- ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ರೈಸರ್ಸ್ ಹೈದರಾಬಾದ್ ನಡುವೆ ಶುಭಾರಂಭ ಪಂದ್ಯ
- ದುರಂತದ ಬಳಿಕ ಆರ್ಸಿಬಿ ಪಂದ್ಯದಿಂದಲೇ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶುಭ ಆರಂಭ
- ಈ ಹಿನ್ನೆಲೆ ಅಭಿಮಾನಿಗಳಿಗೆ ಕೆಲವು ಮುಖ್ಯ ಮಾಹಿತಿ ಹಂಚಿಕೊಂಡ ಆರ್ಸಿಬಿ
ಬೆಂಗಳೂರು: ಐಪಿಎಲ್ 19ನೇ ಆವೃತ್ತಿಯ ಶುಭಾರಂಭ ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ರೈಸರ್ಸ್ ಹೈದರಾಬಾದ್ ನಡುವೆ ನಡೆಯಲಿದ್ದು, ಈ ಪಂದ್ಯದಿಂದಲೇ 2026ರ ಸೀಸನ್ಗೆ ಅದ್ಧೂರಿ ಚಾಲನೆ ಸಿಗಲಿದೆ. ಕಳೆದ ವರ್ಷ ಸಂಭವಿಸಿದ ಕಾಲ್ತುಳಿತ ದುರಂತದಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಯಾವುದೇ ಪಂದ್ಯ ನಡೆದಿರಲಿಲ್ಲ. ಆದರೀಗ, ರಾಜ್ಯ ಸರ್ಕಾರ ವಿಧಿಸಿರುವ ಷರತ್ತುಗಳನ್ನು ಗಮನದಲ್ಲಿಟ್ಟುಕೊಂಡು ಆರ್ಸಿಬಿ ಮ್ಯಾನೇಜ್ಮೆಂಟ್ ತವರಿನಲ್ಲಿ ಪಂದ್ಯವನ್ನಾಡಲು ಒಪ್ಪಿಕೊಂಡಿದೆ.
ಈಗಾಗಲೇ ಪೂರ್ವಸಿದ್ಧತೆಗಳನ್ನು ಮಾಡಿಕೊಂಡಿರುವ ಮ್ಯಾನೇಜ್ಮೆಂಟ್, ಕಿಕ್ಸ್ಟಾರ್ಟ್ ಪಂದ್ಯದ ಹಿನ್ನೆಲೆ ಟಿಕೆಟ್ ಬುಕ್ಕಿಂಗ್ನಿಂದ ಹಿಡಿದು ಆಟಗಾರರು ಹಾಗೂ ಅಭಿಮಾನಿಗಳ ಸುರಕ್ಷತೆ ಬಗ್ಗೆ ಕಟ್ಟೆಚ್ಚರ ವಹಿಸಿದೆ. ಈ ಮಧ್ಯೆ, ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಫ್ರಾಂಚೈಸಿಯ ಫ್ಯಾನ್ಸ್ಗೆ ಹಾಗೂ ಕೆಲವರಿಗೆ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದೆ.
ಕ್ರಿಕೆಟ್ ಪ್ರಿಯರ ಗಮನಕ್ಕೆ
- ಆರ್ಸಿಬಿ ಪಂದ್ಯದ ಅಧಿಕೃತ ಟಿಕೆಟ್‌ಗಳು ಮಾತ್ರ ವೆಬ್ಸೈಟ್ನಲ್ಲಿ ಲಭ್ಯವಿರಲಿದೆ. ಟಿಕೆಟ್‌ಜೆನಿ ಎಂಬ ಅಪ್ಲಿಕೇಶನ್‌ನಲ್ಲಿ ಮಾತ್ರ ಆಯಾ ಪಂದ್ಯದ ಟಿಕೆಟ್‌ಗಳು ಲಭ್ಯವಿರುತ್ತವೆ.
- ಆರ್ಸಿಬಿ ಪಂದ್ಯದ ಟಿಕೆಟ್‌ಗಳನ್ನು ಮಾರಾಟ ಮಾಡುವುದಾಗಿ ಹೇಳಿಕೊಳ್ಳುವ ಯಾವುದೇ ಥರ್ಡ್ ಪಾರ್ಟಿ ವೆಬ್‌ಸೈಟ್ ಅಥವಾ ಅಪ್ಲಿಕೇಶನ್‌ಗೆ ನಾವು ಅಧಿಕಾರ ಕೊಟ್ಟಿರುವುದಿಲ್ಲ ಮತ್ತು ಅಂಥವರು ನಮ್ಮ ಕಣ್ಣಿಗೆ ಬಿದ್ದರೆ, ಅವರ ವಿರುದ್ಧ ಕಾನೂನು/ಪೊಲೀಸ್ ಕ್ರಮ ಕೈಗೊಳ್ಳಲಾಗುವುದು.
- ಕ್ವೀನ್ಸ್ ರಸ್ತೆಯಲ್ಲಿ ಪ್ರೇಕ್ಷಕರಿಗೆ ಪ್ರವೇಶವಿಲ್ಲ. ಪ್ರೇಕ್ಷಕರು ಲಿಂಕ್ ರೋಡ್ ಮತ್ತು ಕಬ್ಬನ್ ರಸ್ತೆಯಿಂದ ಮಾತ್ರ ಪ್ರವೇಶಿಸಲು ಅನುಮತಿ.
- ಕ್ರೀಡಾಂಗಣಕ್ಕೆ ಮತ್ತು ಹೊರಗೆ ಸುಗಮ ಪ್ರಯಾಣಕ್ಕಾಗಿ ಆರ್ಸಿಬಿ ಪಂದ್ಯದ ಟಿಕೆಟ್ ಹೊಂದಿರುವವರಿಗೆ ಉಚಿತ ಮೆಟ್ರೋ ಟಿಕೆಟ್‌ಗಳು ಲಭ್ಯವಿವೆ.
- ಪಾರ್ಕಿಂಗ್ ಸ್ಥಳಗಳಲ್ಲಿ (ಗರುಡ ಮಾಲ್, ಸೇಂಟ್ ಜೋಸೆಫ್ಸ್ ಬಾಯ್ಸ್ ಹೈಸ್ಕೂಲ್, ಸೇಂಟ್ ಜೋಸೆಫ್ಸ್ ಇಂಡಿಯನ್ ಹೈಸ್ಕೂಲ್ ಮತ್ತು ಫ್ರೀಡಂ ಪಾರ್ಕ್) ಲಭ್ಯವಿರುವ ಸೀಮಿತ ಪಾರ್ಕಿಂಗ್ ಸ್ಥಳಗಳನ್ನು ಮೊದಲೇ ಬುಕ್ ಮಾಡಿಕೊಳ್ಳಿ ಎಂದು ತಿಳಿಸಿದೆ.