ವೈಭವ್ ಸೂರ್ಯವಂಶಿ (ಎಡ), ಜಿತೇಶ್ ಶರ್ಮ (ಬಲ)
- ಐಪಿಎಲ್ 19ನೇ ಆವೃತ್ತಿಗೆ ಇನ್ನೇನು ಕೆಲವೇ ದಿನಗಳು ಬಾಕಿ
- ಸೋಷಿಯಲ್ ಮೀಡಿಯಾದಲ್ಲಿ ಸಖತ್ ಹೈಪ್ ಪಡೆದಿರುವ ವೈಭವ್ ಸೂರ್ಯವಂಶಿ
- ವೈಭವ್ ಬಗ್ಗೆ ಆರ್ಸಿಬಿಯ ಸ್ಟಾರ್ ಕ್ರಿಕೆಟಿಗ ಅಚ್ಚರಿ ಹೇಳಿಕೆ
Vaibhav Suryavanshi: ಐಪಿಎಲ್ 19ನೇ ಆವೃತ್ತಿಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಉದ್ಘಾಟನಾ ಪಂದ್ಯವು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ. ಐಪಿಎಲ್ ಸುದ್ದಿಗಳ ಮಧ್ಯೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಹೈಪ್ ಪಡೆದಿರುವ ವೈಭವ್ ಸೂರ್ಯವಂಶಿ ಮಾತ್ರ ಸದ್ಯ ಅಂತಾರಾಷ್ಟ್ರೀಯ ಸ್ಟಾರ್ ಕ್ರಿಕೆಟಿಗರ ಸ್ಪಾಟ್ಲೈಟ್ ಕಸಿದುಕೊಂಡಿರುವುದು ವಿಶೇಷ ಎನ್ನುವಂತಾಗಿದೆ.
ಕಳೆದ ವರ್ಷದ ಐಪಿಎಲ್ ಮತ್ತು ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಕ್ರಿಕೆಟ್ ಪ್ರಿಯರ ನೆಚ್ಚಿನ ಯುವ ಆಟಗಾರ ಎಂದು ಗುರುತಿಸಿಕೊಂಡಿರುವ 'ಬೇಬಿ ಬಾಸ್', ಈ ಬಾರಿ ತಮ್ಮ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಬರೆಯದೆ, ಐಪಿಎಲ್ 19ನೇ ಆವೃತ್ತಿ ಆಡಲು ಮುಂದಾಗಿರುವುದು ಮತ್ತೊಂದು ವಿಶೇಷ. ರಾಜಸ್ಥಾನ ರಾಯಲ್ಸ್ ಪರ ಓಪನಿಂಗ್ ಬರಲು ಈಗಾಗಲೇ ಮೈದಾನದಲ್ಲಿ ಬೆವರಿಳಿಸುತ್ತಿರುವ ವೈಭವ್ ಬಗ್ಗೆ ಆರ್ಸಿಬಿಯ ಸ್ಟಾರ್ ಕ್ರಿಕೆಟಿಗ ಅಚ್ಚರಿ ಹೇಳಿಕೆಯೊಂದನ್ನು ನೀಡಿದ್ದಾರೆ.
ಮಾಜಿ ಆರ್ಸಿಬಿ ಹಾಗೂ ದಕ್ಷಿಣ ಆಫ್ರಿಕಾ ಕ್ಯಾಪ್ಟನ್ ಎಬಿ ಡಿವಿಲಿಯರ್ಸ್ ಅವರ ಯೂಟ್ಯೂಬ್ ಸಂದರ್ಶನದಲ್ಲಿ ಮಾತನಾಡಿದ ಜಿತೇಶ್ ಶರ್ಮ, ಎಬಿಡಿ ಮಾತಿಗೆ ಟಕ್ಕರ್ ಕೊಟ್ಟಿರುವುದು ಮಜಾವಾಗಿದೆ. ಆತ ಒಬ್ಬ ಗ್ರೇಟ್ ಪ್ಲೇಯರ್. ಅಂಡರ್-19 ಕ್ರಿಕೆಟ್ನಲ್ಲಿ ವೈಭವ್ ಆಡಿದ ರೀತಿ ನೋಡಿ ಖುಷಿಯಾಯ್ತು. ವಿಶ್ವಕಪ್ನಂತಹ ಟೂರ್ನಿಯಲ್ಲಿ ಬಹಳ ಪ್ರಬುದ್ಧತೆ ಮೆರೆದರು. ಇಷ್ಟು ಚಿಕ್ಕ ವಯಸ್ಸಿಗೆ ವೃತ್ತಿಪರ ಆಟವನ್ನು ಆಡಿದ್ದು ಗಮನ ಸೆಳೆಯಿತು ಎಂದು ಎಬಿಡಿ ಹೇಳಿದರು.
ಇದಕ್ಕೆ ನಗುತ್ತಲೇ ಉತ್ತರಿಸಿದ ಜಿತೇಶ್, "ಅವನು ವೃತ್ತಿಪರನಲ್ಲ. ಇದನ್ನು ನಾನು ಒಪ್ಪಿಕೊಳ್ಳಲ್ಲ. ಎಲ್ಲರೂ ಅವನನ್ನು ಪ್ರೊಫೆಷನಲ್ ಆಟಗಾರನನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಅವನು ಮಾತ್ರ ಯಾವತ್ತಿಗೂ ಹಾಗೆ ಆಗೋದಿಲ್ಲ ಅಂತ ಹೇಳ್ತೀನಿ. ಈ ವಿಚಾರದಲ್ಲಿ ನಾನು ನನ್ನ ಕೈಲಾದಷ್ಟು ಪ್ರಯತ್ನಿಸಿತ್ತಿದ್ದೇನೆ. ರಾತ್ರಿಯಲ್ಲಿ ಐಸ್ ಕ್ರೀಮ್ ತಿನ್ನಬೇಡ ಅಂತ ಎಷ್ಟೇ ಹೇಳಿದ್ರು, ಅವನು ಅದನ್ನೇ ಕೇಳ್ತಾನೆ. ನಮ್ಮ ಮಾತೇ ಕೇಳುವುದಿಲ್ಲ ಎಂದಿದ್ದಾರೆ,(ಏಜೆನ್ಸೀಸ್).