ಆರ್ಸಿಬಿ ಆಟಗಾರ ವಿರಾಟ್ ಕೊಹ್ಲಿ
- ಐಪಿಎಲ್ 19ನೇ ಪಂದ್ಯದಲ್ಲಿ ಆರ್ಸಿಬಿ ತಂಡಕ್ಕೆ ಮೊದಲ ಸೋಲು
- ರವಿ ಬಿಷ್ಣೋಯಿ ಓವರ್ನಲ್ಲಿ ವಿಕೆಟ್ ಕಳೆದುಕೊಂಡ ವಿರಾಟ್ ಕೊಹ್ಲಿ
- ಕಳೆದ ಮೂರು ವರ್ಷಗಳಲ್ಲಿ ಈ ರೀತಿ ವಿಕೆಟ್ ಕಳೆದುಕೊಂಡಿರಲಿಲ್ಲ ಕಿಂಗ್
Virat Kohli: ನಿನ್ನೆ (ಏ.10) ಗುವಾಹಟಿಯಲ್ಲಿ ನಡೆದ ಐಪಿಎಲ್ 19ನೇ ಪಂದ್ಯದಲ್ಲಿ ಆರ್ಸಿಬಿ ತನ್ನ ಮೊದಲ ಸೋಲು ಕಂಡಿತು. ರಾಜಸ್ಥಾನ ರಾಯಲ್ಸ್ ಎದುರು 6 ವಿಕೆಟ್ಗಳ ಅಂತರದಲ್ಲಿ ಹೀನಾಯ ಸೋಲುಂಡಿತು. ಈ ಮ್ಯಾಚ್ನಲ್ಲಿ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಕ್ರಿಕೆಟ್ ಪ್ರೇಮಿಗಳು ಆಗಿದ್ದು ಮಾತ್ರ ಭಾರೀ ಬೇಸರ.
ಟಾಸ್ ಸೋತು ಮೊದಲು ಬ್ಯಾಟಿಂಗ್ಗಿಳಿದ ಆರ್ಸಿಬಿ ಪರ ಓಪನಿಂಗ್ ಬಂದ ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ ಜೋಡಿ, ಉತ್ತಮ ಆರಂಭ ಕೊಡಲು ವಿಫಲವಾಯಿತು. ಕಾರಣ, ಸಾಲ್ಟ್ ಡಕ್ಔಟ್. ಶೂನ್ಯಕ್ಕೆ ಪೆವಿಲಿಯನ್ ಹಾದಿ ಹಿಡಿದ ಫಿಲ್ ಬಳಿಕ ಕ್ರೀಸ್ಗೆ ಅಂಟಿ ನಿಂತಿದ್ದು ವಿರಾಟ್. ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸುವ ಮೂಲಕ ಬಹಳ ಕೂಲ್ ಆಗಿ ಪ್ರದರ್ಶನ ನೀಡಿದ ಕೊಹ್ಲಿ, 16 ಎಸೆತಗಳಲ್ಲಿ 32 ರನ್ ಗಳಿಸುತ್ತಿದ್ದಂತೆ ರವಿ ಬಿಷ್ಣೋಯಿ ಅವರ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು.
ಇಲ್ಲಿ ಆಗಿದ್ದು ಕ್ಯಾಚ್ ಔಟ್, ಎಲ್ಬಿಡಬ್ಲ್ಯೂ ಅಥವಾ ರನ್ಔಟ್ ಆಗದ ಕೊಹ್ಲಿ, ಬಿಷ್ಣೋಯಿ ಗೂಗ್ಲಿಗೆ ಕ್ಲೀನ್ ಬೋಲ್ಡ್ ಆದರು. ಇದು ಹಲವರನ್ನು ಅಚ್ಚರಿಗೊಳಿಸಿತು. ಕಾರಣ, ಕಳೆದ ಮೂರು ವರ್ಷಗಳ ಐಪಿಎಲ್‌ನಲ್ಲಿ ವಿರಾಟ್ ಈ ರೀತಿ ವಿಕೆಟ್ ಕಳೆದುಕೊಂಡಿರಲಿಲ್ಲ. ಇಂತಹ ಕಮಾಲ್ ಮಾಡುವಲ್ಲಿ ಇಲ್ಲಿಯವರೆಗೆ ಯಾವುದೇ ಬೌಲರ್ಗೂ ಸಾಧ್ಯವಾಗಿರಲಿಲ್ಲ. ಆದರೆ, ನಿನ್ನೆಯ ಪಂದ್ಯದಲ್ಲಿ ರವಿ ಈ ಜಾದೂವನ್ನು ಮಾಡಿದ್ದು ವಿಶೇಷ.
