ಅಂತಾರಾಷ್ಟ್ರೀಯ ಲೀಗ್ T20 ಲೀಗ್‌ನಲ್ಲಿ ವಿಚಿತ್ರ ಬೌಲಿಂಗ್
- ಅಂತಾರಾಷ್ಟ್ರೀಯ ಲೀಗ್ T20 ಲೀಗ್‌ನಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ
- ಬೌಲರ್ ತುಂಬಾ ವಿಚಿತ್ರವಾಗಿ ಬೌಲಿಂಗ್ ಮಾಡಿರುವ ವಿಡಿಯೋ ವೈರಲ್ ಆಗಿದೆ
- ವಿಚಿತ್ರ ಬೌಲಿಂಗ್ ಮಾಡಿದ ಜೇಸನ್ ಹೋಲ್ಡರ್ ಮೈದಾನದಲ್ಲೇ ನಕ್ಕ ಅಭಿಮಾನಿಗಳು
ILT20 : ಜಗತ್ತಿನಲ್ಲಿ ಪುಟ್ಬಾಲ್ನಷ್ಟೇ ಕ್ರೇಜ್ ಕ್ರಿಕೆಟ್ಗೂ ಇದೆ. ಕೋಟ್ಯಂತರ ಅಭಿಮಾನಿಗಳ ಬಳಗವನ್ನು ಹೊಂದಿರುವ ಕ್ರಿಕೆಟ್, ಒಂದು ಅದ್ಭುತ ಮನರಂಜನಾ ಕ್ರೀಡೆ. ಮೈದಾನದಲ್ಲಿ ಆಗಾಗ ಕೆಲವು ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತವೆ. ಬ್ಯಾಟ್ಸ್‌ಮನ್ ವಿಚಿತ್ರವಾಗಿ ಔಟಾಗುವುದು, ಫೀಲ್ಡರ್ ಸಖತ್ತಾಗಿ ಕ್ಯಾಚ್ ಹಿಡಿಯವುದು ಹಾಗೂ ಬೌಲರ್ ತುಂಬಾ ವಿಚಿತ್ರವಾಗಿ ಬೌಲಿಂಗ್ ಮಾಡುವ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ವೈರಲ್ ಆಗುತ್ತಿರುತ್ತವೆ. ಆ ಸಾಲಿಗೆ ಇದೀಗ ಮತ್ತೊಂದು ವಿಡಿಯೋ ಸೇರಿಕೊಂಡಿದೆ.
ಇತ್ತೀಚೆಗೆ, ಅಂತಾರಾಷ್ಟ್ರೀಯ ಲೀಗ್ T20 ಲೀಗ್‌ನಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಗುರುವಾರ (ಜನವರಿ 1) ಅಂತಾರಾಷ್ಟ್ರೀಯ ಲೀಗ್ ಟಿ20 ಅಂಗವಾಗಿ ದುಬೈ ಕ್ಯಾಪಿಟಲ್ಸ್ ಮತ್ತು ಅಬುಧಾಬಿ ನೈಟ್ ರೈಡರ್ಸ್ ನಡುವೆ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಬುಧಾಬಿ ನೈಟ್ ರೈಡರ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 158 ರನ್ ಗಳಿಸಿತು. ಅಬುಧಾಬಿ ಬ್ಯಾಟ್ಸ್‌ಮನ್‌ಗಳ ಪರವಾಗಿ ಮೈಕೆಲ್ ಪೆಪ್ಪರ್ (72 ರನ್, 49 ಎಸೆತಗಳು, 7 ಬೌಂಡರಿ, 3 ಸಿಕ್ಸರ್) ಅರ್ಧಶತಕ ಗಳಿಸಿದರು. ಫಿಲ್ ಸಾಲ್ಟ್ (43 ರನ್, 34 ಎಸೆತ, 3 ಬೌಂಡರಿ, 1 ಸಿಕ್ಸರ್) ಮತ್ತು ಜೇಸನ್ ಹೋಲ್ಡರ್ (ಅಜೇಯ 22 ರನ್, 11 ಎಸೆತ, 1 ಬೌಂಡರಿ, 2 ಸಿಕ್ಸರ್) ವೇಗವಾಗಿ ಆಡಿದರು. ದುಬೈ ಬೌಲರ್‌ಗಳಲ್ಲಿ ಮೊಹಮ್ಮದ್ ನಬಿ ಮೂರು ವಿಕೆಟ್ ಪಡೆದರು. ಹೈದರ್ ಅಲಿ ಮತ್ತು ವಕಾರ್ ಸಲಾಂಖೇಲ್ ತಲಾ ಒಂದು ವಿಕೆಟ್ ಪಡೆದರು.
