ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯ
- 3ನೇ ಏಕದಿನ ಪಂದ್ಯದಲ್ಲಿ ಅರ್ಷದೀಪ್ ಸಿಂಗ್ ಕಮಾಲ್
- ಕೊನೆಯ ಪಂದ್ಯದಲ್ಲಿ ಕಮ್ಬ್ಯಾಕ್, ಅದ್ಭುತ ಪ್ರದರ್ಶನ
- ಸ್ಥಾನ ಕೊಡದ ಗೌತಮ್ ಗಂಭೀರ್ ವಿರುದ್ಧ ನೆಟ್ಟಿಗರಿಂದ ಟೀಕೆಗಳು
ಇಂದೋರ್: ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಕೊನೆಯ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಟೀಮ್ ಇಂಡಿಯಾ ಉತ್ತಮ ಆರಂಭವನ್ನೇ ಪಡೆದುಕೊಂಡಿದೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಶುಭಮನ್ ಗಿಲ್ ಪಡೆ, ಕಿವೀಸ್ಗೆ ಬ್ಯಾಟಿಂಗ್ ಮಾಡುವಂತೆ ಆಹ್ವಾನಿಸಿತು. ಅಂತೆಯೇ ಕ್ರೀಸ್ಗಿಳಿದ ನ್ಯೂಜಿಲೆಂಡ್ನ ಸ್ಟಾರ್ ಓಪನರ್ಸ್ಗಳಾದ ಡೆವಾನ್ ಕಾನ್ವೆ ಮತ್ತು ಹೆನ್ರಿ ನಿಕೋಲ್ಸ್ ಟೀಮ್ ಇಂಡಿಯಾ ವೇಗಿಗಳ ಆರ್ಭಟಕ್ಕೆ ತತ್ತರಿಸಿದರು.
ಮೊದಲ ಎರಡು ಪಂದ್ಯಗಳಿಂದ ಅರ್ಷದೀಪ್ ಸಿಂಗ್ರನ್ನು ಕೈಬಿಟ್ಟಿದ್ದ ಕೋಚ್ ಗೌತಮ್ ಗಂಭೀರ್ ನೇತೃತ್ವದ ಮ್ಯಾನೇಜ್ಮೆಂಟ್, ಮೂರನೇ ಪಂದ್ಯಕ್ಕೆ ತಂಡದಲ್ಲಿ ಸ್ಥಾನ ನೀಡಿತು. ಅದಕ್ಕೆ ತಕ್ಕಂತೆ, ಸಿಂಗ್ ತಾವು ಮಾಡಿದ ಮೊದಲ ಓವರ್ನಲ್ಲೇ ಹೆನ್ರಿ ಅವರ ವಿಕೆಟ್ ಪಡೆದರು. ಅವರ ಬೆನ್ನಲ್ಲೇ ಎರಡನೇ ಓವರ್ನ ಮೊದಲ ಬಾಲ್ನಲ್ಲಿ ಹರ್ಷಿತ್ ರಾಣಾ, ಕಾನ್ವೆ ಅವರ ವಿಕೆಟ್ ಕಬಳಿಸಿದರು.
ಗೌತಿಗೆ ತಪ್ಪದ ಛೀಮಾರಿ
ಅರ್ಷದೀಪ್ ಸಿಂಗ್ ಒಬ್ಬ ಅದ್ಭುತ್ ಬೌಲರ್. ಆತನಿಗೆ ತಂಡದಲ್ಲಿ ಸ್ಥಾನ ಕೊಡುವ ಮೂಲಕ ಅವನಲ್ಲಿರುವ ಕೌಶಲ್ಯವನ್ನು ಹೆಚ್ಚಿಸಬೇಕು. ಈ ವಿಷಯದಲ್ಲಿ ಗೌತಮ್ ಗಂಭೀರ್ ಮತ್ತು ಅವರ ಮ್ಯಾನೇಜ್ಮೆಂಟ್ ಮಾಡುತ್ತಿರುವ ನಿರ್ಧಾರ ಸರಿಯಿಲ್ಲ. ವಿಕೆಟ್ ಕಿತ್ತುಬಿಸಾಡುವ ವೇಗಿಗೆ ಅವಕಾಶ ಕೊಡುವುದು ಒಳಿತೇ ವಿನಃ ಮೂಲೆಯಲ್ಲಿ ಕೂರಿಸಿ, ತುಕ್ಕು ಹಿಡಿಯುವಂತೆ ಮಾಡುವುದಲ್ಲ ಎಂದು ಮಾಜಿ ಕ್ರಿಕೆಟಿಗ ಆರ್. ಅಶ್ವಿನ್ ಕಿಡಿಕಾರಿದ್ದರು.
ನಾಚಿಕೆಗೇಡಿನ...
ಮೂರನೇ ಪಂದ್ಯದಲ್ಲಿ ಕಮ್ಬ್ಯಾಕ್ ಮಾಡಿದ್ದೇ ತಡ, ಕಿವೀಸ್ ಪಡೆಯ ಆರಂಭಿಕನ ವಿಕೆಟ್ ಪಡೆದು ಅರ್ಷದೀಪ್ ಮಿಂಚಿದರು. ಇದನ್ನು ನೋಡ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಗೌತಮ್ ಗಂಭೀರ್ ವಿರುದ್ಧ ಟೀಕೆಗಳನ್ನು ಹರಿಸಿದ ನೆಟ್ಟಿಗರು, ಬಂದ ತಕ್ಷಣ ವಿಕೆಟ್ ಕಬಳಿಸಿದ ಸಿಂಗ್ಗೆ ಅವಕಾಶ ಕೊಡಲು ಗಂಭೀರ್ ಹಿಂದೇಟು ಹಾಕುತ್ತಾರೆ. ಇದು ನಾಚಿಕೆಗೇಡಿನ ಸಂಗತಿ ಎಂದೆಲ್ಲ ಟ್ವೀಟ್ ಮಾಡಿದ್ದಾರೆ,(ಏಜೆನ್ಸೀಸ್).