ ಕ್ರಿಕೆಟ್ ಪ್ರಿಯರ ಪ್ರಶಂಸೆ, ಮೆಚ್ಚುಗೆಗೆ ಕಾರಣವಾಗಿದೆ.
ಮೂರನೇ ಟಿ20 ಪಂದ್ಯದಲ್ಲಿ ಅಭಿಷೇಕ್, ಕೇವಲ 14 ಎಸೆತಗಳಲ್ಲಿ ವೇಗದ ಅರ್ಧಶತಕ ಗಳಿಸಿದರು. ಈ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಭಾರತಕ್ಕಾಗಿ ಅತಿ ವೇಗದ ಅರ್ಧಶತಕ ಗಳಿಸಿದ ಎರಡನೇ ಆಟಗಾರ ಎಂಬ ದಾಖಲೆಯನ್ನು ನಿರ್ಮಿಸಿದರು. ಅಭಿಷೇಕ್ ಅವರ ಸ್ಫೋಟಕ ಇನ್ನಿಂಗ್ಸ್ ಅನ್ನು ಕೊಂಡಾಡುತ್ತಿರುವ ಮಾಜಿ ಕ್ರಿಕೆಟಿಗರು, ಯುವ ಬ್ಯಾಟರ್ನ ಗುರುಗಳಾದ ಯುವರಾಜ್ ಸಿಂಗ್ರನ್ನು ಈ ಸಮಯದಲ್ಲಿ ನೆನಪಿಸಿಕೊಂಡಿದ್ದು ವಿಶೇಷ.
ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ ಮತ್ತು ಅಭಿಷೇಕ್ ಶರ್ಮ ಅವರ ಬಿರುಗಾಳಿಯ ಇನ್ನಿಂಗ್ಸ್, ನ್ಯೂಜಿಲೆಂಡ್ ನೀಡಿದ 154 ರನ್ಗಳ ಗುರಿಯನ್ನು ಕೇವಲ 10 ಓವರ್‌ಗಳಲ್ಲಿ ತಲುಪುವಂತೆ ಮಾಡಿತು. ಈ ಪಂದ್ಯ ಗೆಲ್ಲುವ ಮೂಲಕ ಭಾರತ 3-0 ಅಂತರದಲ್ಲಿ ಟಿ20 ಸರಣಿಯನ್ನು ವಶಪಡಿಸಿಕೊಂಡಿದೆ. ಉಳಿದಿರುವ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಕಿವೀಸ್ ಅನ್ನು ಸರಣಿಯಲ್ಲಿ ಕ್ವೀನ್ಸ್ವೀಪ್ ಮಾಡಲು ಎದುರುನೋಡುತ್ತಿದೆ.
ಅಭಿಷೇಕ್ ಬ್ಯಾಟ್ ಚೆಕ್ ಮಾಡಿದ ಕಿವೀಸ್
ಪಂದ್ಯದ ಬಳಿಕ ಅಭಿಷೇಕ್ ಶರ್ಮಾ ಬಳಿ ಬಂದ ಕಿವೀಸ್ ಆಟಗಾರರು, ಅವರ ಕೈಯಲ್ಲಿದ್ದ ಬ್ಯಾಟ್ ಅನ್ನು ಹಿಂದೆ-ಮುಂದೆ ತಿರುಗಿಸುವ ಮೂಲಕ ಚೆಕ್ ಮಾಡಿದರು. ನೀವು ಬ್ಯಾಟ್‌ನಲ್ಲಿ ಏನಾಕಿದ್ದೀರಿ? ಹೇಗೆ ಇಂತಹ ಶಾಟ್ಸ್ಗಳನ್ನು ಹೊಡೆಯುತ್ತಿದ್ದೀರಿ? ಎಂದು ಕೇಳಿದ ದೃಶ್ಯಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ,(ಏಜೆನ್ಸೀಸ್).