ವಿಶ್ವಕಪ್ ಸಂಭ್ರಮ...ಸಂಜು ಅಲ್ಲವೇ ಅಲ್ಲ ಸೂರ್ಯಕುಮಾರ್ ಪ್ರಕಾರ ಈ ಆಟಗಾರ ನಮ್ಮ ದೇಶದ ನಿಧಿಯಂತೆ! Suryakumar Yadav
- ಎಲ್ಲರ ನಿರೀಕ್ಷೆಯಂತೆ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಟೂರ್ನಿಯ ವಿಜಯಶಾಲಿಯಾಗಿ ಹೊರಹೊಮ್ಮಿದೆ
- ಸತತ ಎರಡು ಬಾರಿ ಟಿ20 ವಿಶ್ವಕಪ್ ಮತ್ತು ತವರಿನಲ್ಲಿ ಚುಟುಕು ವಿಶ್ವಕಪ್ ಗೆದ್ದ ಮೊದಲ ತಂಡವೆಂಬ ಹೆಗ್ಗಳಿಕೆ
- ತಮ್ಮ ನಾಯಕತ್ವದಲ್ಲಿ ಟಿ20 ವಿಶ್ವಕಪ್ ಗೆದ್ದಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ಸೂರ್ಯಕುಮಾರ್ ಯಾದವ್
Suryakumar Yadav : ಎಲ್ಲರ ನಿರೀಕ್ಷೆಯಂತೆ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಟೂರ್ನಿಯ ವಿಜಯಶಾಲಿಯಾಗಿ ಹೊರಹೊಮ್ಮಿದೆ. ಈ ಮೂಲಕ ಸತತ ಎರಡು ಬಾರಿ ಟಿ20 ವಿಶ್ವಕಪ್ ಗೆದ್ದ ತಂಡ ಮತ್ತು ತವರಿನಲ್ಲಿ ಚುಟುಕು ವಿಶ್ವಕಪ್ ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ಮೂಲಕ ಟೀಮ್ ಇಂಡಿಯಾ ಇತಿಹಾಸವನ್ನು ಸೃಷ್ಟಿಸಿದೆ.
ಭಾನುವಾರ (ಮಾರ್ಚ್ 08) ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡವು ನ್ಯೂಜಿಲೆಂಡ್ ತಂಡವನ್ನು 96 ರನ್‌ಗಳಿಂದ ಸೋಲಿಸಿತು. ಈ ಮೂಲಕ ಮೂರನೇ ಟಿ20 ವಿಶ್ವಕಪ್ ಎತ್ತಿಹಿಡಿಯಿತು. ಈ ಹಿಂದೆ 2007 ರಲ್ಲಿ ಧೋನಿ ಮತ್ತು 2024 ರಲ್ಲಿ ರೋಹಿತ್ ಶರ್ಮಾ ನೇತೃತ್ವದಲ್ಲಿ ಚುಟುಕು ವಿಶ್ವಕಪ್ ಗೆದ್ದಿದೆ. ತಮ್ಮ ನಾಯಕತ್ವದಲ್ಲಿ ಟಿ20 ವಿಶ್ವಕಪ್ ಗೆದ್ದಿದ್ದಕ್ಕೆ ಸೂರ್ಯಕುಮಾರ್ ಯಾದವ್ ಸಂತಸ ವ್ಯಕ್ತಪಡಿಸಿದರು.
ಸೂರ್ಯಕುಮಾರ್ ಏನು ಹೇಳಿದರು ಅನ್ನೋದಕ್ಕೂ ಮುಂಚೆ ಪಂದ್ಯದ ಹೈಲೈಟ್ಸ್ ತಿಳಿದುಕೊಳ್ಳೋಣ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿತು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಸಂಜು ಸ್ಯಾಮ್ಸನ್ (89 ರನ್, 46 ಎಸೆತ, 5 ಬೌಂಡರಿ, 8 ಸಿಕ್ಸರ್) ಹಾಗೂ ಅಭಿಷೇಕ್ ಶರ್ಮಾ (52 ರನ್, 21 ಎಸೆತ, 6 ಬೌಂಡರಿ, 3 ಸಿಕ್ಸರ್) ಭರ್ಜರಿ ಆರಂಭ ಒದಗಿಸಿದರು. ಮೂರನೇ ಕ್ರಮಾಂಕದಲ್ಲಿ ಬಂದ ಇಶಾನ್ ಕಿಶನ್ (54 ರನ್, 25 ಎಸೆತ, 4 ಬೌಂಡರಿ, 4 ಸಿಕ್ಸರ್) ಅರ್ಧ ಶತಕದೊಂದಿಗೆ ತಂಡದ ಮೊತ್ತವನ್ನು ಹಿಗ್ಗಿಸಿದರು. ಕೊನೆಯಲ್ಲಿ ಬಂದ ಶಿವಂ ದುಬೆ ( ಅಜೇಯ 26 ರನ್, 8 ಎಸೆತ, 3 ಬೌಂಡರಿ, 2 ಸಿಕ್ಸರ್) ವಿನಾಶಕಾರಿ ಇನ್ನಿಂಗ್ಸ್ ಆಡಿದರು. ಈ ಮೂಲಕ ಟೀಮ್ ಇಂಡಿಯಾ, ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 255 ರನ್‌ಗಳ ಬೃಹತ್ ಸ್ಕೋರ್ ಗಳಿಸಿತು. ಕಿವೀಸ್ ಬೌಲರ್‌ಗಳಲ್ಲಿ, ಜೇಮ್ಸ್ ನೀಶಮ್ ಮೂರು ವಿಕೆಟ್‌ಗಳನ್ನು ಪಡೆದರೆ, ಮ್ಯಾಟ್ ಹೆನ್ರಿ ಮತ್ತು ರಾಚಿನ್ ರವೀಂದ್ರ ತಲಾ ಒಂದು ವಿಕೆಟ್ ಪಡೆದರು.
