ಚೆಪಾಕ್ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪ್ರಿಯರಿಗೆ ಖಾಕಿ ಶಾಕ್
- ನ್ಯೂಜಿಲೆಂಡ್ ಮತ್ತು ಆಫ್ಘಾನಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯ
- ಭಾನುವಾರ (ಫೆ.08) ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಪಂದ್ಯ
- ಪಂದ್ಯ ವೀಕ್ಷಿಸಲು ಬಂದಿದ್ದವರಿಂದ ವಿಜಿಲ್ ಕಿತ್ತೆಸೆದ ಪೊಲೀಸರು
ತಮಿಳುನಾಡು: ಇಂದು (ಫೆ.08) ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ಮತ್ತು ಆಫ್ಘಾನಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯ ನೋಡಲು ಆಗಮಿಸಿದ ಕ್ರಿಕೆಟ್ ಅಭಿಮಾನಿಗಳಿಗೆ ಪೊಲೀಸರ ಎಚ್ಚರಿಕೆ ಭಾರೀ ಬೇಸರ ಮೂಡಿಸಿತು. ಇದಕ್ಕೆ ಕಾರಣ, ಸ್ಟೇಡಿಯಂನೊಳಗೆ ವಿಜಿಲ್ (Whistle Podu) ಕೊಂಡೊಯ್ಯುವಂತಿಲ್ಲ ಎಂಬ ವಾರ್ನಿಂಗ್.
ಸ್ಟೇಡಿಯಂನೊಳಗೆ ವಿಜಿಲ್ ಊದುವ ಮೂಲಕ ಪಂದ್ಯವನ್ನು ವೀಕ್ಷಿಸುವ ತಮಿಳುನಾಡಿನ ಕ್ರಿಕೆಟ್ ಅಭಿಮಾನಿಗಳು, ತಾವು ರೂಢಿಸಿಕೊಂಡು ಬಂದಿರುವ ಸಂಪ್ರದಾಯದಂತೆ ವಿಜಿಲ್ಗಳನ್ನು ಕೊಂಡೊಯ್ದಿದ್ದರು. ಆದರೆ, ಚೆನ್ನೈ ಪೊಲೀಸರು, ಗೇಟ್ನಲ್ಲೇ ವಿಜಿಲ್ಗಳನ್ನು ಕಿತ್ತೆಸೆದಿದ್ದು, ಸ್ಥಳೀಯ ರಸ್ತೆಬದಿಯ ವ್ಯಾಪಾರಿಗಳಿಗೆ ಇದರ ಮಾರಾಟವನ್ನು ಮಾಡದಂತೆ ತಿಳಿಸಿರುವುದು ಸದ್ಯ ಅಚ್ಚರಿ ಮೂಡಿಸಿದೆ.
ಈ ಬಗ್ಗೆ ಖಾಕಿ ಹೇಳಿದ್ದೇನು?
ಚೆನ್ನೈನ ಚೆಪಾಕ್ ಕ್ರೀಡಾಂಗಣಗಳಲ್ಲಿ ನಡೆಯುವ ಯಾವುದೇ ಪಂದ್ಯವಿರಲಿ, ಅದು ಐಪಿಎಲ್ ಆಗಿರಲಿ ಅಥವಾ ವಿಶ್ವಕಪ್ ಇರಲಿ ಕ್ರಿಕೆಟ್ ಪ್ರಿಯರು ಮಾತ್ರ ವಿಜಿಲ್ ಪೋಡು ಎಂಬುದನ್ನೂ ಎಂದಿಗೂ ಮರೆಯೋದಿಲ್ಲ. ಇದನ್ನು ತಮ್ಮ ಸಂಪ್ರದಾಯಗಳಲ್ಲಿ ಒಂದು ಎನ್ನುವಂತೆ ಪಾಲಿಸಿಕೊಂಡು ಬಂದಿದ್ದಾರೆ. ಅಂತೆಯೇ, ಭಾನುವಾರದ ಟಿ20 ವಿಶ್ವಕಪ್ ಪಂದ್ಯ ನೋಡಲು ಬಂದಾಗ ಈ ವಿಷಯ ತಿಳಿದು ಕೆರಳಿದ್ದಾರೆ.
ಈ ಗೊಂದಲಕ್ಕೆ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ವಿಜಿಲ್ ತರಬಾರದು ಎಂಬ ನಿಯಮ ಅಥವಾ ನಿರ್ಬಂಧ ಏನೂ ಹಾಕಿಲ್ಲ. ಇದು ನಮ್ಮ ಪೊಲೀಸ್ ಸಿಬ್ಬಂದಿಗಳಲ್ಲೇ ಆಗಿರುವ ಗೊಂದಲ ಅಷ್ಟೇ ಎಂದು ಹೇಳುವ ಮೂಲಕ ವಿವಾದವನ್ನು ತಪ್ಪಿಸಿದ್ದಾರೆ ಎಂಬುದು ಇಲ್ಲಿ ಸ್ಪಷ್ಟವಾಗಿದೆ.
ಸಿಎಸ್ಕೆಯ ಬ್ರ್ಯಾಂಡ್ 'ವಿಜಿಲ್ ಪೋಡು'
ಮಹೇಂದ್ರ ಸಿಂಗ್ ಧೋನಿ ಅವರ ನಾಯಕತ್ವದಲ್ಲಿ ಹುಟ್ಟಿಕೊಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಇಂದು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಪ್ರತಿಬಾರಿ ಈ ತಂಡ ಐಪಿಎಲ್ನಲ್ಲಿ ಕಣಕ್ಕಿಳಿದಾಗಲೆಲ್ಲ ಕ್ರಿಕೆಟ್ ಪ್ರಿಯರು, ವಿಜಿಲ್ ಪೋಡು ಎಂಬಂತೆ ವಿಜಿಲ್ಗಳನ್ನು ತಂದಿರುತ್ತಾರೆ. ಅಂತೆಯೇ, ಲೆಕ್ಕವಿಲ್ಲದಷ್ಟು ಶಿಳ್ಳೆಗಳನ್ನು ಊದುತ್ತಾರೆ. ಹೀಗಿರುವಾಗ, ಇದನ್ನೇ ಬೇಡ ಎಂದು ತೆಡೆದಿರುವುದು ಅನೇಕರನ್ನು ಕೆರಳಿಸಿದೆ.
ವಿಜಿಲ್ಗೂ ವಿಜಯ್ಗೂ ಕನೆಕ್ಷನ್?
ತಮಿಳುನಾಡು ಚುನಾವಣೆಗೆ ನಿಂತಿರುವ ಕಾಲಿವುಡ್ ನಟ, ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ನಾಯಕ ವಿಜಯ್ಗೆ, ಚುನಾವಣಾ ಆಯೋಗವು ಅಧಿಕೃತ ಚುನಾವಣಾ ಚಿಹ್ನೆಯಾಗಿ ಸೀಟಿಯನ್ನು ನೀಡಿದ್ದೇ ಪೊಲೀಸರ ಈ ನಿರ್ಧಾರಕ್ಕೆ ಕಾರಣ ಎಂಬ ಮಾತುಗಳು ಕೇಳಿಬಂದಿವೆ. ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರಿಂದ ಟೀಕೆಗಳು ವ್ಯಕ್ತವಾಗಿದೆ,(ಏಜೆನ್ಸೀಸ್).