ಕ್ಯಾಮೆರಾನ್ ಗ್ರೀನ್ ಬಾರಿಸಿದ ಸಿಕ್ಸರ್ ದೃಶ್ಯ
- ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಕ್ಯಾಮೆರಾನ್ ಗ್ರೀನ್ ಬಾರಿಸಿದ ಬಿಗ್ ಸಿಕ್ಸರ್
- ಗ್ರೀನ್ ಹೊಡೆತಕ್ಕೆ 22 ಲಕ್ಷ ರೂ. ಮೌಲ್ಯದ ಟಾಟಾ ಸಿಯಾರಾ ಕಾರು ಡ್ಯಾಮೇಜ್
Cameron Green: ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಕ್ಯಾಮೆರಾನ್ ಗ್ರೀನ್ ಅಂತಿಮವಾಗಿ ಕೆಕೆಆರ್ ಪರ ಈ ಐಪಿಎಲ್ ಸೀಸನ್ನಲ್ಲಿ ಅದ್ಭುತ ಇನ್ನಿಂಗ್ಸ್ ಆಡಿದ್ದು ನೋಡುಗರ ಗಮನ ಸೆಳೆಯಿತು. ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ತಂಡ ಸೋತಿದ್ದೇ ಆದರೂ, 32 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಗ್ರೀನ್ ಸ್ಪೋಟಕ ಬ್ಯಾಟಿಂಹ್ ಮೂಲಕ ಆಸರೆಯಾಗಿದ್ದು ವಿಶೇಷ.
55 ಎಸೆತಕ್ಕೆ 79 ಸಿಡಿಸಿದ ಗ್ರೀನ್, 7 ಬೌಂಡರಿ ಮತ್ತು 4 ಸಿಕ್ಸರ್‌ಗಳನ್ನು ಬಾರಿಸಿದರು. ಇದರೊಂದಿಗೆ ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್, ನಿಗದಿತ 20 ಓವರ್‌ಗಳಲ್ಲಿ 180 ರನ್‌ಗೆ ಆಲೌಟ್ ಆಯಿತು. ಈ ಗುರಿಯನ್ನು ಬೆನ್ನತ್ತಿದ ಜಿಟಿ ಪಡೆಗೆ ನಾಯಕ ಶುಭಮನ್ ಗಿಲ್ (86 ರನ್, 50 ಎಸೆತ, 8 ಬೌಂಡರಿ ಮತ್ತು 4 ಸಿಕ್ಸರ್) ಅವರ ಸಹಾಯದಿಂದ, ಗುಜರಾತ್ ಟೈಟಾನ್ಸ್ ಕೇವಲ 19.4 ಓವರ್‌ಗಳಲ್ಲಿ ಪಂದ್ಯವನ್ನು ಗೆದ್ದು ಬೀಗಿತು.
ಟಾಟಾ ಕಾರಿಗೆ ಡೆಂಟ್!
ಈ ಪಂದ್ಯದಲ್ಲಿ ಗ್ರೀನ್ ಹೊಡೆದ ಸಿಕ್ಸರ್‌ನಿಂದ ಮೈದಾನದಲ್ಲಿ ಪ್ರದರ್ಶನಕ್ಕಿಟ್ಟಿದ್ದ ಟಾಟಾ ಸಿಯಾರಾ ಕಾರು ಹಾನಿಗೊಳಗಾಯಿತು. ಕೆಕೆಆರ್ ಇನ್ನಿಂಗ್ಸ್‌ನ 13ನೇ ಓವರ್‌ನಲ್ಲಿ ಈ ಘಟನೆ ನಡೆಯಿತು. ಈ ಓವರ್ ಮಾಡುತ್ತಿದ್ದ ಜಿಟಿ ಬೌಲರ್ ಅಶೋಕ್ ಶರ್ಮಾ ಅವರ ಮೂರನೇ ಎಸೆತದಲ್ಲಿ ಡೀಪ್ ಸ್ಕ್ವೇರ್ ಲೆಗ್ ಕಡೆ ಗ್ರೀನ್ ಸಿಕ್ಸ್ ಹೊಡೆದರು. ಬಾಲ್ ನೇರವಾಗಿ ಟಾಟಾ ಕಾರಿಗೆ ಬಿದ್ದು, ಮುಂಭಾಗದಲ್ಲಿ ಡ್ಯಾಮೇಜ್ ಆಯಿತು.
ಕಾರು ಡ್ಯಾಮೇಜ್ ಆದ್ರೂ 5 ಲಕ್ಷ ರೂ.!
ಲೀಗ್‌ನ ಪ್ರಮುಖ ಪ್ರಾಯೋಜಕರಾದ ಟಾಟಾ ವಿಶೇಷ ನಿಯಮವನ್ನು ಜಾರಿಯಲ್ಲಿರಿಸಿದೆ. ಆಟಗಾರನೊಬ್ಬ ಹೊಡೆದ ಚೆಂಡು ಮೈದಾನದಲ್ಲಿ ಪ್ರದರ್ಶನಕ್ಕಿಟ್ಟಿರುವ ಕಾರಿನ ಗ್ಲಾಸ್ ಒಡೆದರೆ ಅಥವಾ ಡ್ಯಾಮೇಜ್ ಮಾಡಿದರೆ, ಕಂಪನಿಯು ಕ್ರಿಕೆಟ್ ಅಭಿವೃದ್ಧಿಗಾಗಿ ಸ್ವಯಂಸೇವಾ ಸಂಸ್ಥೆಗಳಿಗೆ 5ರಿಂದ 10 ಲಕ್ಷ ರೂ.ಗಳ ಹಣವನ್ನು ದೇಣಿಗೆ ರೂಪದಲ್ಲಿ ನೀಡುತ್ತದೆ. ಮತ್ತು ಗ್ರೀನ್ ಹೊಡೆದ ಸಿಕ್ಸರ್ ಹಾನಿಗೊಳಿಸಿದ ಕಾರಣ, ಟಾಟಾ ಮೋಟಾರ್ಸ್ ತಳಮಟ್ಟದ ಕ್ರಿಕೆಟ್ ಅಭಿವೃದ್ಧಿಗಾಗಿ 5 ಲಕ್ಷ ರೂ. ಕೊಡಲಿದೆ ಎಂಬುದು ನಿಜಕ್ಕೂ ಗಮನಾರ್ಹ,(ಏಜೆನ್ಸೀಸ್).