256 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಕಿವೀಸ್ ತಂಡ, ಟೀಮ್ ಇಂಡಿಯಾದ ಬೌಲಿಂಗ್ ದಾಳಿಗೆ ತತ್ತರಿಸಿತು. ಅಂತಿಮವಾಗಿ 19 ಓವರ್‌ಗಳಲ್ಲಿ 159 ರನ್‌ಗಳಿಗೆ ಆಲೌಟ್ ಆಯಿತು. ಕಿವೀಸ್ ಪರ ಟಿಮ್ ಸೈಫರ್ಟ್ (26 ಎಸೆತಗಳಲ್ಲಿ 52 ರನ್) ಮತ್ತು ಮಿಚೆಲ್ ಸ್ಯಾಂಟ್ನರ್ (35 ಎಸೆತಗಳಲ್ಲಿ 43 ರನ್) ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಉಳಿದಂತೆ ಯಾವೊಬ್ಬ ಬ್ಯಾಟರ್ ಕೂಡ ಪ್ರಭಾವ ಬೀರಲಿಲ್ಲ. ಸೆಮಿಫೈನಲ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೇವಲ 33 ಎಸೆತಗಳಲ್ಲಿ ಶತಕ ಬಾರಿಸಿದ್ದ ಫಿನ್ ಅಲೆನ್ ನಿನ್ನೆಯ ಪಂದ್ಯದಲ್ಲಿ ಕೇವಲ 9 ರನ್ಗೆ ಔಟಾದರು. ಟೀಮ್ ಇಂಡಿಯಾ ಪರ ಜಸ್ಪ್ರೀತ್ ಬುಮ್ರಾ ನಾಲ್ಕು ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ ಮೂರು ವಿಕೆಟ್ ಪಡೆದರು. ಹಾರ್ದಿಕ್ ಪಾಂಡ್ಯ, ವರುಣ್ ಚಕ್ರವರ್ತಿ ಮತ್ತು ಅಭಿಷೇಕ್ ಶರ್ಮಾ ತಲಾ ಒಂದು ವಿಕೆಟ್ ಪಡೆದರು.
ಸಂತಸ ವ್ಯಕ್ತಪಡಿಸಿದ ಸೂರ್ಯ
ಪಂದ್ಯದ ನಂತರ, ಟೀಮ್ ಇಂಡಿಯಾದ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಮಾತನಾಡಿ, ಟಿ20 ವಿಶ್ವಕಪ್ ಗೆದ್ದಿದ್ದಕ್ಕೆ ತುಂಬಾ ಸಂತೋಷವಾಗಿದೆ ಎಂದರು. ನಾವು ಮತ್ತೊಮ್ಮೆ ಟಿ20 ಚಾಂಪಿಯನ್ಸ್ ಎಂಬ ಸಂಭ್ರಮದ ಸಂಗತಿಯನ್ನು ಅರಗಿಸಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದರು. ಈ ಹಿಂದೆ ಬಿಸಿಸಿಐ ಕಾರ್ಯದರ್ಶಿಯಾಗಿ, ಈಗ ಐಸಿಸಿ ಅಧ್ಯಕ್ಷರಾಗಿರುವ ಜಯ್ ಶಾ ಮತ್ತು ಟೀಮ್ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ ಅವರು ನನ್ನ ಮೇಲೆ ನಂಬಿಕೆ ಇಟ್ಟು ನಾಯಕತ್ವದ ಜವಾಬ್ದಾರಿಗಳನ್ನು ವಹಿಸಿದ್ದಕ್ಕೆ ಅವರಿಗೆ ಧನ್ಯವಾದಗಳು ಎಂದು ಹೇಳಿದರು. ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನು ತಮ್ಮ ಪೀಳಿಗೆಯ ಬೌಲರ್ ಎಂದು ಹೊಗಳಿದರು ಮತ್ತು ಅವರು ನಮ್ಮ ದೇಶದ ಸಂಪತ್ತು ಎಂದು ಕೊಂಡಾಡಿದರು.
