ನವದೆಹಲಿ: ಐಪಿಎಲ್ 2027ರ ಮುನ್ನ ನಡೆದ ಮಹತ್ವದ ಆಟಗಾರರ ವಿನಿಮಯ ಒಪ್ಪಂದದ ಮೂಲಕ ರಿಷಭ್ ಪಂತ್ ಮತ್ತೆ ಡೆಲ್ಲಿ ಕ್ಯಾಪಿಟಲ್ಸ್(Delhi Capitals) ತಂಡಕ್ಕೆ ಮರಳಿದ್ದಾರೆ. ಈ ಹಿನ್ನೆಲೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಅಕ್ಷರ್ ಪಟೇಲ್, ಪಂತ್‌ಗೆ ಹಾಸ್ಯಮಯವಾಗಿ ಸ್ವಾಗತ ಕೋರಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಒಪ್ಪಂದದ ಪ್ರಕಾರ ರಿಷಭ್ ಪಂತ್ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ತೊರೆದು 15 ಕೋಟಿ ರೂ. ಮೊತ್ತಕ್ಕೆ ಡೆಲ್ಲಿ ಕ್ಯಾಪಿಟಲ್ಸ್‌ಗೆ ಸೇರ್ಪಡೆಯಾಗಿದ್ದಾರೆ. ಅದೇ ವೇಳೆ ಭಾರತ ತಂಡದ ಸ್ಪಿನ್ನರ್ ಕುಲದೀಪ್ ಯಾದವ್ 13.5 ಕೋಟಿ ರೂ. ಮೊತ್ತಕ್ಕೆ ಲಖನೌ ಸೂಪರ್ ಜೈಂಟ್ಸ್ ತಂಡಕ್ಕೆ ವರ್ಗಾವಣೆಗೊಂಡಿದ್ದಾರೆ.
ಪಂತ್ ಜೊತೆ ಮೊದಲ ಮಾತುಕತೆ
ಡೆಲ್ಲಿ ಕ್ಯಾಪಿಟಲ್ಸ್ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಅಕ್ಷರ್ ಪಟೇಲ್, ಪಂತ್ ಜೊತೆ ನಡೆದ ಮೊದಲ ಮಾತುಕತೆಯ ಬಗ್ಗೆ ಹೇಳಿಕೊಂಡಿದ್ದಾರೆ. ಒಪ್ಪಂದ ಅಂತಿಮಗೊಂಡ ಬಳಿಕ ಪಂತ್ ಹಲವು ಬಾರಿ ಕರೆ ಮಾಡಿದ್ದರು. ಆದರೆ ಆ ವೇಳೆ ಮಗುವಿನೊಂದಿಗೆ ಸಮಯ ಕಳೆಯುತ್ತಿದ್ದ ಕಾರಣ ಕರೆ ಸ್ವೀಕರಿಸಲು ಸಾಧ್ಯವಾಗಿರಲಿಲ್ಲ ಎಂದು ಅಕ್ಷರ್ ತಿಳಿಸಿದ್ದಾರೆ. ನಂತರ ಅಕ್ಷರ್ ಕರೆ ಮಾಡಿದಾಗ, ಪಂತ್ ಉತ್ಸಾಹದಿಂದ, “ಕನ್‌ಫರ್ಮ್ ಆಗಿದೆ ಭಾಯ್, ನಾನು ವಾಪಸ್ ಬರುತ್ತಿದ್ದೇನೆ” ಎಂದು ಹೇಳಿದ್ದರು ಎಂದು ಅಕ್ಷರ್ ನೆನಪಿಸಿಕೊಂಡಿದ್ದಾರೆ.
ವೈರಲ್ ಆದ ಹಿಂದಿ ಗಾದೆ
ಈ ವೇಳೆ ಪಂತ್‌ಗೆ ಹೇಳಬೇಕೆಂದುಕೊಂಡಿದ್ದ ಒಂದು ಮಾತನ್ನು ವಿಡಿಯೋದಲ್ಲಿ ಅಕ್ಷರ್ ಹಂಚಿಕೊಂಡರು. “ಸುಬಹ್ ಕಾ ಭುಲಾ ಅಗರ್ ಶಾಮ್ ಕೋ ಘರ್ ವಾಪಸ್ ಆ ಜಾಯೇ ತೋ ಉಸೆ ಭುಲಾ ನಹೀ ಕಹ್ತೆ” ಎಂದು ಅವರು ಹೇಳಿದರು. ಅಂದರೆ, “ಬೆಳಗ್ಗೆ ದಾರಿ ತಪ್ಪಿದ ವ್ಯಕ್ತಿ ಸಂಜೆ ಮನೆಗೆ ಮರಳಿ ಬಂದರೆ, ಅವನನ್ನು ಕಳೆದುಹೋದವನು ಎಂದು ಕರೆಯುವುದಿಲ್ಲ” ಎಂಬ ಅರ್ಥದ ಹಿಂದಿ ಗಾದೆಯನ್ನು ಹೇಳುವ ಮೂಲಕ ಪಂತ್‌ಗೆ ಆತ್ಮೀಯ ಸ್ವಾಗತ ಕೋರಿದರು.
ಡೆಲ್ಲಿ ತಂಡದ ಯಶಸ್ವಿ ಆಟಗಾರ
ರಿಷಭ್ ಪಂತ್ 2016ರಿಂದ 2024ರವರೆಗೆ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದರು. ಈ ಅವಧಿಯಲ್ಲಿ ಅವರು 3,284 ರನ್ ಗಳಿಸಿ ತಂಡದ ಇತಿಹಾಸದಲ್ಲೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ. ಡೆಲ್ಲಿ ಅಭಿಮಾನಿಗಳ ಮೆಚ್ಚಿನ ಆಟಗಾರರಾಗಿದ್ದ ಪಂತ್, ನಂತರದ ಮೆಗಾ ಹರಾಜಿನಲ್ಲಿ ದಾಖಲೆಯ 27 ಕೋಟಿ ರೂ. ಮೊತ್ತಕ್ಕೆ ಲಖನೌ ಸೂಪರ್ ಜೈಂಟ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದರು.
ಲಖನೌನಲ್ಲಿ ಮಿಶ್ರ ಪ್ರದರ್ಶನ
2025 ಮತ್ತು 2026ರ ಎರಡು ಋತುಗಳಲ್ಲಿ ಲಖನೌ ಪರ ಆಡಿದ ಪಂತ್ 581 ರನ್ ಗಳಿಸಿದ್ದರು. ನಾಯಕರಾಗಿ 28 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ ಅವರು 10 ಪಂದ್ಯಗಳಲ್ಲಿ ಗೆಲುವು ಹಾಗೂ 18 ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ. ಈ ಅವಧಿಯಲ್ಲಿ ಅವರ ಗೆಲುವಿನ ಪ್ರಮಾಣ ಶೇ.35.71ರಷ್ಟಿತ್ತು. ಬದಲಾಗುತ್ತಿರುವ ತಂಡದ ತಂತ್ರಗಳು ಮತ್ತು ಇತರೆ ಕಾರಣಗಳಿಂದ ಎರಡೂ ಫ್ರಾಂಚೈಸಿಗಳು ನೇರ ಆಟಗಾರರ ವಿನಿಮಯಕ್ಕೆ ಒಪ್ಪಿಕೊಂಡಿದ್ದು, ಇದೀಗ ಪಂತ್ ತಮ್ಮ ಹಳೆಯ ತಂಡ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮರಳಿದ್ದಾರೆ,(ಏಜೆನ್ಸೀಸ್).