159 ರನ್‌ಗಳ ಗುರಿಯನ್ನು ಬೆನ್ನಟ್ಟಿದ ದುಬೈ ಕ್ಯಾಪಿಟಲ್ಸ್ 16.2 ಓವರ್‌ಗಳಲ್ಲಿ 108 ರನ್‌ಗಳಿಗೆ ಆಲೌಟ್ ಆಯಿತು. ಅಬುಧಾಬಿ 50 ರನ್‌ಗಳಿಂದ ಗೆದ್ದುಕೊಂಡಿತು. ದುಬೈ ಬ್ಯಾಟ್ಸ್‌ಮನ್‌ಗಳಾದ ನಾಯಕ ಮೊಹಮ್ಮದ್ ನಬಿ (27) ಮತ್ತು ಜೇಮ್ಸ್ ನೀಶಮ್ (19) ಬಿಟ್ಟರೆ ಉಳಿದ ಯಾವೊಬ್ಬ ಬ್ಯಾಟ್ಸ್‌ಮನ್ ಕೂಡ ಉತ್ತಮ ಪ್ರದರ್ಶನ ತೋರಲಿಲ್ಲ. ಅಬುಧಾಬಿ ಬೌಲರ್‌ಗಳಾದ ನಾಯಕ ಜೇಸನ್ ಹೋಲ್ಡರ್, ಸುನಿಲ್ ನಾರಾಯಣ್ ಮತ್ತು ಲಿಯಾಮ್ ಲಿವಿಂಗ್‌ಸ್ಟೋನ್ ತಲಾ ಮೂರು ವಿಕೆಟ್ ಪಡೆದರು. ಅಜಯ್ ಕುಮಾರ್ ಒಂದು ವಿಕೆಟ್ ಪಡೆದರು.
ವಿಚಿತ್ರ ಬೌಲಿಂಗ್ ಮಾಡಿದ ಹೋಲ್ಡರ್
ಈ ಪಂದ್ಯ ನಡುವೆ ದುಬೈ ಕ್ಯಾಪಿಟಲ್ಸ್ ಇನ್ನಿಂಗ್ಸ್‌ನಲ್ಲಿ ಒಂದು ತಮಾಷೆಯ ಘಟನೆ ನಡೆಯಿತು. ಜೇಸನ್ ಹೋಲ್ಡರ್ ಇನ್ನಿಂಗ್ಸ್‌ನ ಎರಡನೇ ಓವರ್ ಎಸೆದರು. ಎರಡನೇ ಎಸೆತದಲ್ಲಿ ವಿಕೆಟ್ ಪಡೆದರು. ಆದರೆ, ಐದನೇ ಎಸೆತವನ್ನು ಎಸೆದಾಗ, ಚೆಂಡು ಹೋಲ್ಡರ್ ಕೈಯಿಂದ ಜಾರಿತು. ಇದರ ಪರಿಣಾಮವಾಗಿ, ಚೆಂಡು ಪಿಚ್ ಮೇಲೆ ಬೀಳದೇ ನೇರವಾಗಿ ಗಾಳಿಯಲ್ಲಿ ಮೇಲಕ್ಕೆ ಹೋಗಿ ಎರಡನೇ ಸ್ಲಿಪ್ ಬಳಿ ಬಿದ್ದಿತು. ಇದನ್ನು ನೋಡಿದ ಬ್ಯಾಟರ್ ಒಂದು ಕ್ಷಣ ದಿಗ್ಭ್ರಮೆಗೊಂಡರು. ಬ್ಯಾಟರ್ಗೆ ಏನು ಮಾಡಬೇಕೆಂದು ತಿಳಿಯಲಿಲ್ಲ. ಈ ವಿಚಿತ್ರ ಬೌಲಿಂಗ್ ನೋಡಿದ ಫೀಲ್ಡರ್ಗಳು ಮತ್ತು ಅಭಿಮಾನಿಗಳು ಮೈದಾನದಲ್ಲೇ ನಕ್ಕರು. ಇನ್ನೊಂದೆಡೆ ಅಂಪೈರ್ ಈ ಚೆಂಡನ್ನು ನೋ ಬಾಲ್ ಎಂದು ಘೋಷಿಸಿದರು.
ಈ ಘಟನೆಯ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಹೋಲ್ಡರ್ ಬೌಲಿಂಗ್ ಬಗ್ಗೆ ತಮಾಷೆ ಮಾಡಲಾಗುತ್ತಿದೆ. ರೋಹಿತ್ ಮತ್ತು ಕೊಹ್ಲಿ ಮಾತ್ರವಲ್ಲದೆ ಜಗತ್ತಿನ ಯಾವುದೇ ಬ್ಯಾಟ್ಸ್ಮನ್ನಿಂದಲೂ ಈ ಚೆಂಡನ್ನು ಆಡಲು ಸಾಧ್ಯವಿಲ್ಲ ಎಂದು ನೆಟ್ಟಿಗರು ಕಾಮೆಂಟ್ ಮೂಲಕ ನಗೆಚಟಾಕಿ ಹಾರಿಸುತ್ತಿದ್ದಾರೆ, (ಏಜೆನ್ಸೀಸ್).