ಭಾರತ-ಪಾಕ್​ ಪಂದ್ಯ ನಡೆಯದಿದ್ರೆ ಒಟ್ಟಾರೆ 2,288 ಕೋಟಿ ರೂ. ನಷ್ಟ! 
ಕ್ರಿಕೆಟ್

ಟಿ20 ವಿಶ್ವಕಪ್: ಫೆ.15ಕ್ಕೆ ಭಾರತ-ಪಾಕ್​ ಪಂದ್ಯ ನಡೆಯದಿದ್ದರೆ ಆಗುವ ನಷ್ಟವೆಷ್ಟು ಗೊತ್ತೇ?

ನವದೆಹಲಿ: ಮುಂಬರುವ ಟಿ20 ವಿಶ್ವಕಪ್​ (T20 World Cup) ಟೂರ್ನಿಯಲ್ಲಿ ಭಾರತ-ಪಾಕಿಸ್ತಾನ (India vs pakistan) ನಡುವಿನ ಪಂದ್ಯ ನಡೆಯದಿದ್ದರೆ ಒಟ್ಟಾರೆ 2,288 ಕೋಟಿ ರೂ. (250 ದಶಲಕ್ಷ ಡಾಲರ್​) ನಷ್ಟವಾಗಲಿದೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಐಸಿಸಿ, ಪ್ರಸಾರ ವಾಹಿನಿ ಸಹಿತ ಎಲ್ಲರಿಗೂ ಆಗುವ ನಷ್ಟ ಒಳಗೊಂಡಿದೆ.

ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕ್​ ನಡುವಿನ ಪಂದ್ಯ ಭಾರಿ ಆದಾಯ ತರುವಂಥದ್ದಾಗಿದೆ. ಇದರಿಂದಾಗಿಯೇ ಐಸಿಸಿ ಇತ್ತೀಚೆಗಿನ ವರ್ಷಗಳಲ್ಲಿ ತನ್ನ ಪ್ರತಿ ಟೂರ್ನಿಯಲ್ಲೂ ಭಾರತ&ಪಾಕ್​ ತಂಡಗಳನ್ನು ಒಂದೇ ಗುಂಪಿನಲ್ಲಿಡುತ್ತದೆ. ಇದರಿಂದ ಪ್ರತಿ ಟೂರ್ನಿಯಲ್ಲೂ ಭಾರತ-ಪಾಕ್​ ನಡುವೆ ಕನಿಷ್ಠ ಒಂದು ಪಂದ್ಯ ಖಚಿತವೆನಿಸುತ್ತದೆ. ಈ ಕಾರಣದಿಂದಲೇ ಐಸಿಸಿ ಟೂರ್ನಿಗಳ ಪ್ರಸಾರ ಹಕ್ಕು ಕೂಡ ದೊಡ್ಡ ಮೊತ್ತಕ್ಕೆ ಮಾರಾಟವಾಗುತ್ತದೆ.

ಈ ಬಾರಿ ಭಾರತ-ಪಾಕ್​ ಪಂದ್ಯ ನಡೆಯಲಿದ್ದರೆ, ಪ್ರಸಾರ ಹಕ್ಕು ಪಡೆದಿರುವ ಜಿಯೋಸ್ಟಾರ್​ಗೆ (Jiostar) ಜಾಹೀರಾತು ಆದಾಯದಿಂದ 200ರಿಂದ 250 ಕೋಟಿ ರೂ. ನಷ್ಟವಾಗಲಿದೆ. ಯಾಕೆಂದರೆ ಭಾರತ-ಪಾಕ್​ ಪಂದ್ಯದ ವೇಳೆ ಟಿವಿ ಜಾಹೀರಾತು ಪ್ರತಿ 10 ಸೆಕೆಂಡ್​ಗೆ 40 ಲಕ್ಷ ರೂ.ವರೆಗೂ ಮೌಲ್ಯ ಹೊಂದಿರುತ್ತದೆ. ಭಾರತ-ಪಾಕ್​ ನಡುವಿನ ಪಂದ್ಯದ ಟಿಕೆಟ್​ ಕೂಡ ಹೆಚ್ಚಿನ ಮುಖಬೆಲೆ ಹೊಂದಿರುತ್ತದೆ. ಈ ಪಂದ್ಯದ ವೇಳೆ ಬೆಟ್ಟಿಂಗ್​ ದಂಧೆಯೂ ದೊಡ್ಡ ಪ್ರಮಾಣದಲ್ಲಿ ನಡೆಯುತ್ತದೆ.