ನ್ಯೂಜಿಲೆಂಡ್ ತಂಡದ ನಾಯಕ ಮಿಚೆಲ್ ಸ್ಯಾಟ್ನರ್
- 96 ರನ್ಗಳಿಂದ ಭಾರತ ಎದುರು ಹೀನಾಯ ಸೋಲು
- ಚೊಚ್ಚಲ ಟಿ20 ವಿಶ್ವಕಪ್ ಟ್ರೋಫಿಗೆ ಮುತ್ತಿಡುವ ಅವಕಾಶ ಮಿಸ್
- ಅದೊಂದು ಮಿಸ್ಟೇಕ್ ಮಾಡಿದಿದ್ದರೇ ಇಂಥಾ ಹೀನಾಯ ಸೋಲು ಬರುತ್ತಿರಲಿಲ್ಲ
New Zealand: ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ನಲ್ಲಿ 96 ರನ್ಗಳ ಹೀನಾಯ ಸೋಲುಂಡ ನ್ಯೂಜಿಲೆಂಡ್, ತಮ್ಮ ಚೊಚ್ಚಲ ಟಿ20 ವಿಶ್ವಕಪ್ ಟ್ರೋಫಿಗೆ ಮುತ್ತಿಡುವ ಅವಕಾಶವನ್ನು ಎರಡನೇ ಬಾರಿಗೆ ಅಂತಿಮ ಹಣಾಹಣಿಯಲ್ಲಿ ಕಳೆದುಕೊಂಡಿತು. ಇದು ಅವರ ಅಪಾರ ಸಂಖ್ಯೆಯ ಕ್ರಿಕೆಟ್ ಅಭಿಮಾನಿಗಳ ಹೃದಯ ಚೂರಾಗಿಸಿದೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಕ್ಯಾಪ್ಟನ್ ಮಿಚೆಲ್ ಸ್ಯಾಟ್ನರ್ಗೆ ಪಂದ್ಯ ಆರಂಭಕ್ಕೂ ಮುನ್ನವೇ ಸೋಲಿನ ಮುನ್ಸೂಚನೆ ಸಿಕ್ಕಿತ್ತು. ಆದರೆ, ಅದನ್ನು ಸರಿಯಾಗಿ ಅರಿಯದೆ, ತಮ್ಮ ಟೀಮ್ ಮ್ಯಾನೇಜ್‌ಮೆಂಟ್ ಮಾತು ಕೇಳಿಕೊಂಡು ದೊಡ್ಡ ಎಡವಟ್ಟು ಮಾಡಿಕೊಂಡಿದ್ದಂತು ಸತ್ಯ ಎಂದೇ ಹೇಳಬಹುದು. ಭಾರತ ವಿರುದ್ಧ ಫೈನಲ್ ಪಂದ್ಯದಲ್ಲಿ ಯಾರನ್ನೆಲ್ಲ ಆಡಿಸಬೇಕು ಎಂದು ನಿರ್ಧರಿಸಿದ ಸ್ಯಾಟ್ನರ್, ತಾವೊಬ್ಬ ಸ್ಪಿನ್ ಬೌಲರ್ ಆಗಿ ಅಹಮದಾಬಾದ್ ಪಿಚ್ನಲ್ಲಿ ಆಫ್-ಸ್ಪಿನ್ ಮಾಡುವವರ ಕೈಚಳಕ ಖಂಡಿತ ಕಮಾಲ್ ಮಾಡಲಿದೆ ಎಂಬುದನ್ನೇ ಮರೆತಿದ್ದು ದುರಂತ.
ಆಫ್-ಸ್ಪಿನ್ನರ್ ಕೋಲ್ ಮೆಕ್‌ಕಾಂಚಿ ತಮ್ಮ ತಂಡದಲ್ಲಿಯೇ ಇದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಸೆಮಿಫೈನಲ್‌ನಲ್ಲಿ ಎರಡು ಬಹುಮುಖ್ಯ ವಿಕೆಟ್‌ಗಳನ್ನು ಪಡೆಯುವ ಮೂಲಕ ಸೌತ್ ಆಫ್ರಿಕಾ ಪಡೆಯ ಫೈನಲ್ ಕನಸನ್ನು ಛಿದ್ರಗೊಳಿಸಲು ದೊಡ್ಡ ಕೊಡುಗೆ ನೀಡಿದ್ದೇ ಈತ. ಹೀಗಿರುವಾಗ, ತಂಡದಲ್ಲಿ ಆಫ್-ಸ್ಪಿನ್ ಮಾಡುವ ಬೌಲರ್ ಅನ್ನು ಆಡಿಸುವ ನಿರ್ಧಾರಕ್ಕೆ ಮುಂದಾಗದ ಮ್ಯಾನೇಜ್‌ಮೆಂಟ್, ಕೋಲ್ರನ್ನು ಕೂರಿಸಿ, ಅವರ ಬದಲಿಗೆ ಮತ್ತೊಬ್ಬ ವೇಗಿಯನ್ನು ಕಣಕ್ಕಿಳಿಸಿತು. ಇಲ್ಲೇ ಆಗಿದ್ದು ಎಡವಟ್ಟು.
ಸ್ವತಃ ಇದನ್ನು ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಅವರೇ ಗಮನಿಸಿದ್ದಾರೆ. ಕಿವೀಸ್ ತಂಡದಲ್ಲಿ ಆಫ್-ಸ್ಪಿನ್ನರ್ ಇಲ್ಲದಿರುವುದು ನನಗೆ ಆಶ್ಚರ್ಯ ತಂದಿತು ಎಂದರು. ಎಡಗೈ ಬೌಲರ್‌ಗಳಿಂದ ತುಂಬಿದ್ದ ನ್ಯೂಜಿಲೆಂಡ್ಗೆ ಒಬ್ಬ ಆಫ್-ಸ್ಪಿನ್ನರ್ ಅವಶ್ಯಕತೆ ಇತ್ತು. ಇದನ್ನು ಸೂಕ್ಷ್ಮವಾಗಿ ಗಮನಿಸಿದಿದ್ದರೆ, ಖಂಡಿತ ಕಿವೀಸ್ ಪಡೆಗೆ ಇಂತಹ ಹೀನಾಯ ಸೋಲು ಬರುತ್ತಿರಲಿಲ್ಲ,(ಏಜೆನ್ಸೀಸ್).