ನಿರ್ದಿಷ್ಟವಾಗಿ ಹೇಳಬೇಕಾಗಿಲ್ಲ
ಕಳೆದ ಎರಡು ವರ್ಷಗಳಿಂದ ನಾವೆಲ್ಲರು ಉತ್ತಮ ಕ್ರಿಕೆಟ್ ಆಡುತ್ತಿದ್ದೇವೆ. 2024ರ ಟಿ20 ವಿಶ್ವಕಪ್‌ನಲ್ಲಿ ನಾವು ಅನುಸರಿಸಿದ ಉತ್ತಮ ಅಭ್ಯಾಸಗಳನ್ನು ಮುಂದುವರಿಸಲು ನಾವು ಬಯಸಿದ್ದೆವು ಮತ್ತು ನಮ್ಮ ಹುಡುಗರು ಸಹ ಅದನ್ನು ಮುಂದುವರಿಸಿದ್ದಾರೆ. ನಾಯಕನಾಗಿ ನನ್ನ ಕೆಲಸವೆಂದರೆ ಆಟಗಾರರ ಮೇಲೆ ನಂಬಿಕೆ ಇಡುವುದು. ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ ಮತ್ತು ವರುಣ್ ಚಕ್ರವರ್ತಿ ಅತ್ಯುತ್ತಮ ಆಟಗಾರರು ಮತ್ತು ಅವರು ಪಂದ್ಯ ವಿಜೇತರು. ವಿಶೇಷ ಸಂದರ್ಭಗಳಲ್ಲಿ ಹೇಗೆ ಉತ್ತಮ ಸಾಧನೆ ಮಾಡಬೇಕೆಂಬುದನ್ನು ಅವರಿಗೆ ನಿರ್ದಿಷ್ಟವಾಗಿ ಹೇಳಬೇಕಾಗಿಲ್ಲ ಎಂದು ಸೂರ್ಯಕುಮಾರ್ ಹೇಳಿದರು.
ಬುಮ್ರಾ ದೇಶದ ಸಂಪತ್ತು
ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನು ಸೂರ್ಯ ಹೊಗಳಿದರು. ಒಂದು ಪೀಳಿಗೆಯಲ್ಲಿ ಮಾತ್ರ ಅವರಂತಹ ಆಟಗಾರ ಇರುತ್ತಾನೆ ಮತ್ತು ಅವರು ಈ ದೇಶಕ್ಕೆ ಆಸ್ತಿ ಎಂದರು. ಕಳೆದ ಪಂದ್ಯದಲ್ಲಿ ಬುಮ್ರಾಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಬೇಕು ಎಂದು ಸಂಜು ಸ್ಯಾಮ್ಸನ್ ಹೇಳಿದಂತೆ ನಾನು ಹೇಳುತ್ತೇನೆ. ಏಕೆಂದರೆ, ಪಂದ್ಯವನ್ನು ಹೇಗೆ ಗೆಲ್ಲಬೇಕೆಂಬುದು ಅವರಿಗೆ ಚೆನ್ನಾಗಿ ತಿಳಿದಿದೆ. ಬುಮ್ರಾ ಅವರು ಈ ಕ್ಷೇತ್ರದಲ್ಲಿ ಅತ್ಯುತ್ತಮ ಆಟಗಾರ. ಭವಿಷ್ಯದಲ್ಲಿಯೂ ಅವರು ಅದನ್ನು ಮುಂದುವರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಸೂರ್ಯ ಹೇಳಿದರು.
ಫೈನಲ್ ಪಂದ್ಯದ ನಂತರ ಸೂರ್ಯಕುಮಾರ್ ಯಾದವ್ ನಿವೃತ್ತಿ ಘೋಷಿಸುತ್ತಾರೆ ಎಂಬ ವರದಿಗಳು ಬಂದವು. ಈ ಬಗ್ಗೆ ಪ್ರಶ್ನಿಸಿದಾಗ, ಈಗ ಎಲ್ಲವೂ ಸರಿಯಾಗಿದೆ ಅಲ್ವಾ? ನೀವು ಈಗ ಅದರ ಬಗ್ಗೆ ಏಕೆ ಯೋಚಿಸುತ್ತಿದ್ದೀರಿ? ಎಂದು ಉತ್ತರಿಸಿದರು, (ಏಜೆನ್ಸೀಸ್).