ಐಪಿಎಲ್‌ನಲ್ಲಿ 1,089 ದಿನಗಳಲ್ಲಿ ಕೊಹ್ಲಿ ಈ ರೀತಿ ಕ್ಲೀನ್ ಬೋಲ್ಡ್ ಆಗಿ ಔಟ್ ಆಗಿದ್ದು ಇದೇ ಮೊದಲು. ಹೀಗೆ ಮಾಡಿದ ಕೊನೆಯ ಬೌಲರ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ಆಕಾಶ್ ಸಿಂಗ್ ಮಾತ್ರ. ಅವರು 2023ರ ಐಪಿಎಲ್ ಆವೃತ್ತಿಯಲ್ಲಿ ಇಂತಹ ಕಮಾಲ್ ಮಾಡಿದ್ದರು. ಆದರೀಗ, ಅದೇ ದೃಶ್ಯ ಮತ್ತೊಮ್ಮೆ ಮರುಕಳಿಸಿದ್ದು ವಿರಾಟ್ರ ಅಭಿಮಾನಿಗಳಲ್ಲಿ ಭಾರೀ ಬೇಸರ ಮೂಡಿಸಿದ್ದಂತು ನಿಜ.
ಪಂದ್ಯದ ವಿವರ
ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ ಆರ್ಆರ್, ರಜತ್ ಪಡೆಗೆ ಬ್ಯಾಟ್ ಮಾಡುವಂತೆ ಆಹ್ವಾನಿಸಿತು. ಅಂತೆಯೇ, 20 ಓವರ್ನಲ್ಲಿ 8 ವಿಕೆಟ್ ನಷ್ಟಕ್ಕೆ ಆರ್ಸಿಬಿ 201 ರನ್ ಕಲೆಹಾಕಿತು. ಈ ಬೃಹತ್ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ ತಂಡಕ್ಕೆ ಆರಂಭಿಕರಾದ ಸೂರ್ಯವಂಶಿ ಮತ್ತು ಜೈಸ್ವಾಲ್ರಿಂದ ಯಶಸ್ವಿ ಓಪನಿಂಗ್ ಲಭಿಸಿತು. ಇವರಿಬ್ಬರೇ ಮೊದಲ ಮೂರು ಓವರ್ಗೆ 45 ರನ್ಗಳನ್ನು ಬಾರಿಸಿದರು. ಜೈಸ್ವಾಲ್ ಬಹುಬೇಗನೇ ಪೆವಿಲಿಯನ್ಗೆ ಮರಳಿದರೆ, ವೈಭವ್ ಮಾತ್ರ ಆರ್ಸಿಬಿ ಬೌಲರ್ಗಳಿಗೆ ಸರಿಯಾಗಿ ನೀರು ಕುಡಿಸಿ, 78 ರನ್ಗಳ ಭರ್ಜರಿ ಇನ್ನಿಂಗ್ಸ್ ನೀಡಿದರು.
ಇನ್ನು ವೈಭವ್ಗೆ ಉತ್ತಮ ಸಾಥ್ ನೀಡಿದ್ದು ಧ್ರುವ್ ಜ್ಯುರೆಲ್. ಇವರೂ ಕೂಡ ಆರ್ಸಿಬಿ ಬೌಲರ್ಗಳಿಗೆ ಸಿಕ್ಸರ್, ಬೌಂಡರಿ ಬಾರಿಸುವ ಮೂಲಕ ಬೆವರಿಳಿಸಿದರು. ಆಡಿದ 43 ಎಸೆತಗಳಲ್ಲಿ ಅಜೇಯ 81 ರನ್ ಸಿಡಿಸುವ ಮೂಲಕ ಕೊನೆಯ ಓವರ್ವರೆಗೂ ಹೋರಾಡಿ, ತಂಡದ ಗೆಲುವಿಗೆ ಪ್ರಮುಖ ಕಾರಣರಾದರು. ಈ ಗೆಲುವಿನ ಮೂಲಕ ಆರ್ಆರ್ ಸದ್ಯ ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.